
ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.
ಗಂಗಾವತಿ: ನಗರದ ಮುಕುಟಪ್ರಾಯ ಹಾಗೂ ಪ್ರಮುಖ ಹೆಗ್ಗುರುತಾಗಿರುವ ರಸ್ತೆಯೇ ಇಂದು ಅಕ್ಷರಶಃ ಕತ್ತಲ ಕೂಪವಾಗಿ ಮಾರ್ಪಟ್ಟಿದೆ. ನಗರದ ಜೀವನಾಡಿಯಾಗಿರುವ ಈ ಮಾರ್ಗವು ಕೇವಲ ಸ್ಥಳೀಯ ಸಂಪರ್ಕ ರಸ್ತೆಯಲ್ಲ; ವಿಶ್ವವಿಖ್ಯಾತ ಹಂಪಿ, ಆನೆಗುಂದಿ, ಕಿಷ್ಕಿಂಧಾ ಅಂಜನಾದ್ರಿ ಬೆಟ್ಟ, ಹುಲಿಗಿ ಹಾಗೂ ಹೊಸಪೇಟೆ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದೆ. ದಿನದ 24 ಗಂಟೆಯೂ ವಾಹನ ಸವಾರರು, ಪ್ರವಾಸಿಗರು ಹಾಗೂ ಸಾರ್ವಜನಿಕರಿಂದ ಗಿಜಿಗುಡುವ ಈ ರಸ್ತೆಯೇ ಇದೀಗ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ಬಸ್ ನಿಲ್ದಾಣದಿಂದ ಸಾಯಿನಗರದವರೆಗೆ ಸಾಗುವ ಈ ರಸ್ತೆಯುದ್ದಕ್ಕೂ ತಾಲೂಕು ಆಡಳಿತ ಸೌಧ, ಮಕ್ಕಳ ಆಸ್ಪತ್ರೆ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಪ್ರಥಮ ದರ್ಜೆ ಕಾಲೇಜು, ಐಟಿಐ, ಖಾಸಗಿ ನರ್ಸಿಂಗ್ ಕಾಲೇಜುಗಳು, ನ್ಯಾಯಾಧೀಶರ ನಿವಾಸ, ಸರ್ಕಿಟ್ ಹೌಸ್ ಸೇರಿದಂತೆ ಹಲವು ಪ್ರಮುಖ ಕಚೇರಿಗಳು ಹಾಗೂ ಸಂಸ್ಥೆಗಳಿವೆ. ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮತ್ತು ಸಾಯಿಬಾಬಾ ಮಂದಿರಗಳಿಗೂ ಇದೇ ಪ್ರಮುಖ ದಾರಿಯಾಗಿದೆ. ಪ್ರತಿನಿತ್ಯ ಗಣ್ಯರು, ಸರ್ಕಾರಿ ಅಧಿಕಾರಿಗಳು ಹಾಗೂ ಸಾವಿರಾರು ಸಾರ್ವಜನಿಕರು ಸಂಚರಿಸುವ ರಸ್ತೆಯಲ್ಲೇ ಮೂಲಸೌಕರ್ಯ ವ್ಯವಸ್ಥೆ ಹದಗೆಟ್ಟಿರುವುದು ವಿಪರ್ಯಾಸವಾಗಿದೆ.
ಲಲಿತಾ ಮಹಲ್ ಹೋಟೆಲ್ನಿಂದ ಮತ್ತು ತಹಶೀಲ್ದಾರ್ ಆಫೀಸ್ ಕೊಲ್ಲಿ ನಾಗೇಶ್ವರರಾವ್ ಕಾಲೇಜಿನವರೆಗೆ ರಸ್ತೆಯುದ್ದಕ್ಕೂ ಹಲವು ಬೀದಿ ದೀಪಗಳು ಸುಮಾರು ತಿಂಗಳುಗಳಿಂದ ಮತ್ತು ಅದಕ್ಕೂ ಹೆಚ್ಚು ದಿನಗಳಿಂದ ಉರಿಯುತ್ತಿಲ್ಲ ಎನ್ನಲಾಗಿದ್ದು, ರಾತ್ರಿ ವೇಳೆ ಸಂಪೂರ್ಣ ಕತ್ತಲು ಆವರಿಸುತ್ತಿದೆ. ವಾಹನ ಸವಾರರು ತಮ್ಮ ವಾಹನಗಳ ಹೆಡ್ಲೈಟ್ಗಳನ್ನೇ ನಂಬಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಬದಿಯಲ್ಲಿರುವ ಪಿಜಿ ಮತ್ತು ಹಾಸ್ಟೆಲ್ಗಳಲ್ಲಿ ನೂರಾರು ವಿದ್ಯಾರ್ಥಿನಿಯರು ಹಾಗೂ ಉದ್ಯೋಗಸ್ಥ ಮಹಿಳೆಯರು ವಾಸಿಸುತ್ತಿದ್ದು, ಸಂಜೆಯ ನಂತರ ಈ ಭಾಗದಲ್ಲಿ ಸಂಚರಿಸಲು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಧಾರ್ಮಿಕ ದಿನಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ಈ ರಸ್ತೆಯಲ್ಲಿ ಜನದಟ್ಟಣೆ ಮತ್ತಷ್ಟು ಹೆಚ್ಚುತ್ತದೆ. ಗುರುಪೂರ್ಣಿಮೆ, ಅಮಾವಾಸ್ಯೆ, ಹುಣ್ಣಿಮೆ ಸೇರಿದಂತೆ ವಿವಿಧ ದಿನಗಳಲ್ಲಿ ದೇವಸ್ಥಾನಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಾರೆ. ಹನುಮ ಮಾಲೆ ಪೂರ್ಣಗೊಂಡ ಬಳಿಕ ಅಯ್ಯಪ್ಪ ಮಾಲಾಧಾರಿಗಳ ವ್ರತಾಚರಣೆ ಇಷ್ಟರಲ್ಲಿ ಆರಂಭವಾಗುತ್ತದೆ. ನಸುಕಿನ ಜಾವದಲ್ಲೇ ಭಕ್ತರು ದೇವಸ್ಥಾನಗಳತ್ತ ತೆರಳುತ್ತಿದ್ದಾರೆ. ಮತ್ತೊಂದೆಡೆ ತುರ್ತು ಸಂದರ್ಭಗಳಲ್ಲಿ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯುವ ಕುಟುಂಬಗಳಿಗೂ ಕತ್ತಲ ರಸ್ತೆ ತೊಂದರೆಯಾಗಿ ಪರಿಣಮಿಸಿದೆ.
ಬೀದಿ ದೀಪಗಳ ಸಮಸ್ಯೆ ಕುರಿತು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ದೂರುಗಳನ್ನು ದಾಖಲಿಸುತ್ತಿದ್ದರೂ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಕತ್ತಲೆಯ ಲಾಭ ಪಡೆದು ಅಹಿತಕರ ಘಟನೆಗಳು, ಅಪಘಾತಗಳು ಹಾಗೂ ಕಳ್ಳತನದಂತಹ ಘಟನೆಗಳು ಸಂಭವಿಸುವ ಮುನ್ನವೇ ಆಡಳಿತ ಎಚ್ಚೆತ್ತುಕೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ. “ಮೂಲಭೂತ ಸೌಕರ್ಯ ಒದಗಿಸಲು ದೊಡ್ಡ ದುರಂತವೇ ಸಂಭವಿಸಬೇಕೇ?” ಎಂದು ಸ್ಥಳೀಯರು ಪ್ರಶ್ನಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಾದರೂ ನಗರಸಭೆ, ಬೆಸ್ಕಾಂ ಹಾಗೂ ತಾಲೂಕು ಆಡಳಿತ ಸಮನ್ವಯದಿಂದ ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಕೆಟ್ಟು ನಿಂತಿರುವ ಬೀದಿ ದೀಪಗಳನ್ನು ಕೂಡಲೇ ದುರಸ್ತಿಗೊಳಿಸುವುದರ ಜತೆಗೆ ಅಗತ್ಯವಿರುವ ಕಡೆ ಹೊಸ ಎಲ್ಇಡಿ ದೀಪಗಳನ್ನು ಅಳವಡಿಸಿ ಇಡೀ ಮಾರ್ಗವನ್ನು ಬೆಳಗಿಸಬೇಕು. ನಗರದ ಜೀವನಾಡಿಯಾಗಿರುವ ಈ ರಸ್ತೆಗೆ ಬೆಳಕು ನೀಡುವುದು ಕೇವಲ ಸೌಂದರ್ಯದ ಪ್ರಶ್ನೆಯಲ್ಲ; ಸಾರ್ವಜನಿಕರ ಸುರಕ್ಷತೆ ಮತ್ತು ನಗರದ ಗೌರವದ ಪ್ರಶ್ನೆಯಾಗಿದೆ. ಆಡಳಿತ ಇನ್ನಾದರೂ ಎಚ್ಚೆತ್ತುಕೊಂಡು ಜನರ ಆತಂಕಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ.