Home ಸುದ್ದಿ ತುಂಗಭದ್ರಾ ತಟದಲ್ಲಿ ಕಾಶಿಯ ಗಂಗಾ ಆರತಿಯ ವೈಭವ: ಭಕ್ತಿಭಾವದಲ್ಲಿ ಮಿಂದೆದ್ದ ಹುಲಿಗೇಮ್ಮ ದೇವಿ ಕ್ಷೇತ್ರ.
ಸುದ್ದಿ

ತುಂಗಭದ್ರಾ ತಟದಲ್ಲಿ ಕಾಶಿಯ ಗಂಗಾ ಆರತಿಯ ವೈಭವ: ಭಕ್ತಿಭಾವದಲ್ಲಿ ಮಿಂದೆದ್ದ ಹುಲಿಗೇಮ್ಮ ದೇವಿ ಕ್ಷೇತ್ರ.

Share
Share

ಮರ್ಚೆಡ್ ಡೇಸ್ ವಿಶೇಷ ಸುದ್ದಿ|ಹುಲಿಗಿ.

ಕೊಪ್ಪಳ, ಸೆ. 8: ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಹುಲಿಗೇಮ್ಮ ದೇವಿ ಸನ್ನಿಧಿಯ ತುಂಗಭದ್ರಾ ನದಿ ತಟದಲ್ಲಿ ಮಂಗಳವಾರ ತುಂಗಭದ್ರಾ ಆರತಿ ಮಹೋತ್ಸವವು ಅತ್ಯಂತ ವಿಜೃಂಭಣೆ ಹಾಗೂ ಭಕ್ತಿಭಾವದಿಂದ ನೆರವೇರಿತು. ಕಾಶಿ ವಾರಣಾಸಿಯಲ್ಲಿ ನಡೆಯುವ ವಿಶ್ವಪ್ರಸಿದ್ಧ ಗಂಗಾ ಆರತಿಯ ಮಾದರಿಯಲ್ಲಿ ಆಯೋಜಿಸಲಾಗಿದ್ದ ಈ ಧಾರ್ಮಿಕ ಕಾರ್ಯಕ್ರಮವು ಸಾವಿರಾರು ಭಕ್ತರ ಗಮನ ಸೆಳೆಯಿತು.

ವಾರಣಾಸಿಯಿಂದ ಆಗಮಿಸಿದ್ದ ರಣಧೀರ ಆಚಾರ ಅವರ ನೇತೃತ್ವದ 11 ನುರಿತ ಅರ್ಚಕರ ತಂಡವು ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ತುಂಗಭದ್ರಾ ನದಿಗೆ ಮಹಾಮಂಗಳಾರತಿ ನೆರವೇರಿಸಿತು. ಮಂತ್ರಘೋಷ, ವೇದಪಠಣ ಹಾಗೂ ದೀಪಗಳ ಝಗಮಗಿಸುವ ಬೆಳಕಿನಿಂದ ತುಂಗಭದ್ರಾ ನದಿ ತಟವು ಆಧ್ಯಾತ್ಮಿಕ ವಾತಾವರಣದಿಂದ ಕಂಗೊಳಿಸಿತು. ಕಾಶಿಯ ಗಂಗಾ ತೀರದಲ್ಲಿರುವ ಅನುಭವವೇ ತುಂಗಭದ್ರಾ ತಟದಲ್ಲೂ ಮೂಡಿಬಂದಂತಿತ್ತು.

ತುಂಗಭದ್ರಾ ಆರತಿಗೂ ಮುನ್ನ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಕೆ.ಎಸ್. ಬಸವಂತಪ್ಪ, ಕೊಪ್ಪಳ ಸಂಸದ ಕೆ. ರಾಜಶೇಖರ ಹಿಟ್ನಾಳ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಸೇರಿದಂತೆ ಜನಪ್ರತಿನಿಧಿಗಳು ತುಂಗಭದ್ರಾ ನದಿಗೆ ಆರತಿ ಬೆಳಗಿ ಬಾಗಿನ ಸಮರ್ಪಿಸಿದರು. ಬಳಿಕ ನದಿ ದಡದಲ್ಲಿ ಪ್ರತಿಷ್ಠಾಪಿಸಲಾಗಿದ್ದ ದೇವಸ್ಥಾನದ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ನಮನ ಸಲ್ಲಿಸಿದರು.

ಮಹೋತ್ಸವದ ಅಂಗವಾಗಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವೂ ನಡೆಯಿತು. ಇದಲ್ಲದೆ ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನದಿ ತಟದ ವೇದಿಕೆಯಲ್ಲಿ ಜರುಗಿ ನೆರೆದಿದ್ದ ಭಕ್ತರ ಮನಸೂರೆಗೊಂಡವು. ಧಾರ್ಮಿಕ ಆಚರಣೆ ಮತ್ತು ಸಾಂಸ್ಕೃತಿಕ ವೈಭವದ ಸಂಗಮವಾಗಿ ಕಾರ್ಯಕ್ರಮ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಪಂಚಮಸಾಲಿ ಜಗದ್ಗುರು ಪೀಠ ಹರಿಹರದ ವಚನಾನಂದ ಸ್ವಾಮೀಜಿ, ವಿನಯ್ ಗುರೂಜಿ ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು. ಸಚಿವರು, ಶಾಸಕರು ಹಾಗೂ ಇತರೆ ಗಣ್ಯರು ತುಂಗಭದ್ರಾ ಆರತಿ ಮಹೋತ್ಸವದ ಮಹತ್ವದ ಕುರಿತು ಮಾತನಾಡಿ, ನದಿ ಹಾಗೂ ಧಾರ್ಮಿಕ ಪರಂಪರೆಯ ಸಂರಕ್ಷಣೆಯ ಅಗತ್ಯವನ್ನು ಪ್ರತಿಪಾದಿಸಿದರು.

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ ಎಂ., ಮಾಜಿ ಸಂಸದ ಕರಡಿ ಸಂಗಣ್ಣ, ಮುನಿರಾಬಾದ್ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ–ತುಂಗಭದ್ರಾ ಯೋಜನೆ ಅಧ್ಯಕ್ಷ ಹಸನಸಾಬ ನಭಿಸಾಬ ದೋಟಿಹಾಳ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೆಗೀ, ಸಹಾಯಕ ಆಯುಕ್ತ ಮಹೇಬೂಬ್ ಜೀಲಾನ್, ಶ್ರೀ ಹುಲಿಗೇಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಎಚ್. ಪ್ರಕಾಶ್ ರಾವ್ ಸೇರಿದಂತೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು. ತುಂಗಭದ್ರಾ ನದಿಗೆ ಆರತಿ ಬೆಳಗಿದ ಕ್ಷಣವು ಭಕ್ತರ ಪಾಲಿಗೆ ಮಹೋತ್ಸವದ ಅವಿಸ್ಮರಣೀಯ ಕ್ಷಣವಾಗಿ ಪರಿಣಮಿಸಿತು.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...