
ಮರ್ಚೆಡ್ ಡೇಸ್ ಸುದ್ದಿ|ಕುಷ್ಟಗಿ ವಿರುಪಾಪುರ.
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ವಿರುಪಾಪುರ ಗ್ರಾಮದ ಶ್ರೀ ಗುಡ್ಡದ ಮಾರುತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ಎತ್ತುಗಳ ದಿಂಡಿನ ಮೇಲೆ ಉಸುಕಿನ ಚೀಲ ಎಳೆಯುವ ಸ್ಪರ್ಧೆಯನ್ನು ಆಯೋಜಿಸಲಾಯಿತು. ಗ್ರಾಮೀಣ ಸೊಗಡಿನ ಈ ಸಾಂಪ್ರದಾಯಿಕ ಕ್ರೀಡೆಯನ್ನು ಕಣ್ತುಂಬಿಕೊಳ್ಳಲು ಮುಂಜಾನೆಯಿಂದಲೇ ಕ್ರೀಡಾಂಗಣಕ್ಕೆ ಸಾಗರೋಪಾದಿಯಲ್ಲಿ ಜಮಾಯಿಸಿದ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ರೈತರು ಅತ್ಯಂತ ಕುತೂಹಲದಿಂದ ಪಂದ್ಯಾವಳಿಯನ್ನು ವೀಕ್ಷಿಸಿದರು.
ಸ್ಪರ್ಧೆ ಕಣದಲ್ಲಿ ಆರಂಭವಾಗುತ್ತಿದ್ದಂತೆ ರೋಮಾಂಚನ ಉತ್ತುಂಗಕ್ಕೇರಿತು. ಎತ್ತುಗಳಿಗೆ ಕಟ್ಟಿದ ಕುಂಟೆ ದಿಂಡಿನ ಮೇಲಿದ್ದ ಉಸುಕಿನ ಚೀಲವನ್ನು ಪ್ರಾಣಿಗಳು ಎಳೆಯುತ್ತಾ ಮುನ್ನುಗ್ಗುತ್ತಿದ್ದಾಗ, ಅದರ ಮೇಲೆ ನಿಂತವರು ಸಮತೋಲನ ಕಾಯ್ದುಕೊಳ್ಳಲು ಹರಸಾಹಸ ಪಟ್ಟರು. ಯುವಕರ ಕೇಕೆ, ಚಪ್ಪಾಳೆ ಬಹುಪರಾಕ್ ಮತ್ತು ಪ್ರೋತ್ಸಾಹದ ಘೋಷಣೆಗಳ ನಡುವೆ, ಎತ್ತುಗಳ ಮಾಲೀಕರು “ನಾವೇ ಗೆಲ್ಲಬೇಕು” ಎಂಬ ಅದಮ್ಯ ಉತ್ಸಾಹದಿಂದ ಜಿದ್ದಾಜಿದ್ದಿನ ಪೈಪೋಟಿ ನಡೆಸಿ ನೆರೆದಿದ್ದವರಲ್ಲಿ ರೋಮಾಂಚನ ಮೂಡಿಸಿದರು.
ತೀವ್ರ ಪೈಪೋಟಿಯಿಂದ ಕೂಡಿದ ಈ ಸ್ಪರ್ಧೆಯಲ್ಲಿ ಎತ್ತುಗಳ ಶಕ್ತಿ ಹಾಗೂ ರೈತರ ಸಮತೋಲನಕ್ಕೆ ತಕ್ಕ ಫಲಿತಾಂಶ ಲಭಿಸಿತು. ಸಿಡ್ಲಬಾವಿಯ ಹನುಮೇಶ ಎನ್. ಅವರ ಎತ್ತುಗಳು ಕೇವಲ 50 ಸೆಕೆಂಡ್ 22 ಪಲ್ಸ್‌ನಲ್ಲಿ ನಿಗದಿತ ದೂರ ಕ್ರಮಿಸಿ ಪ್ರಥಮ ಸ್ಥಾನ ಪಡೆದವು. ಕನಕಗಿರಿಯ ಹುಸೇನ್ ಸಾಬ್ ಅವರ ಎತ್ತುಗಳು 59 ಸೆಕೆಂಡ್ 33 ಪಲ್ಸ್ ದಾಖಲಿಸಿ ದ್ವಿತೀಯ ಬಹುಮಾನ ಗಳಿಸಿದರೆ, ಗಂಗನಾಳದ ಬಾಳಪ್ಪ ಪ್ರಧಾನಿ ಅವರ ಎತ್ತುಗಳು 1 ನಿಮಿಷ 66 ಪಲ್ಸ್‌ನಲ್ಲಿ ಗುರಿ ತಲುಪಿ ತೃತೀಯ ಬಹುಮಾನವನ್ನು ಮುಡಿಗೇರಿಸಿಕೊಂಡವು.
ಇಂದಿನ ಆಧುನಿಕ ಯುಗದಲ್ಲೂ ಹಳ್ಳಿಗಳ ಸಾಂಸ್ಕೃತಿಕ ಕ್ರೀಡೆಗಳ ಗತ್ತು ಮತ್ತು ವೈಭವ ಕಿಂಚಿತ್ತೂ ಕುಂದಿಲ್ಲ ಎಂಬುದಕ್ಕೆ ಈ ಸ್ಪರ್ಧೆ ಸಾಕ್ಷಿಯಾಯಿತು. ರೈತರ ಶಕ್ತಿ, ಜಾನಪದ ಹುಮ್ಮಸ್ಸು ಹಾಗೂ ಮೂಕ ಪ್ರಾಣಿಗಳ ಸಹಯೋಗದ ಈ ಸಾಹಸ ಕ್ರೀಡೆಯು ನೆರೆದಿದ್ದ ಅಪಾರ ಜನಸ್ತೋಮದ ಅಪಾರ ಮೆಚ್ಚುಗೆಗೆ ಪಾತ್ರವಾಗಿ ಜಾತ್ರೆಯ ರಂಗನ್ನು ಇಮ್ಮಡಿಗೊಳಿಸಿತು.