ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.
ಗಂಗಾವತಿ: ನಗರದ ಮಹಾನ್ ಕಿಡ್ಸ್ ಶಾಲೆಯಲ್ಲಿ ನೂಲ ಹುಣ್ಣಿಮೆ ಹಾಗೂ ರಕ್ಷಾಬಂಧನ ಹಬ್ಬವನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳಲ್ಲಿ ಕೇವಲ ಪಠ್ಯ ಜ್ಞಾನ ಮಾತ್ರವಲ್ಲದೆ, ನಮ್ಮ ನಾಡಿನ ಪರಂಪರೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಮಹತ್ವವನ್ನು ಪರಿಚಯಿಸುವ ಸದುದ್ದೇಶದಿಂದ ಈ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶಾಲೆಯ ಪುಟಾಣಿ ವಿದ್ಯಾರ್ಥಿನಿಯರು ತಮ್ಮ ಸಹೋದರ ಸಮಾನ ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ರಾಖಿ ಕಟ್ಟಿ ಶುಭ ಹಾರೈಸಿದರು. ಪರಸ್ಪರ ಪ್ರೀತಿ, ರಕ್ಷಣೆ ಮತ್ತು ಭ್ರಾತೃತ್ವದ ಸಂದೇಶ ಸಾರಿದ ವಿದ್ಯಾರ್ಥಿನಿಯರು ಸಹೋದರರಿಗೆ ಸಿಹಿ ತಿನ್ನಿಸಿ ಸಂತಸ ಹಂಚಿಕೊಂಡರು. ಇದಕ್ಕೆ ಪ್ರತಿಯಾಗಿ ಸಹೋದರ ವಿದ್ಯಾರ್ಥಿಗಳು ತಮ್ಮ ಸಹೋದರಿಯರಿಗೆ ಉಡುಗೊರೆಗಳನ್ನು ನೀಡಿ ಹಬ್ಬದ ಸಡಗರವನ್ನು ಇಮ್ಮಡಿಗೊಳಿಸಿದರು.
ಇಂದಿನ ಆಧುನಿಕ ದಿನಗಳಲ್ಲಿ ಮಕ್ಕಳಿಗೆ ಎಳೆಯ ವಯಸ್ಸಿನಲ್ಲೇ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಕಲಿಸುವುದು ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಈ ಆಚರಣೆಯು ಮಕ್ಕಳಲ್ಲಿ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಕುಟುಂಬ ಬಾಂಧವ್ಯದ ಮಹತ್ವವನ್ನು ಪ್ರಾಯೋಗಿಕವಾಗಿ ಕಲಿಸುವ ಉತ್ತಮ ವೇದಿಕೆಯಾಗಿ ಮೂಡಿಬಂತು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸವಿತಾ ಅವರು ನೂಲ ಹುಣ್ಣಿಮೆ ಹಾಗೂ ರಕ್ಷಾಬಂಧನದ ಹಿನ್ನೆಲೆ ಮತ್ತು ಮಹತ್ವವನ್ನು ಮಕ್ಕಳಿಗೆ ಸರಳವಾಗಿ ವಿವರಿಸಿ, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಪೂರ್ಣಿಮಾ, ಕುಮುದಿನಿ, ಅಶ್ವಿನಿ, ಚಂಪಾರಾಣಿ, ಸಹನ, ಶಾಂತ, ಅರುಣ, ಜ್ಯೋತಿ, ದೀಪ, ರೇಷ್ಮಾ, ಶಿಲ್ಪ, ಮುಬಿನ, ಸವಿತಾ, ಇಂದು, ಮುಸ್ಕಾನ್, ಪೌಜಿಯ ಹಾಗೂ ಶಿಕ್ಷಕರಾದ ಸಿದ್ದೇಶ್ ಕುಮಾರ್, ಪಂಪಾಪತಿ, ಈರಯ್ಯ, ಕನಕರಾಯ ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದರು.