
ಮರ್ಚೆಡ್ ಡೇಸ್ ಸುದ್ದಿ|ಕಲಬುರಗಿ.
ಕಲಬುರಗಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಕಲಬುರಗಿಯ ರಾಮಮಂದಿರ ಹತ್ತಿರದ ಮಾನಕರ್ ಬಡಾವಣೆಯಲ್ಲಿರುವ ಬಿಸಿಲು ಆರ್ಟ ಗ್ಯಾಲರಿಯಲ್ಲಿ ಯುವ ಚಿತ್ರಕಲಾವಿದ ಸುರೇಶ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಹಿರಿಯ ಚಿತ್ರ ಹಾಗೂ ಶಿಲ್ಪಕಲಾವಿದ ಬಾಬುರಾವ್ ಎಚ್ ಅವರು ಉದ್ಘಾಟಿಸಿದರು. ಭಾವನೆಗಳ ಅಭಿವ್ಯಕ್ತಿಗೆ ಚಿತ್ರಕಲಾ ಮಾಧ್ಯಮ ಅತ್ಯಂತ ಸಮರ್ಥವಾಗಿದ್ದು, ಪ್ರಸ್ತುತ ದಿನಗಳಲ್ಲಿ ಸತ್ಯವನ್ನು ಚಿತ್ರಿಸುವ ಹಾಗೂ ಬಿಂಬಿಸುವ ಮಹತ್ವದ ಮನೋಭಾವನೆಯನ್ನು ಕಲಾವಿದರು ಬೆಳೆಸಿಕೊಳ್ಳಬೇಕೆಂದು ಅವರು ಈ ವೇಳೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಬಾಬುರಾವ್ ಎಚ್, ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನದ ವೇಗದ ಯುಗದಲ್ಲಿ ಸಮಾಜದಲ್ಲಿ ಕೆಲವೆಡೆ ಮೂಢನಂಬಿಕೆ ಹಾಗೂ ಭ್ರಮೆಗಳು ಬಿತ್ತಲ್ಪಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಇಂತಹ ಸುಳ್ಳುಗಳ ಪ್ರಚಾರ ಹೆಚ್ಚುತ್ತಿರುವ ಸಂದರ್ಭದಲ್ಲಿ ಸಮಾಜದ ಮುಖವಾಣಿಯಾಗಿರುವ ದೃಶ್ಯಕಲಾವಿದರು ಮತ್ತು ಸಾಹಿತಿಗಳು ವೈಜ್ಞಾನಿಕ ಚಿಂತನೆಗಳ ಮೂಲಕ ಸತ್ಯವನ್ನು ಜನತೆಗೆ ತಲುಪಿಸುವ ಜವಾಬ್ದಾರಿಯನ್ನು ಅತ್ಯಂತ ಗಂಭೀರವಾಗಿ ನಿರ್ವಹಿಸಬೇಕಾಗಿದೆ ಎಂದರು.
ಕಲಾಕೃತಿಗಳನ್ನು ಕುರಿತು ಮಾತನಾಡಿದ ಹಿರಿಯ ಚಿತ್ರಕಲಾವಿದ ಹಾಗೂ ಶಿಕ್ಷಕ ಸೂರ್ಯಕಾಂತ ನಂದೂರ, ಯುವ ಕಲಾವಿದ ಸುರೇಶ್ ತಮ್ಮ ವಿಭಿನ್ನ ಕಲ್ಪನೆ ಮತ್ತು ಚಿಂತನೆಗಳ ಮೂಲಕ ಸಮಾಜದ ವಿವಿಧ ಸಂಗತಿಗಳನ್ನು ಕಲಾಕೃತಿಗಳಲ್ಲಿ ಮೂಡಿಸಿ ಸಂಚಲನ ಮೂಡಿಸುತ್ತಿದ್ದಾರೆ ಎಂದರು. ಕೇವಲ ಮಾಧ್ಯಮ, ಆಕಾರ, ಬಣ್ಣಗಳ ಬಳಕೆ ಮಾತ್ರವಲ್ಲದೆ ಸಮಾಜವನ್ನು ವಿವಿಧ ಆಯಾಮಗಳಲ್ಲಿ ನೋಡುವ ಮನಸ್ಸು ಮುಖ್ಯವಾಗಿದ್ದು, ಯುವ ಕಲಾವಿದರು ಸೃಜನಶೀಲತೆ ಹಾಗೂ ಪ್ರಯೋಗಶೀಲತೆಯ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಿಸಿಲು ಆರ್ಟ ಗ್ಯಾಲರಿಯ ಮುಖ್ಯಸ್ಥ ಹಾಗೂ ಹಿರಿಯ ಚಿತ್ರಕಲಾವಿದ ವಿ.ಬಿ. ಬಿರಾದಾರ, ಚಿತ್ರಕಲೆಯಲ್ಲಿ ಅಗಾಧವಾದ ಸೌಂದರ್ಯದ ಹೊಳವು ಅಡಗಿದೆ ಎಂದು ಅಭಿಪ್ರಾಯಪಟ್ಟರು. ಕಲಾಕೃತಿಗಳನ್ನು ಮುಕ್ತ ಮನಸ್ಸಿನಿಂದ ವೀಕ್ಷಿಸಿದಾಗ ಮಾತ್ರ ಕಣ್ಣಿಗೆ ನಿಜವಾದ ಆನಂದ ಸಿಗುತ್ತದೆ ಎಂದ ಅವರು, ಕಲಾಕೃತಿಗಳ ಮಾರಾಟದ ಆರ್ಥಿಕ ಬೆಲೆಗಿಂತ ಅವುಗಳಲ್ಲಿ ಅಡಗಿರುವ ಆಂತರಿಕ ಸೌಂದರ್ಯ ಮತ್ತು ಪರಿಕಲ್ಪನೆಗೆ ಹೆಚ್ಚಿನ ಮೌಲ್ಯವಿದೆ ಎಂದು ತಿಳಿಸಿದರು.
ಈ ಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಶ್ರೀಶೈಲ ಗುಡೇದ, ಅಂಬಾರಾಯ ಚಿನ್ಮಳ್ಳಿ, ಶೈಲಜ ಬೀರಾದಾರ ಸೇರಿದಂತೆ ಅನೇಕ ಗಣ್ಯ ಕಲಾವಿದರು, ಕಲಾಸಕ್ತರು ಹಾಗೂ ಚಿತ್ರಕಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರದರ್ಶನ ಯಶಸ್ವಿಗೊಳಿಸಿದರು. ಕಾರ್ಯಕ್ರಮದಲ್ಲಿ ಕು. ನಾಗವೇಣ ಪ್ರಾರ್ಥನೆ ಸಲ್ಲಿಸಿ, ಡಾ. ಪರಶುರಾಮ ಸ್ವಾಗತಿಸಿದರೆ, ಮಲ್ಲಿಕಾರ್ಜುನ್ ಮುಗುಳಿ ನಿರೂಪಣೆ ಮಾಡಿದರು ಹಾಗೂ ಮಲ್ಲಿಕಾರ್ಜುನ ಕೋರಳ್ಳಿ ವಂದನಾರ್ಪಣೆ ಸಲ್ಲಿಸಿದರು.