ಮರ್ಚೇಡ್ ಡೇಸ್ ಸುದ್ದಿ.
ರಾಯಚೂರು: ಭವಿಷ್ಯದಲ್ಲಿ ಹೆಣ್ಣುಮಕ್ಕಳನ್ನು ಮಾರಕ ಗರ್ಭಕಂಠದ ಕ್ಯಾನ್ಸರ್ನಿಂದ ರಕ್ಷಿಸುವ ನಿಟ್ಟಿನಲ್ಲಿ ಹ್ಯೂಮನ್ ಪ್ಯಾಪಿಲೋಮ ವೈರಸ್ (ಎಚ್ಪಿವಿ) ಲಸಿಕೆಯು ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ನಂದಿತಾ ಎಮ್.ಎನ್. ತಿಳಿಸಿದ್ದಾರೆ.
ನಗರದ ಬೊಳಮಾನದೊಡ್ಡಿಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಈ ಲಸಿಕೆ ನೀಡುವುದು ಅತ್ಯಗತ್ಯವಾಗಿದ್ದು, ಪಾಲಕರು ಯಾವುದೇ ತಪ್ಪು ಮಾಹಿತಿಗೆ ಕಿವಿಗೊಡದೆ ತಮ್ಮ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಲಸಿಕೆ ಹಾಕಿಸಲು ಮುಂದೆ ಬರಬೇಕೆಂದು ಕರೆ ನೀಡಿದರು.
ಗರ್ಭಕಂಠದ ಕ್ಯಾನ್ಸರ್ ತಡೆಗೆ ಸರ್ಕಾರವು ಜಿಲ್ಲೆಯಾದ್ಯಂತ ಉಚಿತ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದೆ. ಈಗಾಗಲೇ ರಾಯಚೂರಿನ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಸುಮಾರು ಶೇ. 60ರಷ್ಟು ವಿದ್ಯಾರ್ಥಿನಿಯರಿಗೆ ಲಸಿಕೆ ನೀಡಲಾಗಿದ್ದು, ಪೋಷಕರು ಸ್ವಯಂಪ್ರೇರಿತರಾಗಿ ಸಹಕರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಲಸಿಕೆಯ ಕುರಿತಾದ ಸುಳ್ಳು ಸುದ್ದಿಗಳಿಗೆ ಆತಂಕಪಡುವ ಅಗತ್ಯವಿಲ್ಲ ಎಂದು ಡಾ. ನಂದಿತಾ ಸ್ಪಷ್ಟಪಡಿಸಿದರು.
ವೈಯಕ್ತಿಕ ನೈರ್ಮಲ್ಯದ ಕೊರತೆ ಮತ್ತು ಎಚ್ಪಿವಿ ಸೋಂಕು ಕ್ರಮೇಣ ಗರ್ಭಕಂಠದ ಕ್ಯಾನ್ಸರ್ಗೆ ದಾರಿಯಾಗುತ್ತದೆ. ಇದನ್ನು ತಡೆಗಟ್ಟಲು ಲಸಿಕೆಯೊಂದೇ ಸೂಕ್ತ ಮದ್ದು ಎಂದು ವೈದ್ಯಾಧಿಕಾರಿಗಳು ವಿವರಿಸಿದರು. ಈ ಅಭಿಯಾನದ ಭಾಗವಾಗಿ ಅಂದು ಬೊಳಮಾನದೊಡ್ಡಿ ವಸತಿ ಶಾಲೆಯ 36 ವಿದ್ಯಾರ್ಥಿನಿಯರಿಗೆ ಲಸಿಕೆ ನೀಡಲಾಯಿತು. ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಉಚಿತವಾಗಿ ಲಭ್ಯವಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ಪೋಷಕರಿಗೆ ಮನವಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹರಿಜನವಾಡಾ ಮತ್ತು ಜಹೀರಬಾದ್ ಯುಪಿಹೆಚ್ಸಿಯ ವೈದ್ಯಾಧಿಕಾರಿಗಳು, ಪ್ರಾಂಶುಪಾಲರು, ಆರೋಗ್ಯ ಶಿಕ್ಷಣಾಧಿಕಾರಿಗಳು, ನಿಲಯಪಾಲಕರು ಹಾಗೂ ಶುಶ್ರೂಷಣಾಧಿಕಾರಿಗಳು ಉಪಸ್ಥಿತರಿದ್ದು, ಲಸಿಕಾ ಅಭಿಯಾನದ ಯಶಸ್ಸಿಗೆ ಕೈಜೋಡಿಸಿದರು.