ಮರ್ಚೆಡ್ ಡೇಸ್ ಸುದ್ದಿ.
ರಾಯಚೂರು: ಜಮೀನಿನ ಖಾತಾ ಉತಾರ ನೀಡಲು ಬರೋಬ್ಬರಿ ₹1.50 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ರಾಯಚೂರು ಜಿಲ್ಲೆಯ ಬಿಜನಗೇರಾ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಲಕ್ಷ್ಮೀ ಪ್ಯಾಟಿ ಅವರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಡಿಜಿಟಲ್ ಪೇಮೆಂಟ್ ಮೂಲಕ ಲಂಚ ಪಡೆದು ಸಿಕ್ಕಿಬಿದ್ದಿರುವ ಈ ಘಟನೆ ಜಿಲ್ಲಾದ್ಯಂತ ಭಾರಿ ಸಂಚಲನ ಮೂಡಿಸಿದೆ.
ಬಿಜನಗೇರಾ ಗ್ರಾಮದ ನಿವಾಸಿಯಾದ ಮೆಹಬೂಬ್ ಅಲಿ ಎಂಬುವವರು ಲೇಔಟ್ ನಿರ್ಮಾಣ ಮಾಡುವ ಉದ್ದೇಶಕ್ಕಾಗಿ ತಮ್ಮ ಎರಡು ಎಕರೆ ಜಮೀನಿನ ಖಾತಾ ಉತಾರ ಪಡೆಯಲು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಕೆಲಸ ಮಾಡಿಕೊಡಲು ಪಿಡಿಒ ಲಕ್ಷ್ಮೀ ಪ್ಯಾಟಿ ಅವರು ₹2 ಲಕ್ಷ ಲಂಚ ನೀಡುವಂತೆ ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಅಧಿಕಾರಿಗಳ ಭ್ರಷ್ಟಾಚಾರದಿಂದ ಬೇಸತ್ತ ಮೆಹಬೂಬ್ ಅಲಿ ಈ ಬಗ್ಗೆ ಲೋಕಾಯುಕ್ತ ಕಚೇರಿಗೆ ಅಧಿಕೃತವಾಗಿ ದೂರು ದಾಖಲಿಸಿದ್ದರು.
ದೂರಿನ ಅನ್ವಯ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಹದ್ದಿನ ಕಣ್ಣಿಟ್ಟು ದಾಳಿಗೆ ಸ್ಕೆಚ್ ಹಾಕಿದ್ದರು. ಈ ವೇಳೆ ಪಿಡಿಒ ಲಕ್ಷ್ಮೀ ಪ್ಯಾಟಿ ಅವರು ಲಂಚದ ಮೊತ್ತದಲ್ಲಿ ₹1.50 ಲಕ್ಷ ಹಣವನ್ನು ತಮ್ಮ ಪತಿಯ ಬ್ಯಾಂಕ್ ಖಾತೆಗೆ ‘ಫೋನ್‌ಪೇ’ ಆಪ್ ಮೂಲಕ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಹಣ ವರ್ಗಾವಣೆಯಾಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಪಿಡಿಒ ಲಕ್ಷ್ಮೀ ಪ್ಯಾಟಿ ಅವರನ್ನು ಸ್ಥಳದಲ್ಲಿಯೇ ವಶಕ್ಕೆ ಪಡೆದಿದ್ದಾರೆ.
ಸದ್ಯ ಆರೋಪಿತ ಪಿಡಿಒ ಅವರನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ತಂತ್ರಜ್ಞಾನ ಬೆಳೆದಂತೆ ಲಂಚ ಪಡೆಯಲು ಡಿಜಿಟಲ್ ಮಾರ್ಗ ಅನುಸರಿಸಿದ ಅಧಿಕಾರಿಯ ನಡೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಲೋಕಾಯುಕ್ತರ ಈ ಭರ್ಜರಿ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.