ಮರ್ಚೆಡ್ ಡೇಸ್ ಸುದ್ದಿ.
ಗಂಗಾವತಿ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಪ್ರತಿನಿಧಿಗಳು ಗ್ರಾಹಕರ ಮಾಹಿತಿಯನ್ನು ಬೆರಳಿನ ತುದಿಯಲ್ಲಿ ಪಡೆದುಕೊಳ್ಳಲು ಅನುಕೂಲವಾಗುವಂತೆ ಸಂಸ್ಥೆಯು ‘ಸೂಪರ್ ಸೇಲ್ ಸಾಥಿ’ ಆಪ್ ಅನ್ನು ಅಭಿವೃದ್ಧಿಪಡಿಸಿತ್ತು. ಇದರ ಜೊತೆಗೆ ಖಾಸಗಿ ಆಪ್‌ಗಳ ಮೂಲಕವೂ ಪ್ರತಿನಿಧಿವಾರು ಗ್ರಾಹಕರ ಕಂತು ಪಾವತಿ, ಲೋನ್ ಹಾಗೂ ಮ್ಯಾಚುರಿಟಿಯ ಸಂಪೂರ್ಣ ಮಾಹಿತಿಯನ್ನು ಸುಲಭವಾಗಿ ಪಡೆಯಲು ಅವಕಾಶವಿತ್ತು. ಆದರೆ, ಕಳೆದ ಎರಡು ತಿಂಗಳಿನಿಂದ ಈ ಎಲ್ಲ ಆಪ್‌ಗಳ ಸೇವೆಗಳನ್ನು ಇದ್ದಕ್ಕಿದ್ದಂತೆ ಸ್ಥಗಿತಗೊಳಿಸಲಾಗಿದ್ದು, ಇದರಿಂದ ಎಲ್‌ಐಸಿ ಪ್ರತಿನಿಧಿಗಳು ಹಾಗೂ ಗ್ರಾಹಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ಆಪ್‌ಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಅಗತ್ಯವಿರುವ ಕಂತು ಪಾವತಿ ಮಾಹಿತಿ, ಪಾಲಿಸಿ ರಿವೈವಲ್ ಸೇರಿದಂತೆ ವಿವಿಧ ತುರ್ತು ಸೇವೆಗಳನ್ನು ಒದಗಿಸಲು ಪ್ರತಿನಿಧಿಗಳು ಗ್ರಾಹಕರನ್ನು ಎಲ್‌ಐಸಿ ಕಚೇರಿಗೇ ಕರೆದುಕೊಂಡು ಬರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರಿಂದ ಡಿಜಿಟಲ್ ಸೇವೆಗೆ ಹಿನ್ನಡೆಯಾಗಿದ್ದು, ಸಮಯ ಮತ್ತು ಶ್ರಮ ವ್ಯರ್ಥವಾಗುತ್ತಿದೆ. ಈ ಸಮಸ್ಯೆಯನ್ನು ಮನಗಂಡು ಎಲ್‌ಐಸಿ ಕೇಂದ್ರ ಸಂಸ್ಥೆ ಮತ್ತು ಕೇಂದ್ರ ಸರ್ಕಾರವು ಕೂಡಲೇ ಮಧ್ಯಪ್ರವೇಶಿಸಿ, ಸೂಪರ್ ಸೇಲ್ ಸಾಥಿ ಸೇರಿದಂತೆ ಎಲ್ಲಾ ಖಾಸಗಿ ಆಪ್‌ಗಳನ್ನು ಪುನಃ ಸರಳೀಕರಣಗೊಳಿಸಿ ಆನ್‌ಲೈನ್ ಮೂಲಕ ಲಭ್ಯವಾಗುವಂತೆ ಮಾಡಬೇಕು ಎಂದು ವಿಮಾ ಪ್ರತಿನಿಧಿಗಳು ಒತ್ತಾಯಿಸಿದ್ದಾರೆ.
ಈ ತಾಂತ್ರಿಕ ಸಮಸ್ಯೆಯನ್ನು ಖಂಡಿಸಿ ಹಾಗೂ ಆಪ್‌ಗಳ ಪುನರ್ ಲಭ್ಯತೆಗೆ ಆಗ್ರಹಿಸಿ ಎಲ್‌ಐಸಿ ಪ್ರತಿನಿಧಿಗಳ ಸಂಘಟನೆಯಾದ ‘ಲಿಖೈ’ ನೇತೃತ್ವದಲ್ಲಿ ದೇಶವ್ಯಾಪಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯ ಅಂಗವಾಗಿ, ಬುಧವಾರ ಗಂಗಾವತಿಯ ಎಲ್‌ಐಸಿ ಶಾಖಾ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು. ಸ್ಥಳೀಯ ಲಿಖೈ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಎಲ್‌ಐಸಿ ಆಡಳಿತ ಮಂಡಳಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ತಮ್ಮ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಶಾಖಾ ವ್ಯವಸ್ಥಾಪಕರಿಗೆ ಸಲ್ಲಿಸಿದರು.
ಈ ಮಹತ್ವದ ಪ್ರತಿಭಟನೆಯಲ್ಲಿ ಲಿಖೈ ಸಂಘಟನೆಯ ವಿಭಾಗೀಯ ಖಜಾಂಚಿ ವಲಿಮೋಹಿಯುದ್ದಿನ್, ಅಧ್ಯಕ್ಷ ಕೆ.ಎಂ. ಮಂಜುನಾಥ ಹಾಗೂ ಕಾರ್ಯದರ್ಶಿ ಹುಸೇನಬಾಷಾ ಜಾಲಹಳ್ಳಿ ನೇತೃತ್ವ ವಹಿಸಿದ್ದರು. ಇವರೊಂದಿಗೆ ಪ್ರಮುಖರಾದ ಕೆ. ನಿಂಗಜ್ಜ, ಎಂ. ನಿರುಪಾದಿ ಬೆಣಕಲ್, ಹುಸೇನಬಾಷಾ ಎಸ್.ಕೆ.ಎಚ್., ಈಶ್ವರ, ಶಂಕ್ರಪ್ಪ ಗೆದ್ದಿಕೇರಿ, ರಾಘವೇಂದ್ರ ದೇಸಾಯಿ, ಆಂಜಿನಪ್ಪ ಕರಿಗೌಡ, ಪಂಪಣ್ಣ ಪಟ್ಟಣಶೆಟ್ಟಿ, ವೀರನಗೌಡ, ಬಸವರಾಜ ಸಜ್ಜನ್, ಭಾರತಿ ಆಗಲೂರು, ಕೆ. ವರಲಕ್ಷ್ಮಿ, ಖಾಜವಲಿ, ಶ್ರೀನಿವಾಸ ಕುಲಕರ್ಣಿ, ದುರ್ಗಾಪ್ರಸಾದ್, ಸಿದ್ದಾಪುರ ರಾಘವೇಂದ್ರ ಸೇರಿದಂತೆ ನೂರಾರು ಎಲ್‌ಐಸಿ ಪ್ರತಿನಿಧಿಗಳು ಪಾಲ್ಗೊಂಡು ಆಕ್ರೋಶ ವ್ಯಕ್ತಪಡಿಸಿದರು.