ಮರ್ಚೆಡ್ ಡೇಸ್ ಸುದ್ದಿ.
ಗಂಗಾವತಿ: ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುತ್ತಿರುವ ವಿಕಲಚೇತನರು, ವಿಧವೆಯರು ಹಾಗೂ ಹಿರಿಯ ನಾಗರಿಕರ ಪಿಂಚಣಿಗೆ ರಾಜ್ಯ ಸರ್ಕಾರ ಏಕಾಏಕಿ ವಾರ್ಷಿಕ 32,000 ರೂಪಾಯಿಗಳ ಆದಾಯದ ಮಿತಿಯನ್ನು ನಿಗದಿಪಡಿಸಿರುವುದನ್ನು ಕರವೇ (ಪ್ರವೀಣಕುಮಾರ ಶೆಟ್ಟಿ ಬಣ) ಸಂಘಟನೆಯ ತಾಲೂಕು ಅಂಗವಿಕಲರ ಘಟಕದ ಅಧ್ಯಕ್ಷರಾದ ಅಶೋಕ ಗುಡಿಕೋಟಿ ತೀವ್ರವಾಗಿ ಖಂಡಿಸಿದ್ದಾರೆ. ಸರ್ಕಾರ ಯಾವ ಮಾನದಂಡದ ಮೇಲೆ ಈ ಆದಾಯ ಮಿತಿಯನ್ನು ನಿಗದಿಪಡಿಸಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಪಿಂಚಣಿ ಯೋಜನೆಗಳ ಅನುದಾನವನ್ನು ಕಡಿತಗೊಳಿಸುವ ಉದ್ದೇಶದಿಂದಲೇ ಸರ್ಕಾರ ಈ ನಿಯಮವನ್ನು ಜಾರಿಗೆ ತಂದಿದೆ ಎಂದು ಆರೋಪಿಸಿದ ಅವರು, ಕೆವೈಸಿ ಮತ್ತು ಆಧಾರ್ ಲಿಂಕ್ ಆಗಿಲ್ಲ ಎಂಬ ಕಾರಣ ನೀಡಿ ಕಳೆದ 3-4 ತಿಂಗಳುಗಳಿಂದ ಈಗಾಗಲೇ ಹಲವರ ಪಿಂಚಣಿಯನ್ನು ಸ್ಥಗಿತಗೊಳಿಸಲಾಗಿದೆ. ದುಡಿಯುವ ಶಕ್ತಿ ಇಲ್ಲದೆ ಸರ್ಕಾರದ ಪಿಂಚಣಿಯನ್ನೇ ನೆಚ್ಚಿಕೊಂಡಿರುವ ವಿಕಲಚೇತನರಿಗೆ ಸರ್ಕಾರದ ಈ ನಡೆ ದೊಡ್ಡ ಹೊಡೆತ ನೀಡಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ, ಸಣ್ಣ ವ್ಯಾಪಾರಿಗಳು ಕೇವಲ ಬ್ಯಾಂಕ್ ಸಾಲದ ಉದ್ದೇಶಕ್ಕಾಗಿ ಐಟಿ ರಿಟರ್ನ್ಸ್ ಸಲ್ಲಿಸಿದ್ದಾರೆಯೇ ಹೊರತು ತೆರಿಗೆ ಪಾವತಿಸುವಷ್ಟು ಆದಾಯ ಹೊಂದಿಲ್ಲ. ಆದರೂ ಸರ್ಕಾರ ಜಿಎಸ್‌ಟಿ ಹಾಗೂ ಐಟಿ ರಿಟರ್ನ್ಸ್ ಸಬೂಬು ನೀಡಿ ಅರ್ಹರ ಬಿಪಿಎಲ್ ಪಡಿತರ ಚೀಟಿಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ವರ್ಗಾಯಿಸುತ್ತಿರುವುದು ಬಡವರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಅವರು ಸರ್ಕಾರದ ಮಲತಾಯಿ ಧೋರಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಕಲಿ ಫಲಾನುಭವಿಗಳನ್ನು ಗುರುತಿಸಿ ಪಿಂಚಣಿ ಸ್ಥಗಿತಗೊಳಿಸುವ ಸರ್ಕಾರದ ಕ್ರಮ ಸ್ವಾಗತಾರ್ಹ. ಆದರೆ, ಈ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಬಾರದು. ಸರ್ಕಾರ ತಕ್ಷಣವೇ ಜಾರಿಗೆ ತಂದಿರುವ ವಾರ್ಷಿಕ ಆದಾಯ ಮಿತಿಯನ್ನು ರದ್ದುಪಡಿಸಬೇಕು ಮತ್ತು ಬಡವರ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ವರ್ಗಾಯಿಸುವುದನ್ನು ನಿಲ್ಲಿಸಿ ಅರ್ಹರ ಜೀವನಕ್ಕೆ ಭದ್ರತೆ ನೀಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.