5 ಸಾವಿರ ಜನರಿಗೆ ಆರೋಗ್ಯ ತಪಾಷಣೆ ಮತ್ತು ಚಿಕಿತ್ಸೆ ನೀಡುವ ಗುರಿ ಹಾಕಿಕೊಂಡಿದ್ದೇವೆ : ಪರಣ್ಣ ಮುನವಳ್ಳಿ
ಮರ್ಚೆಡ್ ಡೇಸ್ ಸುದ್ದಿ.
ಗಂಗಾವತಿ, ಮೇ 27: ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ (ಕೆಎಲ್ಇ) ಆಶ್ರಯದಲ್ಲಿ ಜೂನ್ 10ರಂದು ಗಂಗಾವತಿಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಕೆಎಲ್ಇ ಸಂಸ್ಥೆಯ ಸ್ಥಾನಿಕ ನಿರ್ದೇಶಕ ಹಾಗೂ ಮಾಜಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ತಿಳಿಸಿದರು.
ನಗರದ ವಡ್ಡರಹಟ್ಟಿ ಕೆಎಲ್ಇ ಕ್ಯಾಂಪಸ್ ಆವರಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಕರಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳ ಆಹ್ವಾನದ ಮೇರೆಗೆ ಇತ್ತೀಚೆಗೆ ಕೊಪ್ಪಳದಲ್ಲಿ ನಡೆದ ಕಾರ್ಯಕ್ರಮಕ್ಕೆ ಕೆಎಲ್ಇ ಸಂಸ್ಥೆಯ ಅಧ್ಯಕ್ಷ ಡಾ. ಪ್ರಭಾಕರ ಕೋರೆ ಆಗಮಿಸಿದ್ದ ವೇಳೆ, ಈ ಭಾಗದ ಜನರಿಗೆ ಆರೋಗ್ಯ ಸೇವೆ ತಲುಪಿಸುವ ಉದ್ದೇಶದಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲು ಸೂಚನೆ ನೀಡಿದ್ದರು. ಅವರ ಪ್ರೇರಣೆಯಿಂದಲೇ ಈ ಬೃಹತ್ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ವಡ್ಡರಹಟ್ಟಿ ಕೆಎಲ್ಇ ಕ್ಯಾಂಪಸ್‌ನಲ್ಲಿರುವ ಶ್ರೀಮತಿ ಈರಮ್ಮ ಸಿದ್ದಪ್ಪ ಸಿದ್ದಾಪುರ ಪದವಿ ಪೂರ್ವ ಕಾಲೇಜು ಹಾಗೂ ರಾಜಶೇಖರಪ್ಪ ಪಂಪಣ್ಣ ಮಾಸ್ತರ್ ಹೊಸಕೇರಿ ವಾಣಿಜ್ಯ ಮತ್ತು ಬಿಸಿಎ ಮಹಾವಿದ್ಯಾಲಯ ಆವರಣದಲ್ಲಿ ಶಿಬಿರ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕೆಎಲ್ಇ ಡಾ|| ಅಲ್ಲಮ ಪ್ರಭು ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಬೆಳಗಾವಿ, ಕೆಎಲ್ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಹುಬ್ಬಳ್ಳಿ, ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಬೆಳಗಾವಿ ಹಾಗೂ ಜಗದ್ಗುರು ಗಂಗಾಧರ ಸ್ವಾಮಿ ಮೂರು ಸಾವಿರ ಮಠ ವೈದ್ಯಕೀಯ ಮಹಾವಿದ್ಯಾಲಯ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು.
ದುರ್ಬಲ ವರ್ಗ ಹಾಗೂ ಬಡ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದ್ದು, ಸುಮಾರು 5 ಸಾವಿರ ಜನರಿಗೆ ಆರೋಗ್ಯ ತಪಾಸಣೆ ನಡೆಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಎನ್‌ಜಿಒಗಳು, ಆಶಾ ಕಾರ್ಯಕರ್ತೆಯರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಗ್ರಾಮೀಣ ಭಾಗದ ಜನರನ್ನು ಸಂಪರ್ಕಿಸಿ ಶಿಬಿರದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಶಿಬಿರಕ್ಕೆ ಅಗತ್ಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, 20ಕ್ಕೂ ಹೆಚ್ಚು ಕೊಠಡಿಗಳ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದೆ. ಗ್ರಾಮೀಣ ಪ್ರದೇಶಗಳಿಂದ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣ ಹಾಗೂ ಸಿಬಿಎಸ್ ವೃತ್ತದಿಂದ ಉಚಿತ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ಶಿಬಿರದಲ್ಲಿ ಭಾಗವಹಿಸುವವರಿಗೆ ಉಚಿತ ಆಹಾರ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ತಿಳಿಸಿದರು.
ಸುಮಾರು 25 ನುರಿತ ವೈದ್ಯರ ತಂಡ ವಿವಿಧ ವಿಭಾಗಗಳಲ್ಲಿ ಆರೋಗ್ಯ ತಪಾಸಣೆ ನಡೆಸಲಿದೆ. ಹೃದಯ ರೋಗ, ಮೂತ್ರಕೋಶ, ಗ್ಯಾಸ್ಟ್ರೋಎಂಟರಾಲಜಿ, ಮಧುಮೇಹ, ನೇತ್ರ ಚಿಕಿತ್ಸಾ ವಿಭಾಗ, ಎಲುಬು ಮತ್ತು ಕೀಲು ಮರುಜೋಡಣೆ, ಶ್ವಾಸಕೋಶ, ಕಿವಿ-ಮೂಗು-ಗಂಟಲು, ಸ್ತ್ರೀರೋಗ ಮತ್ತು ಪ್ರಸೂತಿ, ಮಕ್ಕಳ ಚಿಕಿತ್ಸಾ ವಿಭಾಗ, ಸಮಗ್ರ ಕ್ಯಾನ್ಸರ್ ಚಿಕಿತ್ಸೆ, ಚರ್ಮರೋಗ, ದಂತ ಚಿಕಿತ್ಸಾ ವಿಭಾಗ, ಭೌತಿಕ ಚಿಕಿತ್ಸೆ ಹಾಗೂ ಆಯುರ್ವೇದ ಚಿಕಿತ್ಸಾ ಸೇವೆಗಳು ಲಭ್ಯವಿರಲಿವೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ. 94481324774,9060305009,9448257673