ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಶಿಕ್ಷಣವು ಕೇವಲ ಪದವಿ ಪ್ರಮಾಣಪತ್ರಗಳನ್ನು ಹಂಚುವ ಕೇಂದ್ರಗಳಾಗುತ್ತಿವೆ. ಸರ್ಕಾರಿ ಕಾಲೇಜುಗಳಲ್ಲಿ ಖಾಯಂ ಸಹಾಯಕ ಪ್ರಾಧ್ಯಾಪಕರು ಸಂಬಳ ಮತ್ತು ಸೌಲತ್ತುಗಳ ನಡುವೆ ತೇಲುತ್ತಿದ್ದರೆ, ಅತಿಥಿ ಉಪನ್ಯಾಸಕರು ಅನಿಶ್ಚಿತತೆಯ ನಡುವೆ ಇಡೀ ವ್ಯವಸ್ಥೆಯನ್ನು ಹೊತ್ತು ನಡೆಯುತ್ತಿದ್ದಾರೆ ಎಂದು ಬಾಸವಾಗುತ್ತದೆ ಆದರೆ, ಈ ವ್ಯವಸ್ಥೆಯ ಅಂತಿಮ ಬಲಿಪಶುಗಳು ಮಾತ್ರ ಗ್ರಾಮೀಣ ಮತ್ತು ಬಡ ಪ್ರತಿಭಾವಂತ ವಿದ್ಯಾರ್ಥಿಗಳು.
ಶೈಕ್ಷಣಿಕ ಜೀತಪದ್ಧತಿ ಮತ್ತು ಯುಜಿಸಿ ನೆಪ
ದಶಕಗಳಿಂದ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನು ಯುಜಿಸಿ ನಿಯಮಗಳ ನೆಪದಲ್ಲಿ ಬೀದಿಗೆ ತಳ್ಳುವುದು ಕೇವಲ ಅಮಾನವೀಯವಲ್ಲ, ಅದು ಜ್ಞಾನದ ಕೊಲೆ. ಖಾಯಂ ಪ್ರಾಧ್ಯಾಪಕರು ಮೀಟಿಂಗ್ಗಳು, ಯುನಿವರ್ಸಿಟಿ ಕೆಲಸಗಳು, ಗೂಗಲ್ ಮೀಟ್ ಸೆಮಿನಾರ್ಗಳ ಹೆಸರಿನಲ್ಲಿ ತರಗತಿಗಳಿಂದ ದೂರ ಉಳಿಯುತ್ತಿದ್ದಾರೆ.
ಅವರ ಪಾಲಿನ ವೇಳಾಪಟ್ಟಿ ಮತ್ತು ವಿಷಯವಾರು ಹಂಚಿಕೆ ಕೆಲವು ಕಾಲೇಜುಗಳಲ್ಲಿ ಹೆಚ್ಚು ಸಬ್ಜೆಕ್ಟ್ಗಳನ್ನು ಅತಿಥಿ ಉಪನ್ಯಾಸಕರಿಗೆ ವಹಿಸಿ.ಅವರನ್ನು ಆಧುನಿಕ ಕಾಲದ ಸಹಾಯಕರಂತೆ ಬಳಸಿಕೊಳ್ಳಲಾಗುತ್ತಿದೆ. ಸರ್ಕಾರಿ ಸೌಲಭ್ಯ ಪಡೆಯುವವರು ಮಾಡುವ ಕೆಲಸಕ್ಕಿಂತ, ಅಲ್ಪ ಗೌರವಧನ ಪಡೆಯುವವರು ಮಾಡುವ ಕೆಲಸವೇ ಹೆಚ್ಚಾಗಿರುವುದು ಎಂದು ಮೇಲ್ನೋಟಕ್ಕೆ ಅನಿಸುತ್ತೆ.
ಇಂದು ಪಠ್ಯಪುಸ್ತಕ ರಚನೆ ಎಂಬುದು ಜ್ಞಾನ ಹಂಚಿಕೆಗಿಂತ ಹೆಚ್ಚಾಗಿ ಅಧಿಕಾರ ಪ್ರದರ್ಶನದ ವೇದಿಕೆಯಾಗಿದೆ. ಬಿವೈಸಿ ಕಮಿಟಿ ಸದಸ್ಯರಾಗಿ ತಮ್ಮ ಹೆಸರು ಹಾಕಿಸಿಕೊಳ್ಳಲು ಅಥವಾ ತಾವೇ ಬರೆದ ಸರಳ ಪುಸ್ತಕಗಳನ್ನು ಹೇರಲು ತೋರುವ ಉತ್ಸಾಹ, ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲು ಕಾಣುತ್ತಿಲ್ಲ. ಸುಲಭವಾದ ಪಠ್ಯಗಳು ವಿದ್ಯಾರ್ಥಿಗಳಿಗೆ ಪರೀಕ್ಷೆ ಪಾಸು ಮಾಡಲು ಸಹಾಯ ಮಾಡಬಹುದು, ಆದರೆ ಜಾಗತಿಕ ಸ್ಪರ್ಧೆಯಲ್ಲಿ ಅವರನ್ನು ಸೋಲಿಸುತ್ತಿವೆ. ಸರ್ಕಾರ ಏನು ಕೊಡುತ್ತದೆ ಎಂದು ಕಾಯುವ ಮೊದಲು, “ನಾವು ಏನು ಕೊಡುತ್ತಿದ್ದೇವೆ?” ಎಂದು ಶಿಕ್ಷಣ ತಜ್ಞರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಭಾಷಣವಲ್ಲ, ಬೋಧನೆ ಬೇಕು
ವಿದ್ಯಾರ್ಥಿಗಳಿಗೆ ವೇದಿಕೆ ಮೇಲೆ ನಿಂತು ಸಾವಿರಾರು ರೂಪಾಯಿ ಸಂಭಾವನೆ ಪಡೆದು ‘ಮೋಟಿವೇಶನ್’ ಭಾಷಣ ಮಾಡುವುದರಿಂದ ಅವರ ಬದುಕು ಬದಲಾಗುವುದಿಲ್ಲ.
ಆಳವಾದ ಬೋಧನೆ: ಸ್ಪರ್ಧಾತ್ಮಕ ಮನೋಭಾವ ಬರಬೇಕೆಂದರೆ ವಿಷಯದ ಆಳವಾದ ಜ್ಞಾನ ಬೇಕು. ಉಪನ್ಯಾಸಕರು ತರಗತಿಯ ಒಳಗೆ ಇಳಿದು, ವಿದ್ಯಾರ್ಥಿಗಳ ಸಂದೇಹಗಳನ್ನು ತಳಮಟ್ಟದಲ್ಲಿ ಪರಿಹರಿಸುವ ಕೆಲಸವಾಗಬೇಕು.
ಕೇವಲ ಸಿಲೆಬಸ್ ಮುಗಿಸುವುದು ಸಾಧನೆಯಲ್ಲ; ಆ ಸಿಲೆಬಸ್ ಹೊರಗಿನ ಪ್ರಪಂಚಕ್ಕೆ ಹೇಗೆ ಅನ್ವಯವಾಗುತ್ತದೆ ಎಂಬುದನ್ನು ಕಲಿಸಬೇಕು.
ಖಾಸಗಿ ಕಾಲೇಜುಗಳು ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಹೋಗಿ ಪ್ರಚಾರ ಮಾಡುತ್ತಿದ್ದರೆ, ಸರ್ಕಾರಿ ಕಾಲೇಜುಗಳ ನೌಕರರು “ವಿದ್ಯಾರ್ಥಿಗಳು ಬಂದರೆ ಪಾಠ, ಇಲ್ಲದಿದ್ದರೆ ಟ್ರಾನ್ಸ್ಫರ್”ಇದ್ದೇ ಇದಿಯಲ್ಲ ಎನ್ನುವ ನಿರುತ್ಸಾಹದಲ್ಲಿದ್ದಾರೆ. ಅಚ್ಚರಿಯೆಂದರೆ, ಈ ಸರ್ಕಾರಿ ನೌಕರರೇ ಲಕ್ಷಾಂತರ ರೂಪಾಯಿ ಡೊನೇಷನ್ ನೀಡಿ ತಮ್ಮ ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೇರಿಸುತ್ತಾರೆ. ಸರ್ಕಾರಿ ಕಾಲೇಜುಗಳ ಉನ್ನತೀಕರಣವಾಗಬೇಕೆಂದರೆ ಮೊದಲು ಆ ನೌಕರರಲ್ಲಿ ತಮ್ಮ ಸಂಸ್ಥೆಯ ಬಗ್ಗೆ ಹೆಮ್ಮೆ ಮತ್ತು ಜವಾಬ್ದಾರಿ ಮೂಡಬೇಕಿದೆ.
ಸಮಾನ ಕೆಲಸ – ಸಮಾನ ಗೌರವ ಯಾವುದೇ ಭಯವಿಲ್ಲದ ಮುಕ್ತವಾಗಿ ಕೆಲಸ ಮಾಡಲು ಸ್ವತಂತ್ರ್ಯ ಕಲ್ಪಿಸುವ ಅವಶ್ಯ
ಖಾಯಂ ಪ್ರಾಧ್ಯಾಪಕರು ಕೇವಲ ಆಡಳಿತಾತ್ಮಕ ಕೆಲಸಗಳಿಗೆ ಸೀಮಿತವಾಗದೆ.ಕಠಿಣ ವಿಷಯಗಳನ್ನು ತಾವೇ ಬೋಧಿಸುವ ಮೂಲಕ ಅತಿಥಿ ಉಪನ್ಯಾಸಕರ ಮೇಲಿನ ಹೊರೆ ಎನ್ನುವುದು ಕೆಲವು ಕಾಲೇಜು ಗಳಲ್ಲಿ ಆರೋಪವನ್ನು ಅಳಿಸಬೇಕಿದೆ.
ಸಕಾಲಿಕ ನೇಮಕಾತಿ: ಅತಿಥಿ ಉಪನ್ಯಾಸಕರನ್ನು ಕಾಲೇಜು ಆರಂಭವಾದ ಮೊದಲ ದಿನವೇ ನೇಮಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಸಮಯ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು.
ಪ್ರತಿ ಸರ್ಕಾರಿ ಕಾಲೇಜಿನಲ್ಲಿ ಖಾಸಗಿ ಸಂಸ್ಥೆಗಳಿಗಿಂತ ಮಿಗಿಲಾದ ಡಿಜಿಟಲ್ ಲೈಬ್ರರಿ ಇಂಟರ್ನೆಟ್ ಹೆಸರಿಗೆ ಮಾತ್ರ ನಿಜವಾಗಿ ಎಲ್ಲರಿಗೂ ಸಿಗುವ ರೀತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಮತ್ತು ಕೌಶಲ ತರಬೇತಿ ಆರಂಭವಾಗಬೇಕು.
ಪಠ್ಯಕ್ರಮವು ಕೇವಲ ಕಮಿಟಿ ಸದಸ್ಯರ ಹಿತಾಸಕ್ತಿಗಲ್ಲದೆ, ಉದ್ಯೋಗ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಇರಬೇಕು.
ನಮ್ಮ ಶಿಕ್ಷಣ ವ್ಯವಸ್ಥೆ ಬೌದ್ಧಿಕವಾಗಿ ಬೆಳೆಯಬೇಕಾದರೆ ಶೋಷಣೆ ಮುಕ್ತ ವಾತಾವರಣ ನಿರ್ಮಾಣವಾಗಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಜ್ಞಾನ ನೀಡದ ಯಾವುದೇ ವ್ಯವಸ್ಥೆ ಹೆಚ್ಚು ಕಾಲ ಉಳಿಯಲಾರದು. ಸರ್ಕಾರಿ ಕಾಲೇಜುಗಳು ಕೇವಲ ಕಟ್ಟಡ’ಗಳಾಗದೆ ಕಲಿಕಾ ಕೇಂದ್ರ’ಗಳಾಗಲು ಪಾಲಕರು/ಜನಪ್ರತಿನಿಧಿಗಳು ಮತ್ತು ಶಿಕ್ಷಕರು,ಸರ್ಕಾರದ ಇಚ್ಛಾಶಕ್ತಿ ಒಂದಾಗಬೇಕು.
ಲೇಖಕರು ತಾಯಪ್ಪ ಮರ್ಚೆಡ್
ಪತ್ರಕರ್ತರು ಗಂಗಾವತಿ