Home ಸುದ್ದಿ ಶಿಕ್ಷಣವು ಜೀವನದ ಪರಿಪೂರ್ಣ ಮೌಲ್ಯಗಳನ್ನು ರೂಪಿಸುವ ಸಾಧನ: ಡಾ. ಇಬ್ರಾಹಿಂ ಎಂ.ಕೆ.
ಸುದ್ದಿ

ಶಿಕ್ಷಣವು ಜೀವನದ ಪರಿಪೂರ್ಣ ಮೌಲ್ಯಗಳನ್ನು ರೂಪಿಸುವ ಸಾಧನ: ಡಾ. ಇಬ್ರಾಹಿಂ ಎಂ.ಕೆ.

Share
Share
ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.
ಎಸ್.ಕೆ.ಎನ್.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಭಾಗದ ಪ್ರಥಮ ವರ್ಷದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ.

ಗಂಗಾವತಿ:ಶಿಕ್ಷಣವೇ ನಮ್ಮ ಜೀವನದ ಪರಿಪೂರ್ಣ ಮೌಲ್ಯಗಳನ್ನು ರೂಪಿಸುವ ಪ್ರಬಲ ಸಾಧನವಾಗಿದೆ. ಎದೆಗೆ ಬಿದ್ದ ಅಕ್ಷರ ಒಂದಲ್ಲ ಒಂದು ದಿನ ಫಲ ಕೊಟ್ಟೇ ಕೊಡುತ್ತದೆ,” ಎಂದು ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಇಬ್ರಾಹಿಂ ಎಂ.ಕೆ. ಅಭಿಪ್ರಾಯಪಟ್ಟರು.

ನಗರದ ಶ್ರೀ ಕೊಲ್ಲಿ ನಾಗೇಶ್ವರ ರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ಅಧ್ಯಯನ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ‘ಸ್ವಾಗತ ಸಮಾರಂಭ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ತಾಳ್ಮೆ ಮತ್ತು ಕ್ರಿಯಾಶೀಲತೆ ಇರಬೇಕು. ಮೊಬೈಲ್ ಜಾಗತಿಕ ವಿಶ್ವಕೋಶವಿದ್ದಂತೆ, ಅದನ್ನು ಉತ್ತಮ ಉದ್ದೇಶಗಳಿಗೆ ಮಾತ್ರ ಬಳಸಿಕೊಳ್ಳಬೇಕು. ಕಲ್ಯಾಣ ಕರ್ನಾಟಕವು ಬಸವಣ್ಣನವರ ಸಂಸತ್ತಿನ ಪರಿಕಲ್ಪನೆ ಮತ್ತು ಸಾಮಾಜಿಕ ಚಳುವಳಿಗಳ ತವರೂರಾಗಿದ್ದು, ಇಲ್ಲಿ ಉತ್ತಮ ಪ್ರವಾಸೋದ್ಯಮ ತಾಣಗಳಿವೆ. ವಿದ್ಯಾರ್ಥಿಗಳು ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಂಡು ದೇಶಕ್ಕೆ ಕೊಡುಗೆ ನೀಡುವ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುಷ್ಟಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ. ವೆಂಕಟೇಶ್ ಬಿ. ಮಾತನಾಡಿ, “ಇಂದು ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಕಡಿಮೆಯಾಗುತ್ತಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉನ್ನತ ಶಿಕ್ಷಣ ಪಡೆಯಬೇಕು. ಪೋಷಕರ ಕನಸನ್ನು ನನಸು ಮಾಡಿ, ಉತ್ತಮ ಉದ್ಯೋಗದೊಂದಿಗೆ ಸುಂದರ ಬದುಕು ಕಟ್ಟಿಕೊಳ್ಳಿ,” ಎಂದು ಸಲಹೆ ನೀಡಿದರು.

ಮತ್ತೋರ್ವ ಅತಿಥಿ ಹಿರೇವಂಕಲಕುಂಟ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶರಣಬಸವ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಬಾರದು. ಋಣಾತ್ಮಕ ಚಿಂತನೆಗಳನ್ನು ಬಿಟ್ಟು, ಜೀವನದ ಸಣ್ಣ ಘಟನೆಗಳಿಂದಲೂ ಸ್ಫೂರ್ತಿ ಪಡೆದು ಛಲದಿಂದ ಮುನ್ನಡೆಯಬೇಕು ಎಂದು ತಮ್ಮ ಜೀವನದ ಸವಾಲು ಮತ್ತು ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಐಕ್ಯೂಎಸಿ (IQAC) ಸಂಚಾಲಕ ಡಾ. ಉಮಾಕಾಂತ ಅವರೆಡ್ಡಿ ಮಾತನಾಡಿ, “ಪುಸ್ತಕ ಮತ್ತು ಪತ್ರಿಕೆಗಳನ್ನು ಓದುವುದರಿಂದ ಜ್ಞಾನ ವೃದ್ಧಿಸುತ್ತದೆ. ಪುಸ್ತಕಗಳು ನಮ್ಮ ಭವಿಷ್ಯವನ್ನು ರೂಪಿಸುತ್ತವೆ; ಹಾಗಾಗಿ ಪುಸ್ತಕಗಳನ್ನೇ ನಿಜವಾದ ಸ್ನೇಹಿತರನ್ನಾಗಿ ಮಾಡಿಕೊಂಡು ಸಾಧನೆಯ ಗುರಿ ತಲುಪಿ,” ಎಂದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ನರಸಿಂಹ ಕೂಡ ಸಂದರ್ಭೋಚಿತವಾಗಿ ಮಾತನಾಡಿದರು.

ಸ್ನಾತಕೋತ್ತರ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ನೇತ್ರಾವತಿ, ವೀರೇಶ್ ಕತ್ತಿ, ಪವಿತ್ರ, ಯಮನೂರ, ಮರೇಗೌಡ ಹಾಗೂ ಶರಣಬಸವ ಕಾಲೇಜಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು ಹಾಗೂ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವೇದಿಕೆಯಲ್ಲಿ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಉಪನ್ಯಾಸಕರಾದ ಡಾ. ಮಂಜಣ್ಣ ಪಿ.ಬಿ., ಡಾ. ಅಯ್ಯಾಳಿ ಯರಿಸ್ವಾಮಿ, ಡಾ. ಸರಿತಾ ಟಿ.ಎಚ್., ಕೆಂಚಮೂರ್ತಿ, ಡಾ. ಮಣಿಕಂಠ ಹಂಗಳ, ಡಾ. ಶಾಂತರಾಜು ಎಂ., ಮಲ್ಲಿಕಾರ್ಜುನ ಎಂ., ಶ್ರೀದೇವಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಹಿಷಾ ಮತ್ತು ತಂಡ ಪ್ರಾರ್ಥಿಸಿದರೆ, ಶೈಲಜಾ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

Share
Related Articles
ಸುದ್ದಿ

ಅರ್ಥಶಾಸ್ತ್ರ ವಿದ್ಯಾರ್ಥಿಗಳಿಗೆ ವರದಾನ: ಡಾ. ಕೊಂತಮ್ ಸತೀಶ್ ಅವರಿಂದ ‘ಡೆವಲಪ್‌ಮೆಂಟ್ ಎಕನಾಮಿಕ್ಸ್’ ಕೃತಿ ರಚನೆ.

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಉಪನ್ಯಾಸಕರು, ಸಂಶೋಧಕರು ಹಾಗೂ ಲೇಖಕರಾದ ಡಾ. ಸತೀಶ್ ಅವರ ಶೈಕ್ಷಣಿಕ ಕೊಡುಗೆಗೆ...

ಸುದ್ದಿ

*ಗಂಗಾವತಿ ತಹಶೀಲ್ದಾರ್ ಕಚೇರಿಯಲ್ಲಿ ಇನ್‌ವರ್ಡ್ ವ್ಯವಸ್ಥೆ ಇಲ್ಲ: ಉನ್ನತ ಮಟ್ಟದ ತನಿಖೆಗೆ ಒತ್ತಾಯ – ಜೋಗಿನ್ ರಮೇಶ್ ನಾಯಕ್*

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ಗಂಗಾವತಿ:* ಗಂಗಾವತಿ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರಿಂದ ಸ್ವೀಕರಿಸುವ ಅರ್ಜಿಗಳಿಗೆ ಸಮರ್ಪಕ...

ಸಂಪಾದಕೀಯಸುದ್ದಿ

ಊರಿಗೆಲ್ಲಾ ಆರೋಗ್ಯದ ‘ಆಶಾ’ ಕಿರಣ, ತಮ್ಮ ಬದುಕಿಗೇ ‘ನಿರಾಶೆ’ಯ ಗ್ರಹಣ: ಕನಿಷ್ಠ ವೇತನಕ್ಕಾಗಿ ಪಿಂಕ್ ಸೀರೆಯ ಕಾರ್ಯಕರ್ತೆಯರ ಹೋರಾಟ.

  ಜನರ ಜೀವ ಉಳಿಸುವ ಪಿಂಕ್ ಸೀರೆಯ ಸೇನಾನಿಗಳಿಗೆ ಬದುಕುವ ಭರವಸೆ ನೀಡುವುದೆಂದು? ಕನಿಷ್ಠ ಗೌರವಧನಕ್ಕಾಗಿ...