Home ಸಂಪಾದಕೀಯ ಕಾರ್ಪೊರೇಟ್ ಅಂಗಳದಲ್ಲಿ ಅಕ್ಷರ ಸಾಹಿತ್ಯದ  ಹಬ್ಬ ಮ******** ಮುಖವಾಡವೇ ಅಥವಾ ಅಸ್ತಿತ್ವದ ಅನಿವಾರ್ಯತೆಯೇ?
ಸಂಪಾದಕೀಯಸುದ್ದಿ

ಕಾರ್ಪೊರೇಟ್ ಅಂಗಳದಲ್ಲಿ ಅಕ್ಷರ ಸಾಹಿತ್ಯದ  ಹಬ್ಬ ಮ******** ಮುಖವಾಡವೇ ಅಥವಾ ಅಸ್ತಿತ್ವದ ಅನಿವಾರ್ಯತೆಯೇ?

Share
Share
ಮರ್ಚೆಡ್ ಡೇಸ್|ಸಂಪಾದಕೀಯ.

ಬಳ್ಳಾರಿಯ ಕಬ್ಬಿಣದ ಅದಿರಿನ ಧೂಳಿನ ನಡುವೆ ನವೆಂಬರ್ 28 ಮತ್ತು 29ರಂದು ನಡೆಯಲಿರುವ ‘ಜೆಎಸ್‌ಡಬ್ಲ್ಯೂ ಸಾಹಿತ್ಯ ಹಬ್ಬ’ ಈಗ ಸಾರಸ್ವತ ಲೋಕದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಕಲ್ಯಾಣ ಕರ್ನಾಟಕದ ನೆಲದಲ್ಲಿ ಸಾಹಿತ್ಯದ ಕಂಪು ಹರಡಬೇಕೆಂಬ ಆಶಯದೊಂದಿಗೆ ಬುಕ್ ಬ್ರಹ್ಮ ಸಂಸ್ಥೆ ಮತ್ತು ಜೆಎಸ್‌ಡಬ್ಲ್ಯೂ ಕೈಜೋಡಿಸಿರುವುದು ಹಲವರಿಗೆ ಹಬ್ಬದ ಸಂಭ್ರಮ ತಂದಿದ್ದರೆ, ಇನ್ನು ಕೆಲವರಿಗೆ ಇದು ಸೈದ್ಧಾಂತಿಕ ಅಪಥ್ಯವಾಗಿ ಕಾಣುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ಕಾವೇರಿದ್ದು, “ಬಂಡವಾಳಶಾಹಿಗಳ ಇಮೇಜ್ ವೃದ್ಧಿಸಲು ಸಾಹಿತ್ಯ ವೇದಿಕೆಯಾಗಬಾರದು” ಎಂದು ಪ್ರಗತಿಪರರು ಬಹಿಷ್ಕಾರದ ಕರೆ ನೀಡುತ್ತಿದ್ದಾರೆ. ಇನ್ನೊಂದೆಡೆ, “ನಮ್ಮ ಭಾಗದ ಪ್ರತಿಭೆಗಳಿಗೆ ಸಿಕ್ಕಿರುವ ದೊಡ್ಡ ವೇದಿಕೆಯನ್ನು ಕಸಿಯಬೇಡಿ” ಎಂಬ ಸ್ಥಳೀಯರ ಧ್ವನಿಯೂ ಜೋರಾಗಿಯೇ ಕೇಳಿಸುತ್ತಿದೆ.

ಸಾಹಿತ್ಯ ಮತ್ತು ಕಲೆ ಎಂದಾದರೂ ಸಂಪೂರ್ಣವಾಗಿ ‘ಸ್ವತಂತ್ರ ಬಂಡವಾಳ’ದಿಂದ ಬೆಳೆದ ಉದಾಹರಣೆ ಇತಿಹಾಸದಲ್ಲಿದೆಯೇ ಎಂದು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಹಿಂದೆ ರಾಜ-ಮಹಾರಾಜರ ಕಾಲದಲ್ಲಿಯೂ ಕವಿಗಳು ಅರಮನೆಯ ಆಶ್ರಯದಲ್ಲೇ ಬೆಳೆದರು; ರಾಜರನ್ನು ಹೊಗಳಿ ಬಿರುದು-ಬಾವಲಿ, ಚಿನ್ನದ ಕಡಗಗಳನ್ನು ಪಡೆದರು. ಅಂದು ಅರಮನೆಯ ಬೊಕ್ಕಸವಿತ್ತು, ಇಂದು ಕಾರ್ಪೊರೇಟ್ ಕಂಪನಿಗಳ ‘ಸಿಎಸ್‌ಆರ್’ (CSR) ನಿಧಿಯಿದೆ ಅಷ್ಟೇ! ಯಾವುದೇ ದೊಡ್ಡ ಮಟ್ಟದ ಕಾರ್ಯಕ್ರಮ, ಜಾತ್ರೆ ಅಥವಾ ಸಮ್ಮೇಳನ ನಡೆಯಬೇಕಾದರೆ ಅದರ ಹಿಂದೆ ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಹಣವಂತರ, ಉದ್ಯಮಿಗಳ ಅಥವಾ ರಾಜಕಾರಣಿಗಳ ಬಂಡವಾಳ ಇದ್ದೇ ಇರುತ್ತದೆ. ಹಣವಿಲ್ಲದೆ ಕೇವಲ ಆದರ್ಶದ ಮಾತುಗಳಿಂದ ಬೃಹತ್ ವೇದಿಕೆಗಳನ್ನು ಕಟ್ಟಲು ಸಾಧ್ಯವೇ ಎಂಬುದು ಕಟು ವಾಸ್ತವ.

ಇಲ್ಲಿ ಎದ್ದು ಕಾಣುವ ದೊಡ್ಡ ವಿಡಂಬನೆಯೆಂದರೆ ನಮ್ಮ ಸಾಹಿತಿಗಳ ಆಯ್ಕೆಯ ಮಡಿವಂತಿಕೆ! ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ಕಾರದ ಅನುದಾನ ಪಡೆದು ನಡೆಯುವ ಸಾಹಿತ್ಯ ಸಮ್ಮೇಳನಗಳಲ್ಲಿ, ಭ್ರಷ್ಟ ರಾಜಕಾರಣಿಗಳು ಮತ್ತು ಕಳಂಕಿತ ಅಧಿಕಾರಿಗಳ ಕೈಯಿಂದ ಹೂಮಾಲೆ ಹಾಕಿಸಿಕೊಂಡು, ಸನ್ಮಾನ ಸ್ವೀಕರಿಸುವಾಗ ಇಲ್ಲದ ಈ ‘ಸೈದ್ಧಾಂತಿಕ ಶುದ್ಧತೆ’ ಈಗ ಕಾರ್ಪೊರೇಟ್ ವೇದಿಕೆಯ ವಿಷಯದಲ್ಲಿ ಮಾತ್ರ ಏಕೆ ಜಾಗೃತವಾಗಿದೆ? ಸರ್ಕಾರದ ಹಣವೂ ಕೂಡ ತೆರಿಗೆದಾರರ ಬೆವರಿನ ಹಣವೇ, ಆದರೆ ಅದನ್ನು ಹಂಚುವ ರಾಜಕಾರಣಿಗಳು ಮಾತ್ರ ಪರಿಶುದ್ಧರೇ? ಅಲ್ಲಿ ವೇದಿಕೆ ಹಂಚಿಕೊಂಡು ನಗುಮೊಗದಿಂದ ಫೋಟೋಗೆ ಪೋಸ್ ನೀಡುವ ಗಣ್ಯರಿಗೆ, ಇಲ್ಲಿ ಉದ್ಯಮಿಯೊಬ್ಬರ ಪ್ರಾಯೋಜಕತ್ವ ಮಾತ್ರ ಅಸ್ಪೃಶ್ಯವಾಗಿ ಕಾಣುತ್ತಿರುವುದು ಹಲವರ ಹುಬ್ಬೇರಿಸುವಂತೆ ಮಾಡಿದೆ.

ಜೆಎಸ್‌ಡಬ್ಲ್ಯೂ ಸಂಸ್ಥೆಯ ಕುರಿತು ಸ್ಥಳೀಯರಲ್ಲಿ ಇರುವ ಭಾವನೆಗಳು ಕೂಡ ಎರಡು ಮುಖಗಳನ್ನು ಹೊಂದಿವೆ. ಒಂದೆಡೆ ವಿಜಯನಗರ ಬಸ್ ನಿಲ್ದಾಣದಂತಹ ಸಾರ್ವಜನಿಕ ಕಟ್ಟಡಗಳನ್ನು ನಿರ್ಮಿಸಿ, ಪ್ರವಾಸೋದ್ಯಮ ಮತ್ತು ಮೂಲಸೌಕರ್ಯಕ್ಕೆ ಕೊಡುಗೆ ನೀಡಿದ ಹಿರಿಮೆ ಆ ಸಂಸ್ಥೆಗಿದೆ. ಮತ್ತೊಂದೆಡೆ, ಗಣಿಗಾರಿಕೆ ಮತ್ತು ಕೈಗಾರಿಕೀಕರಣದಿಂದ ಈ ಭಾಗದ ನೈಸರ್ಗಿಕ ಸಂಪತ್ತು, ಕುಡಿಯುವ ನೀರು ಹಾಗೂ ಜನರ ಆರೋಗ್ಯದ ಮೇಲೆ ಆಗಿರುವ ದುಷ್ಪರಿಣಾಮಗಳ ಗಾಯವೂ ಇನ್ನೂ ಹಸಿಯಾಗಿದೆ. ಹೀಗಾಗಿ, “ನಮ್ಮ ನೆಲದ ಸಂಪತ್ತನ್ನು ಬಳಸಿಕೊಂಡವರು ಇಲ್ಲಿನ ಕಲೆ-ಸಾಹಿತ್ಯಕ್ಕೆ ಒಂದಿಷ್ಟು ಮರಳಿ ನೀಡಿದರೆ ತಪ್ಪೇನು?” ಎಂಬುದು ಬೆಂಬಲಿಗರ ವಾದವಾದರೆ, “ಪರಿಸರ ನಾಶದ ಕಳಂಕವನ್ನು ಸಾಹಿತ್ಯದ ಮುಸುಕಿನಲ್ಲಿ ಮರೆಮಾಚುವ ತಂತ್ರವಿದು” ಎಂಬುದು ವಿರೋಧಿಗಳ ಆಕ್ರೋಶವಾಗಿದೆ.

ಬೆಂಗಳೂರಿನಲ್ಲಿ ಯಶಸ್ವಿಯಾಗಿ ಸಾಹಿತ್ಯ ಉತ್ಸವಗಳನ್ನು ಸಂಘಟಿಸಿ ಸೈ ಎನಿಸಿಕೊಂಡಿರುವ ‘ಬುಕ್ ಬ್ರಹ್ಮ’ ಸಂಸ್ಥೆ, ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕದತ್ತ ಮುಖ ಮಾಡಿರುವುದು ಶ್ಲಾಘನೀಯ ಪ್ರಯತ್ನ. ಆದರೆ, ಉತ್ಸವ ಆರಂಭಕ್ಕೂ ಮುನ್ನವೇ ಎದ್ದಿರುವ ಈ ಪರ-ವಿರೋಧದ ಚರ್ಚೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದೊಂದು ವ್ಯವಸ್ಥಿತ ‘ಪ್ರಚಾರದ ಗಿಮಿಕ್’ (Publicity Stunt) ಇರಬಹುದೇ ಎಂಬ ಅನುಮಾನವೂ ಜನಸಾಮಾನ್ಯರಲ್ಲಿ ಮೂಡುತ್ತಿದೆ. ಏಕೆಂದರೆ, ಯಾವುದೇ ಕಾರ್ಯಕ್ರಮಕ್ಕೆ ಬೇಕಾದ ಅತಿ ದೊಡ್ಡ ಬಂಡವಾಳವೆಂದರೆ ಅದು ‘ಚರ್ಚೆ’. ವಿವಾದಗಳಿಲ್ಲದಿದ್ದರೆ ಇಷ್ಟೊಂದು ದೊಡ್ಡ ಮಟ್ಟದ ಪ್ರಚಾರ ಸಿಗುತ್ತಿರಲಿಲ್ಲವೇನೋ! ವಿರೋಧಿಗಳ ಟೀಕೆಯೇ ಈ ಸಾಹಿತ್ಯ ಹಬ್ಬಕ್ಕೆ ಉಚಿತ ಜಾಹೀರಾತಾಗಿ ಬದಲಾಗಿರುವುದು ಕಾಲದ ವಿಪರ್ಯಾಸ.

ಕಾರ್ಪೊರೇಟ್ ಕಂಪನಿಗಳು, ಶ್ರೀಮಂತ ಉದ್ಯಮಿಗಳು ಮತ್ತು ರಾಜಕೀಯ ನಾಯಕರ ಹಣವನ್ನು ಸಂಪೂರ್ಣವಾಗಿ ಧಿಕ್ಕರಿಸಿ, ಕೇವಲ ಜನಸಾಮಾನ್ಯರ ಚಂದಾ ಹಣದಿಂದ ಇಂತಹ ಬೃಹತ್ ಸಾಹಿತ್ಯ ಹಬ್ಬಗಳನ್ನು ಆಯೋಜಿಸುವ ಶಕ್ತಿ ಇಂದಿನ ಸಾಹಿತಿಗಳಿಗೆ ಅಥವಾ ಸಂಘಟಕರಿಗೆ ಇದೆಯೇ? ಈ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ ನಿರಾಶೆಯೇ ಎದುರಾಗುತ್ತದೆ. ಸಣ್ಣ ಪುಟ್ಟ ಕವಿಗೋಷ್ಠಿಗಳನ್ನು ಮಾಡಬಹುದೇ ಹೊರತು, ನೂರಾರು ಲೇಖಕರನ್ನು ಕರೆಸಿ, ಸಾವಿರಾರು ಓದುಗರಿಗೆ ಊಟ-ವಸತಿ ನೀಡಿ, ಹಬ್ಬದ ವಾತಾವರಣ ನಿರ್ಮಿಸಲು ಕೋಟ್ಯಂತರ ರೂಪಾಯಿ ಬೇಕೇ ಬೇಕು. ಪರ್ಯಾಯ ವ್ಯವಸ್ಥೆಯನ್ನು ಕಟ್ಟಲಾಗದ ಅಸಹಾಯಕತೆಯ ನಡುವೆ, ಸಿಕ್ಕ ಅವಕಾಶವನ್ನು ಬಳಸಿಕೊಂಡು ಜನಪರ ಆಶಯಗಳನ್ನು ಅಲ್ಲಿಯೇ ಗಟ್ಟಿಯಾಗಿ ಮಂಡಿಸುವುದು ಜಾಣತನವಲ್ಲವೇ?

ಅಂತಿಮವಾಗಿ, ವೇದಿಕೆಯನ್ನು ಯಾರು ಕಟ್ಟಿದರು ಎಂಬುದಕ್ಕಿಂತ ಆ ವೇದಿಕೆಯ ಮೇಲೆ ನಿಂತು ಸಾಹಿತಿಗಳು ಏನು ಮಾತನಾಡುತ್ತಾರೆ ಎಂಬುದು ಮುಖ್ಯವಾಗುತ್ತದೆ. ಬಂಡವಾಳಶಾಹಿಗಳ ವೇದಿಕೆಯನ್ನೇ ಬಳಸಿಕೊಂಡು, ಅದೇ ವ್ಯವಸ್ಥೆಯ ಲೋಪದೋಷಗಳನ್ನು, ಜನಸಾಮಾನ್ಯರ ನೋವುಗಳನ್ನು ಧೈರ್ಯವಾಗಿ ಹೇಳುವ ತಾಕತ್ತು ಬರಹಗಾರರಿಗೆ ಇರಬೇಕು. ವಿರೋಧ ಮತ್ತು ಬೆಂಬಲಗಳೆರಡೂ ಪ್ರಜಾಪ್ರಭುತ್ವದ ಆರೋಗ್ಯಕರ ಲಕ್ಷಣಗಳೇ ಆದರೂ, ಕೇವಲ ವಿರೋಧಕ್ಕಾಗಿ ವಿರೋಧ ಮಾಡುವುದರಿಂದ ಉತ್ತರ ಕರ್ನಾಟಕದ ಸಾಹಿತ್ಯಾಸಕ್ತರಿಗೆ ಸಿಗಬೇಕಾದ ಅಕ್ಷರ ರಸದೌತಣ ತಪ್ಪಿಹೋಗಬಾರದು. ಬಳ್ಳಾರಿಯ ನೆಲದಲ್ಲಿ ನಡೆಯುವ ಈ ಅಕ್ಷರ ಜಾತ್ರೆಯು ಕೇವಲ ಪ್ರಚಾರದ ಸದ್ದಾಗದೆ, ನಿಜವಾದ ಅರ್ಥದಲ್ಲಿ ಜನಮನವನ್ನು ಬೆಸೆಯುವ ಸೇತುವೆಯಾಗಲಿ ಎಂಬುದೇ ಎಲ್ಲರ ಆಶಯ.

ಬಂಡವಾಳವಿಲ್ಲದೆ ಜಗತ್ತಿನ ಯಾವ ಚಕ್ರವೂ ತಿರುಗುವುದಿಲ್ಲ, ಆದರೆ ಆ ಬಂಡವಾಳದ ಹಂಗಿಗೆ ಬಿದ್ದು ತನ್ನ ಆತ್ಮಸಾಕ್ಷಿಯನ್ನು ಮಾರಿಕೊಳ್ಳದಿರುವುದೇ ನಿಜವಾದ ಸಾಹಿತಿಯ ಲಕ್ಷಣ. ಕಾರ್ಪೊರೇಟ್ ಅಂಗಳದಲ್ಲೇ ನಿಂತು ಜನಪರ ಹಾಡು ಹಾಡುವ ಎದೆಗಾರಿಕೆ ನಮ್ಮ ಬರಹಗಾರರಿಗೆ ಬಂದಾಗ ಮಾತ್ರ ಇಂತಹ ಎಲ್ಲಾ ವಿವಾದಗಳಿಗೆ ತಕ್ಕ ಉತ್ತರ ಸಿಗಲು ಸಾಧ್ಯ….

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...