Home ಸಂಪಾದಕೀಯ ಕಲ್ಯಾಣ ಕರ್ನಾಟಕದಲ್ಲಿ ‘ಬಿಹಾರ’ ಮಾದರಿಯ ವಲಸೆ: ಬಿಕೋ ಎನ್ನುತ್ತಿವೆ ಹಳ್ಳಿಗಳು.
ಸಂಪಾದಕೀಯಸುದ್ದಿ

ಕಲ್ಯಾಣ ಕರ್ನಾಟಕದಲ್ಲಿ ‘ಬಿಹಾರ’ ಮಾದರಿಯ ವಲಸೆ: ಬಿಕೋ ಎನ್ನುತ್ತಿವೆ ಹಳ್ಳಿಗಳು.

Share
Share

 

 

 

 

ತವರೂರಲ್ಲೇ ಅತಿಥಿಗಳಾದ ಸ್ಥಳೀಯರು; ಬದುಕಿನ ಬಂಡಿ ಎಳೆಯಲು ಗಂಟುಮೂಟೆ ಕಟ್ಟಿದ ಶ್ರಮಿಕರ ಕಷ್ಟ ಕೇಳುವವರು ಯಾರು?…

 

ಮರ್ಚೇಡ್ ಡೇಸ್|ವಿಶೇಷ ವರದಿ ಗಂಗಾವತಿ/ಕೊಪ್ಪಳ/ರಾಯಚೂರು.

ಗಂಗಾವತಿ (ಕೊಪ್ಪಳ): ಕೊಪ್ಪಳ ಜಿಲ್ಲೆ ಮೇಲ್ನೋಟಕ್ಕೆ ಅರ್ಧ ನೀರಾವರಿ ಮತ್ತು ಅರ್ಧ ಒಣಭೂಮಿಯನ್ನು ಸಮಪ್ರಮಾಣದಲ್ಲಿ ಹೊಂದಿರುವ ಸಂಪದ್ಭರಿತ ಜಿಲ್ಲೆಯಂತೆ ಕಾಣುತ್ತದೆ. ಆದರೆ, ಈ ಹಸಿರಿನ ಮರೆಯಲ್ಲೇ ಕಣ್ಣೀರಿನ ಕಡಲೊಂದು ಹರಿಯುತ್ತಿದೆ. ಜಿಲ್ಲೆಯ ಬಹುತೇಕ ತಾಲೂಕುಗಳ ಹಳ್ಳಿಗಳು ಇಂದು ಜನರಿಲ್ಲದೆ ಬಿಕೋ ಎನ್ನುತ್ತಿವೆ. ಹೊಟ್ಟೆಪಾಡಿಗಾಗಿ ಇಲ್ಲಿನ ಜನರು ಬೆಂಗಳೂರು, ಗೋವಾ, ಉಡುಪಿ, ಕುಂದಾಪುರ, ಶಿವಮೊಗ್ಗ ಹಾಗೂ ಕಾರವಾರದಂತಹ ಮಹಾನಗರಗಳಿಗೆ ಪ್ರತಿವರ್ಷ ಗುಳೆ ಹೋಗುತ್ತಿದ್ದಾರೆ. ವರ್ಷದ ಹತ್ತು ತಿಂಗಳು ಪರವೂರಿನ ಬೀದಿಗಳಲ್ಲಿ ಬೆವರು ಸುರಿಸುವ ಇವರು, ಕೇವಲ ಹಬ್ಬ, ಜಾತ್ರೆ, ಹುಣ್ಣಿಮೆ ಹಾಗೂ ಚುನಾವಣೆ ಬಂದಾಗ ಮಾತ್ರ ತಮ್ಮ ಸ್ವಂತ ಊರಿಗೆ ಬಂದು ಹೋಗುವ ‘ಅತಿಥಿ’ಗಳಾಗಿದ್ದಾರೆ.

ಇಲ್ಲಿನ ಗ್ರಾಮಗಳಿಗೆ ಮಧ್ಯಾಹ್ನದ ಹೊತ್ತು ಭೇಟಿ ನೀಡಿದರೆ ಆಂಜನೇಯನ ಗುಡಿ, ಮಾರಿಯಮ್ಮನ ದೇವಸ್ಥಾನದ ಆವರಣ ಅಥವಾ ಮನೆಯ ಕಟ್ಟೆಯ ಮೇಲೆ ಕೇವಲ ದುಡಿಯಲು ಶಕ್ತಿಯಿಲ್ಲದ ವೃದ್ಧರು ಮಾತ್ರ ಕಾಣಸಿಗುತ್ತಾರೆ. ದುಡಿಯುವ ಕೈಗಳೆಲ್ಲವೂ ಪರವೂರಿನ ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ, ತೋಟ-ಗದ್ದೆಗಳ ನಿರ್ವಹಣೆಯಲ್ಲಿ ಹಾಗೂ ಫಾರ್ಮ್ ಹೌಸ್‌ಗಳಲ್ಲಿ ಕರಗಿಹೋಗುತ್ತಿವೆ. ಇನ್ನು ಪ್ರತಿಭಾವಂತ ಯುವಕರು ಮತ್ತು ವಿದ್ಯಾರ್ಥಿಗಳು ಕೂಡ ಸ್ಥಳೀಯವಾಗಿ ಅವಕಾಶಗಳಿಲ್ಲದೆ ಬೆಂಗಳೂರಿನಂತಹ ನಗರಗಳತ್ತ ಮುಖ ಮಾಡಿದ್ದಾರೆ. “ಓದು ಮಗನೇ, ನಮ್ಮಂತೆ ಈ ಊರಿನಲ್ಲಿ ನರಳಬೇಡ, ಬೇರೆ ಊರಿಗೆ ಹೋಗಿ ನಿನ್ನ ಬದುಕು ಕಟ್ಟಿಕೋ” ಎಂಬುದೇ ಇಂದಿನ ಕಲ್ಯಾಣ ಕರ್ನಾಟಕದ ಪೋಷಕರ ಕರುಣಾಜನಕ ನೀತಿಪಾಠವಾಗಿದೆ.

ಕೇವಲ ಬಡತನವಷ್ಟೇ ಅಲ್ಲ, ಇಲ್ಲಿನ ಗುಳೆಗೆ ವಿಭಿನ್ನ ಮತ್ತು ಸಂಕೀರ್ಣ ಕಾರಣಗಳೂ ಇವೆ. ಕೆಲವರು ತಮ್ಮ ಮಕ್ಕಳಿಗೆ ಒಳ್ಳೆಯ ಶಾಲೆಯಲ್ಲಿ ಶಿಕ್ಷಣ ಕೊಡಿಸಲು ವಯಸ್ಸಾದ ತಂದೆ-ತಾಯಿಯ ಬಳಿ ಮಕ್ಕಳನ್ನು ಬಿಟ್ಟು ಪರವೂರಿನಲ್ಲಿ ದುಡಿಯುತ್ತಿದ್ದಾರೆ. ಇನ್ನೊಂದು ವರ್ಗವು ದೇವರ ಹರಕೆ ತೀರಿಸಲು, ಮರಿ-ಕುರಿ ಬಲಿಕೊಡಲು ಹಾಗೂ ಅದ್ಧೂರಿ ಮದುವೆಗಳನ್ನು ಮಾಡಲು ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಳ್ಳುತ್ತದೆ. ಆ ಸಾಲವನ್ನು ತೀರಿಸಲು ಮುಂದಿನ ಜಾತ್ರೆ ಬರುವವರೆಗೂ ಪರವೂರಿನಲ್ಲಿ ಕೂಲಿ ಮಾಡುವುದು, ಮತ್ತೆ ಊರಿಗೆ ಬಂದು ಹೊಸ ಸಾಲ ಮಾಡುವುದು—ಹೀಗೆ ಸಾಲ ಮತ್ತು ಗುಳೆಯ ವಿಷಚಕ್ರದಲ್ಲಿ ಇಲ್ಲಿನ ಜನರು ಸಿಲುಕಿ ನಲುಗುತ್ತಿದ್ದಾರೆ.

ಕೊಪ್ಪಳದ ತಾವರಗೆರೆ ಸುತ್ತಮುತ್ತಲಿನ ಗ್ರಾಮಸ್ಥರು ಕಾರವಾರ, ಅಂಕೋಲಾ ಮತ್ತು ಮಹಾರಾಷ್ಟ್ರದಲ್ಲಿ ನಿರಂತರವಾಗಿ ದುಡಿಯುತ್ತಿದ್ದಾರೆ. ಅಲ್ಲಿ ಸಿಗುವ ಕೂಲಿ ಕಡಿಮೆಯಿದ್ದರೂ, ವರ್ಷಪೂರ್ತಿ ಕೆಲಸ ಸಿಗುತ್ತದೆ ಎಂಬ ಒಂದೇ ಕಾರಣಕ್ಕೆ ಅವರು ಅಲ್ಲಿಯೇ ಉಳಿದಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವೊಂದು ಕಲ್ಲುಹೃದಯವನ್ನೂ ಕರಗಿಸುವಂತಿತ್ತು. ರಾಯಚೂರು ಭಾಗದ ಗ್ರಾಮಸ್ಥರು ಕುಂದಾಪುರದ ರಸ್ತೆ ಬದಿಯಲ್ಲಿ ಮಳೆ, ಗಾಳಿ, ಚಳಿಯನ್ನೂ ಲೆಕ್ಕಿಸದೆ ಬೀದಿಯಲ್ಲೇ ಮಲಗಿ, ಅಲ್ಲೇ ಅಡುಗೆ ಮಾಡಿಕೊಂಡು, ಯಾರಾದರೂ ಕೆಲಸಕ್ಕೆ ಕರೆದಾಗ ಹೋಗಿ ದುಡಿಯುವ ದೃಶ್ಯ ಎಂತಹವರನ್ನೂ ಬೆಚ್ಚಿಬೀಳಿಸುತ್ತದೆ. ಹೀಗೆಯೇ ಇವರ ಬದುಕಿನ ಎರಡು, ಐದು, ಹತ್ತು ವರ್ಷಗಳು ಕಳೆದುಹೋಗಿವೆ.

ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಇಂದು ಅಕ್ಷರಶಃ ‘ಕರ್ನಾಟಕದ ಬಿಹಾರ’ದಂತೆ ಭಾಸವಾಗುತ್ತಿವೆ. ಅಲ್ಲಿನ ಬಡತನ, ನಿರುದ್ಯೋಗ ಮತ್ತು ರಾಜಕೀಯ ದೊಂಬರಾಟಗಳು ಇಲ್ಲಿಯೂ ಯಥಾವತ್ತಾಗಿ ನಡೆಯುತ್ತಿವೆ. ಉದ್ಯೋಗವಿಲ್ಲದ ಹತಾಶೆ ಎಷ್ಟರಮಟ್ಟಿಗೆ ತಲುಪಿದೆ ಎಂದರೆ, ಇತ್ತೀಚೆಗೆ ಸಮಾಧಿಗಳಿಂದ ಮೂಳೆಗಳನ್ನು ತೆಗೆದು ಮಾರಾಟ ಮಾಡುವಂತಹ ಭೀಕರ ದಂಧೆಗಳೂ ಈ ಭಾಗದಲ್ಲಿ ಕೇಳಿಬಂದಿವೆ. ಕೈಗಾರಿಕೆಗಳ ಕೊರತೆ ಮತ್ತು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದಿಂದಾಗಿ ಈ ಭಾಗದ ಯುವಜನತೆ ಮತ್ತು ಕಾರ್ಮಿಕರು ಅಕ್ಷರಶಃ ಅತಂತ್ರರಾಗಿದ್ದಾರೆ.

ಗ್ರಾಮೀಣ ಭಾಗದ ಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ನೀಡಲು ಜಾರಿಗೆ ತಂದಿರುವ ‘ಮಹಾತ್ಮ ಗಾಂಧಿ ನರೇಗಾ’ ಯೋಜನೆ ಇಲ್ಲಿ ಸಂಪೂರ್ಣವಾಗಿ ಹಳ್ಳಹಿಡಿದಿದೆ. ಪರವೂರಿಗೆ ಗುಳೆ ಹೋದವರ ಹೆಸರಿನಲ್ಲಿ ಜಾಬ್ ಕಾರ್ಡ್‌ಗಳಿರುತ್ತವೆ. ಆದರೆ, ಕೆಲಸ ಮಾಡದೆಯೇ ಆಟೋಗಳಲ್ಲಿ ಜನರನ್ನು ಕರೆದುಕೊಂಡು ಹೋಗಿ ಜಿಪಿಎಸ್ (GPS) ಫೋಟೋ ತೆಗೆದು, ಅಕೌಂಟ್‌ಗೆ ಹಣ ಬಂದಾಗ ಅದರಲ್ಲಿ ಪಾಲು ಪಡೆಯುವ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸದಸ್ಯರಿಗೆ ಇದು ಒಂದು ‘ಸಹಜ ಸಾಮಾಜಿಕ ಕಾರ್ಯ’ ಎಂಬಂತಾಗಿದ್ದು, ವ್ಯವಸ್ಥೆಯನ್ನು ಸರಿಪಡಿಸುವುದು ನೀರಿನಲ್ಲಿ ಪಾಚಿ ತೆಗೆದಷ್ಟೇ ಕಷ್ಟ ಎಂಬ ಸ್ಥಿತಿ ನಿರ್ಮಾಣವಾಗಿದೆ.

ವಿಪರ್ಯಾಸವೆಂದರೆ, ಇಲ್ಲಿನ ಜಿಲ್ಲಾಧಿಕಾರಿಗಳಿಂದ ಹಿಡಿದು ಜನಪ್ರತಿನಿಧಿಗಳವರೆಗೆ ಯಾರ ಬಳಿಯೂ ತಮ್ಮ ವ್ಯಾಪ್ತಿಯ ಎಷ್ಟು ಜನ ಹೊರರಾಜ್ಯ, ಹೊರಜಿಲ್ಲೆಗಳಿಗೆ ಗುಳೆ ಹೋಗಿದ್ದಾರೆ ಎಂಬ ನಿಖರ ಮಾಹಿತಿಯೇ ಇಲ್ಲ. ಈ ಜನರು ಆಳುವವರಿಗೆ ಕೇವಲ ‘ವೋಟರ್ಸ್’ (ಮತದಾರರು) ಮಾತ್ರ ಆಗಿದ್ದಾರೆ. ಚುನಾವಣೆ ಬಂದಾಗ ಮಾತ್ರ ರಾಜಕೀಯ ನಾಯಕರಿಗೆ ಮತ್ತು ಅವರ ಹಿಂಬಾಲಕರಿಗೆ ವೋಟರ್ ಲಿಸ್ಟ್ ಹಿಡಿದು ಇವರ ನೆನಪಾಗುತ್ತದೆ. ಆಗ ಕಾರು, ಬಸ್ಸು, ಹಣ, ತಿಂಡಿ-ತೀರ್ಥದ ವ್ಯವಸ್ಥೆ ಮಾಡಿ ಇವರನ್ನು ಊರಿಗೆ ಕರೆಸಿಕೊಳ್ಳಲಾಗುತ್ತದೆ. ಮತದಾನ ಮುಗಿದ ಮರುಕ್ಷಣವೇ ಇವರ ದಾರಿ ಇವರಿಗೆ, ರಾಜಕಾರಣಿಗಳ ದಾರಿ ಅವರಿಗೆ!

ಸರ್ಕಾರಿ ದಾಖಲೆಗಳಲ್ಲಿ ಕೇವಲ ತೆರಿಗೆ ಕಟ್ಟುವವರಾಗಿ ಮತ್ತು ಮತ ಹಾಕುವವರಾಗಿ ಉಳಿದಿರುವ ಈ ಬಡ ಕಾರ್ಮಿಕರ ಗೋಳು ಕೇಳುವವರು ಯಾರೂ ಇಲ್ಲದಂತಾಗಿದೆ. ಪ್ರಜಾಸೇವೆ ಮಾಡಲೆಂದು ಬಂದಿರುವ ಅಧಿಕಾರಿಗಳು ಕೇವಲ ಕಚೇರಿಗಳಿಗೆ ಸೀಮಿತವಾಗಿದ್ದರೆ, ಜನಪ್ರತಿನಿಧಿಗಳು ತಮ್ಮ ಸ್ವಾರ್ಥ ರಾಜಕಾರಣದಲ್ಲಿ ಮುಳುಗಿದ್ದಾರೆ. ಸ್ಥಳೀಯವಾಗಿ ಕೈಗಾರಿಕೆಗಳನ್ನು ಸ್ಥಾಪಿಸಿ, ಕೃಷಿ ಆಧಾರಿತ ಉದ್ಯೋಗಗಳನ್ನು ಸೃಷ್ಟಿಸುವ ಇಚ್ಛಾಶಕ್ತಿ ಯಾರಿಗೂ ಇದ್ದಂತಿಲ್ಲ. ಪರಿಣಾಮವಾಗಿ, ತಲೆತಲಾಂತರಗಳಿಂದ ಇದೇ ಊರಿನ ಮಣ್ಣಿನಲ್ಲಿ ಬೆರೆತಿದ್ದ ಜನರು ಇಂದು ತಮ್ಮದೇ ನೆಲದಲ್ಲಿ ಅನಾಥರಾಗಿದ್ದಾರೆ.

ಸ್ವಂತ ಊರಿಗೆ ಹಬ್ಬಕ್ಕೋ, ಜಾತ್ರೆಗೋ ಬಂದಾಗ ಅಕ್ಕಪಕ್ಕದವರು ಪ್ರೀತಿಯಿಂದ “ಯಾವಾಗ ಬಂದೆ?” ಎಂದು ವಿಚಾರಿಸುತ್ತಾರೆ. ಆದರೆ, ಎರಡೇ ದಿನ ಕಳೆಯುವಷ್ಟರಲ್ಲಿ “ಮತ್ತೆ ಯಾವಾಗ ವಾಪಸ್ ಹೋಗುತ್ತೀಯಾ?” ಎಂಬ ಪ್ರಶ್ನೆ ಎದುರಾಗುತ್ತದೆ. ಈ ಒಂದು ಪ್ರಶ್ನೆ ಗುಳೆ ಹೋದವನ ಎದೆಯಲ್ಲಿ ಚೂರಿ ಇರಿದಂತಹ ನೋವನ್ನುಂಟು ಮಾಡುತ್ತದೆ. ತಾನು ಹುಟ್ಟಿ ಬೆಳೆದ ಊರಿನಲ್ಲೇ ತಾನೊಬ್ಬ ಅತಿಥಿಯಾಗಿ ಉಳಿದುಬಿಟ್ಟೆನಲ್ಲ ಎಂಬ ಅಸಹಾಯಕತೆಯನ್ನು ನುಂಗಿಕೊಂಡು, ಮತ್ತೆ ಗಂಟುಮೂಟೆ ಕಟ್ಟಿಕೊಂಡು ಪರವೂರಿನ ಬಸ್ಸು ಹತ್ತುವುದು ಇಲ್ಲಿನವರ ಅನಿವಾರ್ಯ ಕರ್ಮವಾಗಿದೆ.

ಇನ್ನೇನು ಕೆಲವೇ ತಿಂಗಳುಗಳಲ್ಲಿ ಮತ್ತೆ ಚುನಾವಣೆಗಳು ಬರುತ್ತಿವೆ. ಮತ್ತೆ ಊಟ ಹಾಕಿ, ಹಣ ಕೊಟ್ಟು ನಮ್ಮ ಮತಗಳನ್ನು ಕೊಳ್ಳುವ ಪ್ರಯತ್ನಗಳು ನಡೆಯಲಿವೆ. ಆದರೆ, ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ. ನಮ್ಮ ಗುಳೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಎಷ್ಟು ಕಾರಣರೋ, ಪ್ರಶ್ನಿಸದೆ ಸುಮ್ಮನಿರುವ ನಾವು ಕೂಡ ಅಷ್ಟೇ ಹೊಣೆಗಾರರು. ಗುಲಾಬಿ ನಗರಿ ಬೆಂಗಳೂರಿನ ಕಾಂಕ್ರೀಟ್ ಕಾಡಿನಲ್ಲಿ ಮುದುಡಿ ಹೋಗಿರುವ ನಮ್ಮ ಬದುಕಿನ ಹೂವು, ನಮ್ಮದೇ ಊರಿನ ಗುಬ್ಬಚ್ಚಿ ಗೂಡಿನಲ್ಲಿ ಮತ್ತೆ ಅರಳಬೇಕಿದೆ. ಆ ನಿಟ್ಟಿನಲ್ಲಿ ಆಳುವವರ ಕಣ್ಣು ತೆರೆಸುವ ಕೆಲಸ ಇಂದೇ ಆಗಬೇಕಿದೆ.

ವಿಶೇಷ ವರದಿ.
ಟಿಎಸ್ ಮರ್ಚೆಡ್.

 

 

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...