ಮರ್ಚೆಡ್ ಡೇಸ್|ವಿಶೇಷ ಲೇಖನ:
ಹಳ್ಳಿ ಸೊಗಡಿನ ‘ಪ್ರೇಮದ ಊರಲ್ಲಿ’ ತಂದ ಹೌಸ್ಫುಲ್ ನೆನಪುಗಳಿಂದ ನೂರಾರು ಕೋಟಿಗಳ ಪಿವಿಆರ್-ಐನಾಕ್ಸ್ ಕ್ರಾಂತಿಯಾಗಿ ಬೆಳೆದ ಒಂದು ರೋಚಕ ಪಯಣ.
ಕಳೆದ ತಿಂಗಳು ತೆರೆಕಂಡ ಕನ್ನಡದ ಅಪ್ಪಟ ಗ್ರಾಮೀಣ ಸೊಗಡಿನ ‘ಪ್ರೇಮದ ಊರಲ್ಲಿ’ ಚಿತ್ರವನ್ನು ಕಣ್ತುಂಬಿಕೊಳ್ಳಲು ಚಿತ್ರಮಂದಿರದತ್ತ ಹೆಜ್ಜೆ ಹಾಕಿದಾಗ ಎದುರಾಗಿದ್ದು ಅಚ್ಚರಿಯ ದೃಶ್ಯ. ಗೇಟಿನ ಮುಂದೆ ತೂಗಾಡುತ್ತಿದ್ದ ‘ಹೌಸ್ಫುಲ್’ ಬೋರ್ಡ್ ನೋಡಿ ಎಷ್ಟೋ ವರ್ಷಗಳೇ ಉರುಳಿಹೋದಂತೆ ಭಾಸವಾಯಿತು. ಬಾಲ್ಯದಲ್ಲಿ ಟಿಕೆಟ್ಗಾಗಿ ಮುಗಿಬಿದ್ದು, ಕ್ಯೂನಲ್ಲಿ ನಿಂತು ಶಿಳ್ಳೆ ಹೊಡೆಯುತ್ತಿದ್ದ ಆ ಸಂಭ್ರಮದ ದಿನಗಳು ಒಮ್ಮೆಲೆ ಕಣ್ಮುಂದೆ ಮೆರವಣಿಗೆ ಹೊರಟವು. ಆದರೆ ಕೌಂಟರ್ನಲ್ಲಿ ಟಿಕೆಟ್ ಸಿಗದೆ ನಿರಾಸೆಯಿಂದ ಮನೆಗೆ ಮರಳಿದಾಗ, ಇಂದಿನ ಸಿನಿಮಾ ಪ್ರಪಂಚ ಎಷ್ಟು ಸದ್ದಿಲ್ಲದೆ ಬದಲಾಗಿಹೋಗಿದೆ ಎಂಬ ಅರಿವು ಮೂಡಿತು.
ಮರುದಿನವೂ ಅದೇ ಕಥೆ ಪುನರಾವರ್ತನೆಯಾದಾಗ ವಿಚಾರಿಸಿದರೆ ಸಿಕ್ಕ ಉತ್ತರ ಆಧುನಿಕತೆಯ ಕಪಾಳಮೋಕ್ಷದಂತಿತ್ತು. ಕೌಂಟರ್ ಮುಂದೆ ನಿಂತು ಚಿಲ್ಲರೆ ಎಣಿಸಿ ಟಿಕೆಟ್ ಹರಿದುಕೊಳ್ಳುತ್ತಿದ್ದ ಕಾಲ ಮುಗಿದುಹೋಗಿದೆ; ಬೆರಳ ತುದಿಯ ಮೊಬೈಲ್ ಆ್ಯಪ್ಗಳಲ್ಲೇ ಇಂದಿನ ಪ್ರದರ್ಶನ ಮಾತ್ರವಲ್ಲ, ಮುಂದಿನ ಎರಡು ದಿನಗಳ ಸೀಟುಗಳೂ ಮೊದಲೇ ಬುಕ್ ಆಗಿಬಿಡುತ್ತವೆ. ಸಿನಿಮಾ ನೋಡುವ ಸಂಭ್ರಮ ಹಾಗೇ ಉಳಿದಿದೆ, ಆದರೆ ನಾವು ಚಿತ್ರಮಂದಿರದ ಬಾಗಿಲಿಗೆ ಹೋಗುವ ದಾರಿಯೇ ಸಂಪೂರ್ಣ ಡಿಜಿಟಲ್ ರೂಪಕ್ಕೆ ಮಾರ್ಪಟ್ಟಿದೆ.
ಒಂದಾನೊಂದು ಕಾಲದಲ್ಲಿ ಊರ ಜಾತ್ರೆಯಂತೆ ಕಳೆಗಟ್ಟುತ್ತಿದ್ದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಇಂದು ಅನಾಥವಾಗಿ ನಿಂತಿವೆ. ಪ್ರೇಕ್ಷಕರಿಲ್ಲದೆ ಭಣಗುಡುತ್ತಿದ್ದ ಬೃಹತ್ ಕಟ್ಟಡಗಳು ನೆಲಸಮವಾಗಿ, ಅವುಗಳ ಜಾಗದಲ್ಲಿ ಕಾಂಕ್ರೀಟ್ ಶಾಪಿಂಗ್ ಮಾಲ್ಗಳು, ಹೊಟೇಲ್ಗಳು ಹಾಗೂ ವಾಣಿಜ್ಯ ಮಳಿಗೆಗಳು ತಲೆಯೆತ್ತಿವೆ. “ಭಾರತದಲ್ಲಿ ಸಿನಿಮಾಗಳಿಗೆ ಭವಿಷ್ಯವಿದೆ, ಆದರೆ ಸಿನಿಮಾ ಥಿಯೇಟರ್ಗಳಿಗೆ ಉಳಿಗಾಲವಿಲ್ಲ” ಎಂದು ಎಲ್ಲರೂ ಶೋಕಗೀತೆ ಹಾಡುತ್ತಿದ್ದ ಹೊತ್ತಿನಲ್ಲೇ, ಬೆಳ್ಳಿತೆರೆಯ ವ್ಯಾಪಾರಕ್ಕೆ ಹೊಸ ಜೀವ ತುಂಬುವ ಕ್ರಾಂತಿಯೊಂದು ಸದ್ದಿಲ್ಲದೆ ಶುರುವಾಗಿತ್ತು.
ಮಲ್ಟಿಪ್ಲೆಕ್ಸ್ಗಳು ಬರುವ ಮುನ್ನ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿದ್ದ ವಾಸ್ತವವೇ ಬೇರೆಯಾಗಿತ್ತು. ಮಸುಕಾದ, ಸರಿಯಾಗಿ ಬೆಳಕು ಮೂಡದ ಪರದೆಗಳು, ಕೀರಲು ಧ್ವನಿಯ ಹಳೆಯ ಸೌಂಡ್ ಸಿಸ್ಟಮ್, ಬೆನ್ನು ನೋವು ತರಿಸುವ ಗಟ್ಟಿ ಮರದ ಕುರ್ಚಿಗಳು ಮತ್ತು ಧೂಳು ತುಂಬಿದ ವಾತಾವರಣವೇ ಅಲ್ಲಿ ಸಾಮಾನ್ಯ. ವಾಹನಗಳನ್ನು ನಿಲ್ಲಿಸಲು ಸರಿಯಾದ ಪಾರ್ಕಿಂಗ್ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲೇ ಕಿರಿಕಿರಿಯ ಪಡಿಪಾಟಲು, ಮಹಿಳೆಯರು-ಕುಟುಂಬದವರಿಗೆ ಮುಜುಗರ ತರುವಂತಹ ಅಸ್ವಚ್ಛ ಶೌಚಾಲಯಗಳು ಪ್ರೇಕ್ಷಕರನ್ನು ಹೈರಾಣಾಗಿಸುತ್ತಿದ್ದವು.
ಇಂಥ ಹೊತ್ತಿನಲ್ಲಿ ಪ್ರೇಕ್ಷಕರ ಸಿನಿಮಾ ಅಭಿರುಚಿಯನ್ನು ಸೂಕ್ಷ್ಮವಾಗಿ ಗಮನಿಸಿದ ಪಿವಿಆರ್, ಗುಣಮಟ್ಟದಲ್ಲಿ ಕಿಂಚಿತ್ತೂ ರಾಜಿ ಮಾಡಿಕೊಳ್ಳದ ಹೊಚ್ಚಹೊಸ ಅನುಭವವನ್ನು ಉಣಬಡಿಸಲು ಮುಂದಾಯಿತು. ವಾಹನ ನಿಲ್ಲಿಸಲು ಸುಸಜ್ಜಿತ, ಸುರಕ್ಷಿತ ಅಂಡರ್ಗ್ರೌಂಡ್ ಪಾರ್ಕಿಂಗ್ನಿಂದ ಹಿಡಿದು ಹವಾನಿಯಂತ್ರಿತ ಪರಿಸರ, ಮೃದುವಾದ ಪುಷ್-ಬ್ಯಾಕ್ ಆಸನಗಳು, ಅತ್ಯಾಧುನಿಕ ಡಾಲ್ಬಿ ಅಟ್ಮಾಸ್ ಸೌಂಡ್ ಹಾಗೂ ನಿಷ್ಕಳಂಕ ಸ್ಫಟಿಕ ಸ್ಪಷ್ಟತೆಯ ಡಿಜಿಟಲ್ ಸ್ಕ್ರೀನ್ಗಳನ್ನು ನೀಡಿ ಪ್ರೇಕ್ಷಕರಿಗೆ ರಾಜಾತಿಥ್ಯ ಕಲ್ಪಿಸಿತು. ಯಾವುದೇ ಗದ್ದಲ, ನೂಕುನುಗ್ಗಲು ಇಲ್ಲದೆ ಕುಟುಂಬ ಸಮೇತ ನಿರಾಳವಾಗಿ ಬಂದು ಸಿನಿಮಾ ಆನಂದಿಸುವ ಹೊಸ ಸಂಸ್ಕೃತಿಯನ್ನು ಅದು ಕಟ್ಟಿ ಬೆಳೆಸಿತು.
ಈ ಕ್ರಾಂತಿಯ ರೂವಾರಿಯೇ ಅಜಯ್ ಬಿಜ್ಲಿ. 1978ರಲ್ಲಿ ದೆಹಲಿಯಲ್ಲಿ ಕೇವಲ ಒಂದು ಸಾಂಪ್ರದಾಯಿಕ ಚಿತ್ರಮಂದಿರ ‘ಪ್ರಿಯಾ ಸಿನಿಮಾಸ್’ ನಡೆಸುತ್ತಿದ್ದ ಬಿಜ್ಲಿ ಕುಟುಂಬ, ಭಾರತೀಯರ ಸಿನಿಮಾ ವೀಕ್ಷಣೆಯ ಶೈಲಿಯನ್ನೇ ಬದಲಿಸುವ ಕನಸು ಕಂಡಿತು. 1995ರಲ್ಲಿ ಆಸ್ಟ್ರೇಲಿಯಾದ ‘ವಿಲ್ಲೇಜ್ ರೋಡ್ಶೋ’ ಜತೆಗೂಡಿ, 1997ರಲ್ಲಿ ದೆಹಲಿಯ ಸಾಕೇತ್ನಲ್ಲಿ ಭಾರತದ ಮೊಟ್ಟಮೊದಲ 4-ಸ್ಕ್ರೀನ್ಗಳ ‘ಪಿವಿಆರ್ ಅನುಪಮ್’ ಮಲ್ಟಿಪ್ಲೆಕ್ಸ್ ನಿರ್ಮಿಸಿದಾಗ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ಪುಟ ತೆರೆದುಕೊಂಡಿತು.
2000ರ ದಶಕದಲ್ಲಿ ಭಾರತದ ನಗರಗಳಲ್ಲಿ ಕಾಲಿಟ್ಟ ಮಾಲ್ ಸಂಸ್ಕೃತಿಯನ್ನು ಪಿವಿಆರ್ ಅತ್ಯಂತ ಜಾಣ್ಮೆಯಿಂದ ತನ್ನ ಬೆಳವಣಿಗೆಗೆ ಬಳಸಿಕೊಂಡಿತು. ಕೇವಲ ಸಿನಿಮಾ ಪ್ರದರ್ಶನಕ್ಕೆ ಸೀಮಿತವಾಗದೆ IMAX, 4DX, ಗೋಲ್ಡ್ ಕ್ಲಾಸ್ ಹಾಗೂ ಮಕ್ಕಳಿಗಾಗಿ ಪ್ಲೇಹೌಸ್ನಂತಹ ಸ್ವರೂಪಗಳನ್ನು ಪರಿಚಯಿಸಿ ಸಿನಿಮಾ ನೋಡುವುದನ್ನೇ ಒಂದು ಐಷಾರಾಮಿ ಜೀವನಶೈಲಿಯನ್ನಾಗಿ ಪರಿವರ್ತಿಸಿತು. ಮಾರುಕಟ್ಟೆಯಲ್ಲಿ ತನ್ನ ಗಟ್ಟಿತನ ಕಾಪಾಡಿಕೊಳ್ಳಲು ಸಿನೆಮ್ಯಾಕ್ಸ್, ಡಿಟಿ ಸಿನಿಮಾಸ್ ಹಾಗೂ ದಕ್ಷಿಣ ಭಾರತದ ಹೆಮ್ಮೆಯ ಸತ್ಯಂ (SPI) ಸಿನಿಮಾಸ್ಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡು ಬೃಹದಾಕಾರವಾಗಿ ಬೆಳೆಯಿತು.
ನೂರು ಸಾಂಪ್ರದಾಯಿಕ ಚಿತ್ರಮಂದಿರಗಳು ಇಡೀ ದಿನ ಬೆವರು ಸುರಿಸಿ ಗಳಿಸುವ ಒಟ್ಟು ಆದಾಯವನ್ನು, ಇಂದು ಒಂದು ಮಾಲ್ನಲ್ಲಿರುವ ಕೇವಲ ಒಂದೇ ಒಂದು ಪಿವಿಆರ್ ಸುಲಭವಾಗಿ ಬಾಚಿಕೊಳ್ಳುತ್ತದೆ. ಇದು ಕೇವಲ ಟಿಕೆಟ್ ದರದಿಂದಷ್ಟೇ ಸಾಧ್ಯವಾಗುತ್ತಿಲ್ಲ; ಒಟ್ಟು ಆದಾಯದ ಶೇ. 50ರಷ್ಟು ಭಾಗ ಟಿಕೆಟ್ನಿಂದ ಬಂದರೆ, ಸುಮಾರು ಶೇ. 30ರಷ್ಟು ಹಣ ಪಾಪ್ಕಾರ್ನ್, ಕೂಲ್ಡ್ರಿಂಕ್ಸ್ ಮತ್ತು ಬಿಸಿಬಿಸಿ ತಿನಿಸುಗಳ ಮಾರಾಟದಿಂದಲೇ ಹರಿದುಬರುತ್ತದೆ. ಇವುಗಳ ಮೇಲಿನ ಲಾಭದ ಪ್ರಮಾಣ ಶೇ. 70ಕ್ಕೂ ಹೆಚ್ಚು! ಇದರೊಂದಿಗೆ ಆನ್-ಸ್ಕ್ರೀನ್ ಕಾರ್ಪೊರೇಟ್ ಜಾಹೀರಾತುಗಳು ಹಾಗೂ ಆನ್ಲೈನ್ ಟಿಕೆಟ್ ಬುಕಿಂಗ್ ಶುಲ್ಕಗಳು ಈ ಸಂಸ್ಥೆಯ ಬೊಕ್ಕಸವನ್ನು ಸದಾ ತುಂಬಿಸುತ್ತವೆ.
ಆದರೆ ಈ ಮೆಗಾ ಸಾಮ್ರಾಜ್ಯಕ್ಕೂ ಕೋವಿಡ್ ರೂಪದಲ್ಲಿ ಭಾರಿ ಪೆಟ್ಟು ಬಿತ್ತು. ಸತತ ಲಾಕ್ಡೌನ್ಗಳಿಂದ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಬಾಗಿಲು ಮುಚ್ಚಿದ ಮಲ್ಟಿಪ್ಲೆಕ್ಸ್ಗಳು ಬಾಡಿಗೆ ಮತ್ತು ನಿರ್ವಹಣಾ ವೆಚ್ಚ ಭರಿಸಲಾಗದೆ ಸಾವಿರಾರು ಕೋಟಿ ರೂಪಾಯಿಗಳ ನಷ್ಟದ ಸುಳಿಗೆ ಸಿಲುಕಿದವು. ಮತ್ತೊಂದೆಡೆ ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ನಂತಹ ಒಟಿಟಿ ವೇದಿಕೆಗಳು ಜನರ ಮನೆಯನ್ನೇ ಮಿನಿ ಥಿಯೇಟರ್ ಮಾಡಿ ಸವಾಲೊಡ್ಡಿದವು. ಚಿತ್ರರಂಗದ ಈ ಕರಾಳ ಹಂತದಲ್ಲಿ ದಿವಾಳಿತನದಿಂದ ಪಾರಾಗಲು ಬಲಿಷ್ಠ ಒಕ್ಕೂಟದ ತಂತ್ರಗಾರಿಕೆ ಅನಿವಾರ್ಯವಾಯಿತು.
ಸಂಕಷ್ಟದ ಸಮಯದಲ್ಲಿ ದೇಶದ ನಂಬರ್ 1 ಸಂಸ್ಥೆ ಪಿವಿಆರ್ ಮತ್ತು ಅದರ ಬದ್ಧ ಪ್ರತಿಸ್ಪರ್ಧಿ, ನಂಬರ್ 2 ಸಂಸ್ಥೆ ಐನಾಕ್ಸ್ (INOX) ಪರಸ್ಪರ ಕಾಲೆಳೆಯುವುದನ್ನು ಬಿಟ್ಟು ಕೈಜೋಡಿಸಲು ನಿರ್ಧರಿಸಿದವು. 2023ರ ಫೆಬ್ರವರಿಯಲ್ಲಿ ಜಾರಿಗೆ ಬಂದ ಈ ಐತಿಹಾಸಿಕ ವಿಲೀನ ಭಾರತೀಯ ಚಿತ್ರರಂಗದ ಗತಿಯನ್ನೇ ಬದಲಿಸಿತು. ಪವನ್ ಜೈನ್ ಅವರ ಅಧ್ಯಕ್ಷತೆ ಮತ್ತು ಅಜಯ್ ಬಿಜ್ಲಿ ಅವರ ವ್ಯವಸ್ಥಾಪಕ ನಿರ್ದೇಶಕತ್ವದಲ್ಲಿ ಹುಟ್ಟಿಕೊಂಡ ‘PVR INOX Limited’, ದೇಶಾದ್ಯಂತ 350ಕ್ಕೂ ಹೆಚ್ಚು ಮಾಲ್ಗಳಲ್ಲಿ 1,700ಕ್ಕೂ ಅಧಿಕ ಸ್ಕ್ರೀನ್ಗಳನ್ನು ನಿಯಂತ್ರಿಸುವ ಏಕೈಕ ಮಹಾಶಕ್ತಿಯಾಗಿ ಹೊರಹೊಮ್ಮಿತು.
ಈ ಮಹಾಸಂಗಮವು ಎರಡೂ ಸಂಸ್ಥೆಗಳಿಗೆ ಸಾಟಿಯಿಲ್ಲದ ಆರ್ಥಿಕ ಬಲ ನೀಡಿತು. ಚಿತ್ರ ನಿರ್ಮಾಪಕರೊಂದಿಗೆ ಟಿಕೆಟ್ ಹಂಚಿಕೆ ಮಾತುಕತೆಗಳಲ್ಲಿ ಬಲವಾದ ಹಿಡಿತ, ಆಹಾರ ಪೂರೈಕೆದಾರರೊಂದಿಗೆ ಬೃಹತ್ ಒಪ್ಪಂದಗಳು ಮತ್ತು ಆಡಳಿತಾತ್ಮಕ ವೆಚ್ಚಗಳ ಭಾರಿ ಉಳಿತಾಯದಿಂದಾಗಿ ಕಂಪನಿ ಮತ್ತೆ ಲಾಭದ ಹಳಿಗೆ ಮರಳಿತು. ಇಂದು ಹೊಸದಾಗಿ ಆರಂಭವಾಗುವ ಪ್ರತಿಯೊಂದು ಕೇಂದ್ರವೂ ‘PVR INOX’ ಹೆಸರಿನಲ್ಲೇ ಹೆಮ್ಮೆಯಿಂದ ಜಗಮಗಿಸುತ್ತಿದ್ದು, ಜಾಗತಿಕ ಮಟ್ಟದ ಮನರಂಜನಾ ಜಾಲವಾಗಿ ಭಾರತೀಯ ಚಿತ್ರ ಪ್ರದರ್ಶನ ಕ್ಷೇತ್ರದ ಆರ್ಥಿಕ ಬೆನ್ನೆಲುಬಾಗಿದೆ.
ಗ್ರಾಮೀಣ ಸೊಗಡಿನ ಕಥೆ ಹೊತ್ತು ಬಂದ ‘ಪ್ರೇಮದ ಊರಲ್ಲಿ’ ಚಿತ್ರ ಇಂದಿಗೂ ಪ್ರೇಕ್ಷಕರನ್ನು ಕಟ್ಟಿಹಾಕಬಲ್ಲದು ಎಂಬುದನ್ನು ಸಾಬೀತುಪಡಿಸಿದರೆ, ಪಿವಿಆರ್ನ ಈ ಗೆಲುವಿನ ಪಯಣ ಪ್ರೇಕ್ಷಕರಿಗೆ ಬೇಕಾದ ಸೌಕರ್ಯ, ತಂತ್ರಜ್ಞಾನ ಹಾಗೂ ವ್ಯಾಪಾರ ಜಗತ್ತಿನ ಕ್ರಾಂತಿಯನ್ನು ತೆರೆದಿಡುತ್ತದೆ. ಮಣ್ಣಿನ ಕಥೆಯ ಸಿನಿಮಾ ನೋಡಲು ಹೋಗಿ ಆನ್ಲೈನ್ ಟಿಕೆಟ್ನ ಡಿಜಿಟಲ್ ಜಗತ್ತಿಗೆ ಮುಖಾಮುಖಿಯಾದಾಗ ಒಂದು ಸತ್ಯ ಸ್ಪಷ್ಟವಾಗುತ್ತದೆ: “ಕಾಲ ಬದಲಾಗಬಹುದು, ಮರದ ಬೆಂಚಿನಿಂದ ರಿಕ್ಲೈನರ್ ಸೀಟುಗಳವರೆಗೆ ಪರದೆಯ ಸ್ವರೂಪ ಬದಲಾಗಬಹುದು; ಆದರೆ ಕತ್ತಲ ಕೋಣೆಯಲ್ಲಿ ಬೆಳಕಿನ ಬಿಂಬವನ್ನು ಬೆರಗುಗಣ್ಣಿನಿಂದ ನೋಡುವ ಮಾನವನ ಸಿನಿಮಾ ಪ್ರೀತಿ ಮಾತ್ರ ಎಂದಿಗೂ ಶಾಶ್ವತ….
ಲೇಖಕರು:
ಟಿಎಸ್ ಮರ್ಚೆಡ್.