
ಮರ್ಚೆಡ್ ಡೇಸ್ ಸುದ್ದಿ|ಕೂಡ್ಲಿಗಿ.
ಕೂಡ್ಲಿಗಿ: ರಾಷ್ಟ್ರೀಯ ಹೆದ್ದಾರಿ 50ರಲ್ಲಿ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮೂರು ವರ್ಷದ ಹೆಣ್ಣು ಚಿರತೆಯೊಂದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಬಣವಿಕಲ್ಲು ಮತ್ತು ಅಮಲಾಪುರ ಗ್ರಾಮಗಳ ಮಧ್ಯೆ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ. ಅತಿವೇಗದ ಚಾಲನೆಯೇ ಈ ದುರ್ಘಟನೆಗೆ ನೇರ ಕಾರಣ ಎಂದು ಶಂಕಿಸಲಾಗಿದೆ.
ಶುಕ್ರವಾರ ಬೆಳಗಿನ ಜಾವ ಸುಮಾರು 5 ಗಂಟೆಯ ಸುಮಾರಿಗೆ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಕಡಿಮೆ ಇದ್ದ ಸಂದರ್ಭದಲ್ಲಿ ಚಿರತೆ ರಸ್ತೆ ದಾಟಲು ಯತ್ನಿಸಿದೆ. ಈ ವೇಳೆ ರಸ್ತೆಯ ತಿರುವಿನಲ್ಲಿ ಅತೀವ ವೇಗವಾಗಿ ನುಗ್ಗಿ ಬಂದ ಅಪರಿಚಿತ ವಾಹನವು ಚಿರತೆಗೆ ರಭಸವಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ತೀವ್ರ ರಭಸಕ್ಕೆ ಚಿರತೆಯ ತಲೆ ಮತ್ತು ದೇಹಕ್ಕೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿದ್ದು, ತೀವ್ರ ರಕ್ತಸ್ರಾವದಿಂದಾಗಿ ಪ್ರಾಣಿ ಸ್ಥಳದಲ್ಲೇ ಕೊನೆಯುಸಿರೆಳೆದಿದೆ. ಅಪಘಾತವೆಸಗಿದ ವಾಹನವನ್ನು ಚಾಲಕ ನಿಲ್ಲಿಸದೆ ಪರಾರಿಯಾಗಿದ್ದು, ಬೆಳಗಿನ ಜಾವ ಸಂಚರಿಸುತ್ತಿದ್ದ ಸವಾರರು ರಸ್ತೆಯಲ್ಲಿ ಬಿದ್ದಿದ್ದ ಚಿರತೆಯನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಘಟನೆಯ ಸುದ್ಧಿ ತಿಳಿಯುತ್ತಿದ್ದಂತೆಯೇ ಕೂಡ್ಲಿಗಿ ವಲಯದ ಅರಣ್ಯಾಧಿಕಾರಿ ಸಂದೀಪ್ ನಾಯಕ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಪಶುವೈದ್ಯಾಧಿಕಾರಿಗಳಿಂದ ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ, ಇಲಾಖೆಯ ನಿಯಮಾನುಸಾರ ಮುಂದಿನ ಕ್ರಮ ಜರುಗಿಸಲಾಯಿತು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅತಿವೇಗದ ವಾಹನ ಚಾಲನೆಯಿಂದಾಗಿ ಅಮೂಲ್ಯ ವನ್ಯಜೀವಿಗಳು ಬಲಿಯಾಗುತ್ತಿರುವುದಕ್ಕೆ ಪರಿಸರ ಪ್ರೇಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವನ್ಯಜೀವಿಗಳ ಸಂಚಾರವಿರುವ ಸೂಕ್ಷ್ಮ ವಲಯಗಳಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ಚಾಲಕರ ಗಮನ ಸೆಳೆಯಲು ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ, ವನ್ಯಜೀವಿಗಳು ರಸ್ತೆ ದಾಟುವ ಜಾಗಗಳಲ್ಲಿ ಸುರಕ್ಷತಾ ಕಾರಿಡಾರ್ ಅಥವಾ ವೇಗ ತಡೆಗಳನ್ನು ನಿರ್ಮಿಸಬೇಕು. ಇಂತಹ ಜೀವಹಾನಿ ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ಶಾಶ್ವತ ಮುನ್ನೆಚ್ಚರಿಕೆ ವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
