ಮರ್ಚೆಡ್ ಡೇಸ್ |ಫಾಲೋ ಅಪ್ ಸುದ್ಧಿ.
ಕತ್ತಲ ಕೋಣೆಯ ಕಣ್ಣೀರಿಗೆ ಸಿಕ್ತು ಮುಕ್ತಿ; ಸ್ಥಳಕ್ಕೆ ಭೇಟಿ ನೀಡಿ ಪ್ರತ್ಯೇಕ ಯುಪಿಎಸ್ ಹಾಗೂ ಇಂಟರ್ನೆಟ್ ಸೌಲಭ್ಯ ಕಲ್ಪಿಸಿದ ಅಧಿಕಾರಿಗಳು.
ಸಿರುಗುಪ್ಪ: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿದ್ಯುತ್ ಕೈಕೊಟ್ಟಾಗ ಕತ್ತಲ ಕೋಣೆಯಲ್ಲಿ ಹಸುಗೂಸುಗಳು ಹಾಗೂ ಬಾಣಂತಿಯರು ನರಕಯಾತನೆ ಅನುಭವಿಸುತ್ತಿದ್ದ ಹೃದಯವಿದ್ರಾವಕ ಸ್ಥಿತಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ‘ಕತ್ತಲ ಕೋಣೆಯಲ್ಲಿ ಹಸುಗೂಸುಗಳ ಚೀರಾಟ: ಮೊಬೈಲ್ ಬೆಳಕಿನಲ್ಲೇ ಬಾಣಂತಿಯರ ಕಣ್ಣೀರಿನ ಕಥೆ..’ ಎಂಬ ಶೀರ್ಷಿಕೆಯಡಿ ಅಕ್ಟೋಬರ್ 9ರಂದು ‘ಮರ್ಚೆಡ್ ಡೇಸ್’ ಕನ್ನಡ ದಿನಪತ್ರಿಕೆ ಹಾಗೂ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಕ್ಷಣವೇ ಸ್ಪಂದಿಸಿದ್ದು, ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾಗಿದೆ.
ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತಗೊಂಡಾಗ ಸೂಕ್ತ ಬ್ಯಾಕಪ್ ವ್ಯವಸ್ಥೆ ಇಲ್ಲದೆ, ಬಾಣಂತಿಯರು ಮೊಬೈಲ್ ಫೋನ್ ಬೆಳಕಿನಲ್ಲೇ ರಾತ್ರಿ ಕಳೆಯಬೇಕಾದ ದುಃಸ್ಥಿತಿ ಎದುರಾಗಿತ್ತು. ನವಜಾತ ಶಿಶುಗಳು ಉಸಿರುಗಟ್ಟುವ ವಾತಾವರಣದಲ್ಲಿ ಕಣ್ಣೀರಿಡುತ್ತಿದ್ದ ದೃಶ್ಯಗಳು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದವು. ಈ ಗಂಭೀರ ಸಮಸ್ಯೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ‘ಮರ್ಚೆಡ್ ಡೇಸ್’ ವರದಿಯು ಇಲಾಖೆಯ ಉನ್ನತ ಅಧಿಕಾರಿಗಳ ಗಮನ ಸೆಳೆದು, ಸ್ಥಳೀಯ ಆಡಳಿತವನ್ನು ಚುರುಕುಗೊಳಿಸುವಂತೆ ಮಾಡಿತ್ತು.
ವರದಿ ಪ್ರಕಟವಾದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ತಾಲೂಕು ಆರೋಗ್ಯಾಧಿಕಾರಿ (ಟಿಎಚ್ಒ) ಡಾ. ಬಸವರಾಜ್ ದಮ್ಮೂರು ಅವರು ಶುಕ್ರವಾರ ತೆಕ್ಕಲಕೋಟೆಯ ಸಮುದಾಯ ಆರೋಗ್ಯ ಕೇಂದ್ರದ ಹೆರಿಗೆ ಹಾಗೂ ಬಾಣಂತಿಯರ ವಾರ್ಡ್ಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ವಾಸ್ತವ ಸ್ಥಿತಿಯನ್ನು ಅವಲೋಕಿಸಿದ ವೇಳೆ, ಸಹಜ ಹೆರಿಗೆ ವಾರ್ಡ್ ಮತ್ತು ಸಿಜೇರಿಯನ್ ಹೆರಿಗೆ ವಾರ್ಡ್ಗಳೆರಡಕ್ಕೂ ಕೇವಲ ಒಂದೇ ಯುಪಿಎಸ್ ಸಂಪರ್ಕವಿರುವುದು ಮತ್ತು ಅದು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಇರುವುದು ಬೆಳಕಿಗೆ ಬಂತು.
ಪರಿಶೀಲನೆ ನಡೆಸಿದ ತಾಲೂಕು ಆರೋಗ್ಯಾಧಿಕಾರಿಗಳು ತಕ್ಷಣವೇ ಎರಡೂ ವಾರ್ಡ್ಗಳಿಗೆ ಪ್ರತ್ಯೇಕ ಹಾಗೂ ಸುಸಜ್ಜಿತ ಯುಪಿಎಸ್ ವ್ಯವಸ್ಥೆ ಕಲ್ಪಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದರು. ಅಧಿಕಾರಿಗಳ ತುರ್ತು ಆದೇಶದ ಮೇರೆಗೆ ಶನಿವಾರವೇ ಯುದ್ಧೋಪಾದಿಯಲ್ಲಿ ಕಾಮಗಾರಿ ನಡೆಸಿ, ಸಹಜ ಹೆರಿಗೆ ಹಾಗೂ ಸಿಜೇರಿಯನ್ ವಾರ್ಡ್ಗಳಿಗೆ ಪ್ರತ್ಯೇಕ ಯುಪಿಎಸ್ ಬ್ಯಾಕಪ್ ವ್ಯವಸ್ಥೆಯನ್ನು ಯಶಸ್ವಿಯಾಗಿ ಅಳವಡಿಸಲಾಯಿತು. ಇದರೊಂದಿಗೆ ಆಸ್ಪತ್ರೆಯ ಆಡಳಿತಾತ್ಮಕ ಕೆಲಸಗಳ ಸುಗಮ ನಿರ್ವಹಣೆಗೆ ಅನುಕೂಲವಾಗುವಂತೆ ಇಂಟರ್ನೆಟ್ ಸೌಲಭ್ಯವನ್ನೂ ಒದಗಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ರಾಮಕೃಷ್ಣ ಅವರು, “ಬಾಣಂತಿಯರು ಮತ್ತು ನವಜಾತ ಶಿಶುಗಳ ವಾರ್ಡ್ಗಳಿಗೆ ಪ್ರತ್ಯೇಕವಾಗಿ ನೂತನ ಯುಪಿಎಸ್ ಸಂಪರ್ಕ ಕಲ್ಪಿಸಲಾಗಿದೆ. ಇನ್ನು ಮುಂದೆ ವಿದ್ಯುತ್ ಕೈಕೊಟ್ಟರೂ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ರೋಗಿಗಳಿಗೆ ನಿರಂತರ ಬೆಳಕು ಹಾಗೂ ಅಗತ್ಯ ವೈದ್ಯಕೀಯ ಸೇವೆಗಳು ಸಿಗಲಿವೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಜನಸಾಮಾನ್ಯರ ಹಾಗೂ ಅಸಹಾಯಕರ ಸಂಕಷ್ಟಕ್ಕೆ ಕನ್ನಡಿ ಹಿಡಿದು, ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ಮಾಡಿದ ‘ಮರ್ಚೆಡ್ ಡೇಸ್’ ಪತ್ರಿಕೆಯ ಜನಪರ ಕಾಳಜಿಗೆ ತೆಕ್ಕಲಕೋಟೆ ಭಾಗದ ಸಾರ್ವಜನಿಕರು ಹಾಗೂ ಬಾಣಂತಿಯರ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪತ್ರಿಕೆಯ ವಸ್ತುನಿಷ್ಠ ವರದಿಯಿಂದಾಗಿ ನವಜಾತ ಶಿಶುಗಳು ಹಾಗೂ ತಾಯಂದಿರ ಮೊಗದಲ್ಲಿ ಮತ್ತೆ ನೆಮ್ಮದಿಯ ಬೆಳಕು ಮೂಡುವಂತಾಗಿದೆ.