
ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.
ಗಂಗಾವತಿ: ದೈನಂದಿನ ಬದುಕಿನಲ್ಲಿ ಹಾಲು, ಮೊಸರು ಮತ್ತು ತುಪ್ಪ ಆಹಾರದ ಪ್ರಮುಖ ಭಾಗವಾಗಿದ್ದು, ಕರ್ನಾಟಕದಲ್ಲಿ ಈ ಪದಾರ್ಥಗಳು ಎಂದಾಕ್ಷಣ ಪ್ರತಿಯೊಬ್ಬರಿಗೂ ನೆನಪಿಗೆ ಬರುವುದು ಕೆಎಂಎಫ್ ನ ‘ನಂದಿನಿ’ ಬ್ರ್ಯಾಂಡ್. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಅಧಿಕಾರಿಗಳು ಹಾಗೂ ನಂದಿನಿ ಔಟ್‌ಲೆಟ್ ಮಾಲೀಕರ ಬೇಜವಾಬ್ದಾರಿಯಿಂದಾಗಿ ದೇಶ-ವಿದೇಶಗಳಲ್ಲಿ ಅತ್ಯುತ್ತಮ ವಿಶ್ವಾಸ ಗಳಿಸಿರುವ ನಂದಿನಿ ಬ್ರ್ಯಾಂಡ್‌ಗೆ ಕಪ್ಪುಚುಕ್ಕೆ ತರುವಂತಹ ಘಟನೆಗಳು ಜರುಗುತ್ತಿವೆ.
ನಗರದ ಕೆಲ ಕೆಎಂಎಫ್ ಔಟ್‌ಲೆಟ್‌ಗಳಲ್ಲಿ ಅವಧಿ ಮುಗಿದ ಹಾಲಿನ ಪಾಕೆಟ್‌ಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆ ತರಲಾಗುತ್ತಿದೆ. ಗಂಗಾವತಿಯ ಪಿಎಲ್‌ಡಿ ಬ್ಯಾಂಕ್ ರಸ್ತೆ ಹಾಗೂ ಸರ್ಕಾರಿ ಆಸ್ಪತ್ರೆಯ ಸಮೀಪವಿರುವ ನಂದಿನಿ ಔಟ್‌ಲೆಟ್‌ಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಸೋಮವಾರ ಬೆಳಗ್ಗೆ ಗ್ರಾಹಕರು ಖರೀದಿಸಿದ ಹಾಲಿನ ಪಾಕೆಟ್‌ಗಳನ್ನು ಮನೆಗೆ ಒಯ್ದು ಕಾಯಿಸಿದಾಗ ಹಾಲು ಒಡೆದುಹೋಗಿದ್ದು, ಪಾಕೆಟ್ ಮೇಲೆ ಮುದ್ರಿಸಲಾದ ದಿನಾಂಕಗಳನ್ನು ಗಮನಿಸಿದಾಗ ಸೆಪ್ಟೆಂಬರ್ 24 ಹಾಗೂ 27 ಎಂದು ನಮೂದಿಸಿರುವುದು ಬೆಳಕಿಗೆ ಬಂದಿದೆ.
ನಿಯಮದ ಪ್ರಕಾರ ಅಂದಿನ ಹಾಲನ್ನು ಅಂದೇ ಗ್ರಾಹಕರಿಗೆ ಮಾರಾಟ ಮಾಡಬೇಕು ಮತ್ತು ಉಳಿದ ಹಾಲನ್ನು ಮರಳಿ ಕೆಎಂಎಫ್‌ಗೆ ವಾಪಸ್ ಕಳುಹಿಸಬೇಕು. ಆದರೆ ಔಟ್‌ಲೆಟ್ ಮಾರಾಟಗಾರರು ಹೆಚ್ಚಿನ ಲಾಭದ ಆಸೆಗೆ ಬಿದ್ದು ಅವಧಿ ಮೀರಿದ ಹಾಲು ಮತ್ತು ಮೊಸರನ್ನು ಮಾರಾಟ ಮಾಡುತ್ತಿದ್ದಾರೆ. ಬಹುತೇಕ ತಾಯಂದಿರು ತಮ್ಮ ಹಸುಗೂಸುಗಳಿಗೆ ನಂದಿನಿ ಹಾಲನ್ನು ನೆಚ್ಚಿ ಕುಡಿಸುತ್ತಿದ್ದು, ಇಂತಹ ಹಾಲು ಸೇವನೆಯಿಂದ ಮಕ್ಕಳ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಭೀತಿ ಎದುರಾಗಿದೆ.
ಗ್ರಾಹಕರು ಅವಧಿ ಮೀರಿದ ಹಾಲಿನ ಕುರಿತು ಪ್ರಶ್ನಿಸಿದರೆ, ಅಂಗಡಿಕಾರರು ಸಮರ್ಪಕ ಉತ್ತರ ನೀಡದೆ ಉಡಾಫೆ ಹಾಗೂ ನಿರ್ಲಕ್ಷ್ಯದ ವರ್ತನೆ ತೋರುತ್ತಿದ್ದಾರೆ ಎಂದು ಗ್ರಾಹಕರು ದೂರಿದ್ದಾರೆ. ಇತ್ತ ರೈತರ ಹಿತ ಕಾಯುವ ಭರವಸೆ ನೀಡಿ ಹಾಲು ಒಕ್ಕೂಟಗಳಿಂದ ಆಯ್ಕೆಯಾಗಿರುವ ನಿರ್ದೇಶಕರು ಇಂತಹ ಗಂಭೀರ ಲೋಪದೋಷಗಳ ಬಗ್ಗೆ ತುಟಿಬಿಚ್ಚದೆ ಜಾಣಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿ ನಾಗರಾಜ್ ಅವರನ್ನು ಸಂಪರ್ಕಿಸಿದಾಗ, “ನಮ್ಮ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಅಂಗಡಿ-ಮುಂಗಟ್ಟುಗಳ ಆಹಾರ ಸುರಕ್ಷತೆ ಪರಿಶೀಲಿಸಲು ತೊಂದರೆಯಾಗುತ್ತಿದೆ. ಆದಾಗ್ಯೂ, ಗಂಗಾವತಿಯಲ್ಲಿ ಕೆಎಂಎಫ್ ಔಟ್‌ಲೆಟ್‌ಗಳಲ್ಲಿ ಅವಧಿ ಮೀರಿದ ಹಾಲು ಮಾರಾಟ ಮಾಡುತ್ತಿರುವ ಬಗ್ಗೆ ದೂರು ಬಂದಿದ್ದು, ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ಇದೇ ವಿಷಯವಾಗಿ ಕೆಎಂಎಫ್ ಬಳ್ಳಾರಿ ನಿರ್ದೇಶಕರಾದ ಸತ್ಯನಾರಾಯಣ ಕೋಟಯ್ಯಕ್ಯಾಂಪ್ ಅವರು ಪ್ರತಿಕ್ರಿಯಿಸಿ, “ಕೆಎಂಎಫ್ ರೈತರ ಹಿತ ಕಾಯುವ ಅತ್ಯಂತ ವಿಶ್ವಾಸಾರ್ಹ ಸಂಸ್ಥೆಯಾಗಿದೆ. ಗಂಗಾವತಿಯಲ್ಲಿ ನಡೆದಿರುವ ಘಟನೆ ನಮ್ಮ ಗಮನಕ್ಕೆ ಬಂದಿದ್ದು, ಅಧಿಕಾರಿಗಳು ಔಟ್‌ಲೆಟ್‌ಗಳಿಗೆ ಭೇಟಿ ನೀಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದಾರೆ. ಯಾವುದೇ ಕಾರಣಕ್ಕೂ ಅವಧಿ ಮೀರಿದ ಉತ್ಪನ್ನಗಳನ್ನು ಮಾರಾಟ ಮಾಡುವುದು ಸಂಸ್ಥೆಯ ನಿಯಮಗಳಿಗೆ ವಿರುದ್ಧವಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ನಿಶ್ಚಿತ. ಇಂತಹ ಲೋಪಗಳು ಕಂಡುಬಂದಲ್ಲಿ ಗ್ರಾಹಕರು ಕೂಡಲೇ ಸಂಸ್ಥೆಯ ಗಮನಕ್ಕೆ ತರಬೇಕು” ಎಂದು ಮನವಿ ಮಾಡಿದ್ದಾರೆ.
ಖರೀದಿ ರಸೀದಿ (Bill): ಯಾವುದೇ ಉತ್ಪನ್ನ ಖರೀದಿಸಿದಾಗ ಕಡ್ಡಾಯವಾಗಿ ಅಧಿಕೃತ ರಶೀದಿಯನ್ನು ಪಡೆದುಕೊಳ್ಳಿ.
ಕೆಎಂಎಫ್ ಸಹಾಯವಾಣಿ: ರಾಯಚೂರು-ಬಳ್ಳಾರಿ-ಕೊಪ್ಪಳ ಹಾಲು ಒಕ್ಕೂಟ (RBKMUL) ಮಾರುಕಟ್ಟೆ ವಿಭಾಗಕ್ಕೆ ಅಥವಾ ಕೆಎಂಎಫ್ ಟೋಲ್-ಫ್ರೀ ಸಂಖ್ಯೆ 1800-425-8030 ಗೆ ಔಟ್‌ಲೆಟ್ ವಿವರಗಳೊಂದಿಗೆ ದೂರು ನೀಡಿ.
ಗ್ರಾಹಕ ವೇದಿಕೆ ಮತ್ತು ತೂಕ-ಅಳತೆ ಇಲಾಖೆ: ಲೀಗಲ್ ಮೆಟ್ರಾಲಜಿ ಕಾಯ್ದೆಯನ್ವಯ ಎಂಆರ್‌ಪಿಗಿಂತ ಹೆಚ್ಚು ವಸೂಲಿ ಮಾಡಿದರೆ ಅಥವಾ ಗ್ರಾಹಕರ ಹಕ್ಕು ಉಲ್ಲಂಘನೆಯಾದರೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH) ಸಂಖ್ಯೆ 1915 ಮೂಲಕ ಇಲ್ಲವೇ ಗ್ರಾಹಕ ವೇದಿಕೆಗೆ ನೇರವಾಗಿ ದೂರು ಸಲ್ಲಿಸಬಹುದು.