Home ಸುದ್ದಿ ಜಂತರ್ ಮಂತರ್‌ನಲ್ಲಿ ‘ಝೆನ್-ಜಿ 2.0’ ಜಾತ್ರೆ: ಪ್ರತಿಭಟನೆಯಲ್ಲೂ ‘ಫುಲ್ ’ಎಂಟರ್‌ಟೈನ್‌ಮೆಂಟ್‌.
ಸುದ್ದಿ

ಜಂತರ್ ಮಂತರ್‌ನಲ್ಲಿ ‘ಝೆನ್-ಜಿ 2.0’ ಜಾತ್ರೆ: ಪ್ರತಿಭಟನೆಯಲ್ಲೂ ‘ಫುಲ್ ’ಎಂಟರ್‌ಟೈನ್‌ಮೆಂಟ್‌.

Share
Share

ಮರ್ಚೆಡ್ ಡೇಸ್ ವಿಶೇಷ ವರದಿ|ದೆಹಲಿ.

ದೆಹಲಿಯ ಜಂತರ್ ಮಂತರ್ ಅಂಗಳಕ್ಕೆ ಮತ್ತೊಮ್ಮೆ ಜೀವಕಳೆ ಬಂದಿದೆ. ಈ ಬಾರಿ ಅಖಾಡಕ್ಕಿಳಿದಿರುವುದು ಬೇರಾರೂ ಅಲ್ಲ; ಸಾಂಪ್ರದಾಯಿಕ ಹೋರಾಟಗಳ ಗಂಭೀರ ಮುಖಭಾವವನ್ನು ಹರಿದುಹಾಕಿ, ಹಕ್ಕುಗಳ ರಕ್ಷಣೆಗೆ ಡಿಜಿಟಲ್ ಕಾಲದ ಹೊಸ ಭಾಷ್ಯ ಬರೆಯುತ್ತಿರುವ ‘ಝೆನ್-ಜಿ’ (Gen Z) ಯುವಪಡೆ. ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ಸ್ಫೋಟಕ ತನಿಖಾ ವರದಿಯ ಬೆನ್ನಲ್ಲೇ, ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಸೆಪ್ಟೆಂಬರ್ 25ರಿಂದ ‘ಜಂತರ್ ಮಂತರ್ 2.0’ ಕಹಳೆ ಮೊಳಗಿದೆ. ರಸ್ತೆಗಿಳಿದಿರುವ ಹುಡುಗ-ಹುಡುಗಿಯರ ಕಣ್ಣಿನಲ್ಲಿ ಕೆಂಡವಿದೆ, ಆದರೆ ಮುಖದಲ್ಲಿ ಮಾತ್ರ ಅದೇ ಅದ್ಭುತ, ಅಣಕದ ನಗು ಕಾಯಂ ಆಗಿದೆ.

ನಮ್ಮ ಗಂಗಾವತಿ, ಕೊಪ್ಪಳ ಹಾಗೂ ರಾಯಚೂರು ಸೀಮೆಯ ಸುಗ್ಗಿ ಕಾಲದ ಜಾತ್ರೆಗಳನ್ನು ನೋಡಿದವರಿಗೆ ಇವರ ನಡೆ ತಕ್ಷಣವೇ ಕಣ್ಣಿಗೆ ಕಟ್ಟುತ್ತದೆ. ಜಾತ್ರೆಯ ಜನಜಂಗುಳಿಯ ಮಧ್ಯೆ ಹತ್ತಾರು ಹುಡುಗರು ಬಾಯಲ್ಲಿ ಪೀಪಿ ಊದುತ್ತಾ, ಇತ್ತಿಂದ ಅತ್ತ ಸಾಗುತ್ತಿದ್ದರೆ ಮೊದಮೊದಲು ಸಿಟ್ಟು, ಕಿರಿಕಿರಿ ಉಂಟಾಗುವುದು ಸಹಜ. ‘ಈ ಪೋರರಿಗೆ ತಲೆ ಕೆಟ್ಟಿದೆಯಾ, ಕಾಮನ್ ಸೆನ್ಸ್ ಇಲ್ವಾ’ ಎಂದು ದೊಡ್ಡವರು ಗೊಣಗಿಕೊಳ್ಳುವುದುಂಟು. ಆದರೆ ಜಾತ್ರೆ ಮುಗಿಸಿ ಮನೆಗೆ ಬಂದಾಗ, ಹರಟೆ ಹೊಡೆಯುವಾಗ ಆ ಹುಡುಗರ ಚೇಷ್ಟೆಗಳೇ ಪ್ರಮುಖ ಚರ್ಚೆಯ ವಿಷಯವಾಗಿ ಎಲ್ಲರ ಮುಖದಲ್ಲೂ ಮುಗುಳ್ನಗೆ ತರುತ್ತವೆ. ಜಂತರ್ ಮಂತರ್‌ನಲ್ಲಿ ಈಗ ನಡೆಯುತ್ತಿರುವುದು ಅಚ್ಚ ಇಂತಹದ್ದೇ ಒಂದು ಡಿಜಿಟಲ್-ದೇಸಿ ಸಮ್ಮಿಶ್ರಣದ ಹೋರಾಟದ  ಜಾತ್ರೆ.

ಹಿಂದೆ ನೀಟ್ ಪೇಪರ್ ಲೀಕ್ ಪ್ರಕರಣ ನಡೆದಾಗ ಇದೇ ಹುಡುಗರು ಬೀದಿಗಿಳಿದು ಕೇಂದ್ರ ಸಚಿವರ ರಾಜೀನಾಮೆ ತನಕ ಬಿಗಿಪಟ್ಟು ಹಿಡಿದು ಯಶಸ್ಸು ಕಂಡಿದ್ದರು. ಆ ವೇಳೆ ಪೊಲೀಸರಿಂದ ಲಾಠಿ ಏಟು ತಿಂದು ಮೈಯೆಲ್ಲಾ ರಕ್ತ ಸುರಿದರೂ, ಕರೆಂಟ್ ಇಲ್ಲದೆ, ಕುಡಿಯಲು ನೀರಿಲ್ಲದೆ, ಶೌಚಾಲಯವೂ ಸಿಗದೆ ಹಿಂಸೆ ಅನುಭವಿಸಿದರೂ ಪಟ್ಟುಬಿಡಲಿಲ್ಲ. ಎಷ್ಟೇ ಕೈಮಾಡಿದರೂ ಪೊಲೀಸರನ್ನೇ ಪ್ರೀತಿಯಿಂದ ಅಪ್ಪಿಕೊಂಡು, ಕಲ್ಲು ಹೃದಯದಲ್ಲೂ ಕರುಣೆ ಮೂಡುವಂತೆ ಮಾಡಿದ್ದ ಇದೇ ಪಡೆ, ಈಗ 2.0 ರೂಪದಲ್ಲಿ ಮತ್ತೆ ಪ್ರತ್ಯಕ್ಷವಾಗಿದೆ. ಆದರೆ ಈ ಬಾರಿ ಅವರ ಹೋರಾಟದಲ್ಲಿ ಕಣ್ಣೀರಿಗಿಂತ ಕಟಕಿ ಮತ್ತು ಅಪ್ಪಟ ಮನರಂಜನೆಯೇ ಮುಂಚೂಣಿಯಲ್ಲಿದೆ.

ಚುನಾವಣಾ ಆಯೋಗದ ಆಂತರಿಕ ಭಿನ್ನಾಭಿಪ್ರಾಯಗಳು, ಇತರ ಆಯುಕ್ತರ 14 ಲಿಖಿತ ಆಕ್ಷೇಪಗಳನ್ನು ಕಡೆಗಣಿಸಿ ಏಕಪಕ್ಷೀಯ ತೀರ್ಮಾನ ಕೈಗೊಂಡಿರುವುದು ಹಾಗೂ ಯುವ ಮತದಾರರ ಹೆಸರನ್ನು ಕೈಬಿಟ್ಟಿರುವ ಗಂಭೀರ ಆಪಾದನೆಗಳು ತನಿಖೆಯಿಂದ ಬಯಲಾಗಿವೆ. ಗಂಭೀರ ಸಾಂವಿಧಾನಿಕ ಬಿಕ್ಕಟ್ಟಿನ ವಿಷಯವನ್ನು ಹಿಡಿದುಕೊಂಡು ಬಂದಿರುವ ಇವರು, ಭಾಷಣ ಬಿಗಿಯುವ ಬದಲು ಮೀಮ್ಸ್ ಮತ್ತು ನೇರ ಚಟಾಕಿಗಳ ಮೊರೆ ಹೋಗಿದ್ದಾರೆ. ಪ್ರತಿಯೊಂದು ಭಿತ್ತಿಪತ್ರವೂ ಒಂದು ವೈರಲ್ ರೀಲ್ ಆಗಿ ಮಾರ್ಪಡುತ್ತಿದೆ; ಸಂವಿಧಾನದ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಇವರು ಆರಿಸಿಕೊಂಡಿರುವ ದಾರಿ ಸಂಪೂರ್ಣ ಡಿಜಿಟಲ್.

ಈ ಹೋರಾಟದ ಅಂಗಳದಲ್ಲಿ ಕೇಳಿಬರುವ ಸಂಭಾಷಣೆಗಳು ಅಕ್ಷರಶಃ ಹೊಟ್ಟೆ ಹುಣ್ಣಾಗಿಸುತ್ತವೆ. ‘ಜ್ಞಾನೇಶ್ ಕುಮಾರ್ ಅವರೇ, ಬೇಗ ರಾಜೀನಾಮೆ ಕೊಡಬೇಡಿ, ನಾನು ಮೆಟ್ರೋ ಹತ್ತಿ ಬರ್ತಾ ಇದ್ದೀನಿ, ನನ್ ರೀಲ್ ವೈರಲ್ ಆಗ್ಬೇಕು, ಪ್ಲೀಸ್ ತಡಮಾಡಿ!’ ಎಂದು ಕಟಕಿಯಾಡುವ ವಿಡಿಯೋ ಒಂದೆಡೆಯಾದರೆ, ವಾಟರ್ ಕ್ಯಾನನ್ ಹಿಡಿದು ನಿಂತ ಪೊಲೀಸರನ್ನು ಕಂಡು ‘ಏನ್ ಅಂಕಲ್ ನೀರು ಬರ್ತಿಲ್ಲ, ಬೇಗ ಬಿಡಿ, ಸೆಕೆ ಜಾಸ್ತಿ ಇದೆ’ ಎಂದು ಕೇಕೆ ಹಾಕುವ ಹುಡುಗರು ಇನ್ನೊಂದೆಡೆ. ಅಧಿಕಾರದ ಗರ್ವವನ್ನು ಅಣಕದ ಮೂಲಕವೇ ಕರಗಿಸುವುದು ಈ ತಲೆಮಾರಿನ ವಿಶೇಷ ಕಲೆ.

ಖಾಕಿ ಸಮವಸ್ತ್ರ ಧರಿಸಿ ಲಾಠಿ ಝಳಪಿಸುವ ಪೊಲೀಸರ ಮುಖದಲ್ಲೂ ಮಂದಹಾಸ ಮೂಡುವಂತೆ ಮಾಡುವ ಸಾಮರ್ಥ್ಯ ಇವರಲ್ಲಿದೆ. ‘ಪೊಲೀಸ್ ಅಂಕಲ್, ನಿನ್ನೆ ನೀವು ಹೊಡೆದಿಲ್ಲ ತಾನೇ? ಇವತ್ತು ಒಂದೇಟು ಹೊಡೆದು ನೋಡಿ, ಲೈವ್‌ನಲ್ಲಿ ಟ್ರೆಂಡ್ ಮಾಡ್ತೀವಿ!’ ಎನ್ನುತ್ತಾ ಗಂಭೀರ ವಾತಾವರಣವನ್ನೂ ಲಘುಗೊಳಿಸುತ್ತಾರೆ. ಆದರೆ ಕ್ಷಣಾರ್ಧದಲ್ಲಿ ಎಲ್ಲರೂ ಒಟ್ಟಾಗಿ ಎದ್ದುನಿಂತು ಎದೆಮುಟ್ಟುವಂತೆ ರಾಷ್ಟ್ರಗೀತೆ ಹಾಡಲು ಆರಂಭಿಸಿದಾಗ, ಅದೇ ಪೊಲೀಸರು ಕೈಮುಗಿದು ಅಥವಾ ಸೆಲ್ಯೂಟ್ ಹೊಡೆದು ನಿಲ್ಲುವಂತೆ ಮಾಡುವ ನೈತಿಕ ಶಕ್ತಿ ಈ ಯುವಪಡೆಯ ಸಂಘಟನೆಯಲ್ಲಿದೆ.

ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮದ ಪ್ರಾಥಮಿಕ ಸೂತ್ರಗಳಾದ ‘ಶಿಕ್ಷಣ, ಮಾಹಿತಿ ಮತ್ತು ಮನರಂಜನೆ’  ಎಂಬ ಮೂರೂ ಅಂಶಗಳನ್ನು ಇವರು ತಮ್ಮ ಪ್ರತಿಭಟನೆಯಲ್ಲಿ ಹದವಾಗಿ ಬೆರೆಸಿದ್ದಾರೆ. ‘ಇಂಡಿಯನ್ ಎಕ್ಸ್‌ಪ್ರೆಸ್’ ಹೊರಹಾಕಿದ ಆಯೋಗದ ನಿಯಮಾವಳಿಗಳ ಉಲ್ಲಂಘನೆಯನ್ನು ಸಾಮಾನ್ಯ ಯುವಕನಿಗೂ ಅರ್ಥವಾಗುವಂತೆ ಮಾಹಿತಿ ನೀಡುವುದು, ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಅದನ್ನು ಕೊಂಚವೂ ಬೋರ್ ಹೊಡೆಯದಂತೆ ವ್ಯಂಗ್ಯ-ಮನರಂಜನೆಯ ಲೇಪನದೊಂದಿಗೆ ಹಂಚುವುದು ಇವರ ನಿತ್ಯದ ಕಾಯಕವಾಗಿದೆ.

ಸೋಷಿಯಲ್ ಮೀಡಿಯಾ ಜಾಲತಾಣಗಳಾದ ಇನ್‌ಸ್ಟಾಗ್ರಾಮ್, ಎಕ್ಸ್ (ಟ್ವಿಟರ್) ಹಾಗೂ ಯೂಟ್ಯೂಬ್ ತೆರೆದರೆ ಸಾಕು, ಜಂತರ್ ಮಂತರ್‌ನ ಈ ಸಡಗರವೇ ತುಂಬಿ ತುಳುಕುತ್ತಿದೆ. ದೆಹಲಿಗೆ ಹೋಗದ ದೇಶದ ಕೋಟ್ಯಂತರ ಯುವಜನರು ಮೊಬೈಲ್ ಪರದೆಯಲ್ಲೇ ಈ ಹೋರಾಟವನ್ನು ನೋಡಿ ಆನಂದಿಸುತ್ತಾ, ‘ಅಯ್ಯೋ ನಾನು ಅಲ್ಲಿಗೆ ಹೋಗಬೇಕಿತ್ತು, ಮಿಸ್ ಮಾಡಿಕೊಂಡೆ’ ಎಂದು ಹಳಹಳಿಸುವಂತಾಗಿದೆ. ಸಾಂಪ್ರದಾಯಿಕ ಧರಣಿಗಳಲ್ಲಿ ಕಾಣುತ್ತಿದ್ದ ನಿರಾಶೆ, ಗೋಳಾಟಗಳ ಬದಲಿಗೆ, ಇಲ್ಲಿ ಜನರನ್ನು ಆಕರ್ಷಿಸುವ ಚೈತನ್ಯವಿದೆ. ಹೋರಾಟವೆಂದರೆ ಕೇವಲ ಕಲ್ಲು ತೂರಾಟ ಅಥವಾ ರಂಪಾಟವಲ್ಲ, ಅದೊಂದು ಸೃಜನಶೀಲ ಸತ್ಯಾಗ್ರಹ ಎಂಬುದನ್ನು ಇವರು ಸಾಬೀತುಪಡಿಸಿದ್ದಾರೆ.

ಹಾಗೆಂದು ಇವರನ್ನು ಕೇವಲ ತಮಾಷೆಗಾರರೆಂದು ಕಡೆಗಣಿಸುವಂತಿಲ್ಲ; ಇವರೆಲ್ಲರೂ ಉನ್ನತ ಶಿಕ್ಷಣ ಪಡೆದ, ಕಾನೂನು ಮತ್ತು ತಂತ್ರಜ್ಞಾನದ ಸೂಕ್ಷ್ಮಗಳನ್ನು ಅರಿತ ಬುದ್ಧಿವಂತ ವಿದ್ಯಾವಂತರು. ಮಾಧ್ಯಮದವರು ಅಥವಾ ತನಿಖಾಧಿಕಾರಿಗಳು ಎದುರಾಗಿ ಪ್ರಶ್ನೆ ಕೇಳಿದರೆ, ಯಾವ ಮುಜುಗರವೂ ಇಲ್ಲದೆ, ನಿರ್ಭಯವಾಗಿ, ಅಂಕಿ-ಅಂಶಗಳ ಸಮೇತ ಸಂವಿಧಾನದ ಪರಿಚ್ಛೇದಗಳನ್ನು ಉಲ್ಲೇಖಿಸಿ ಉತ್ತರ ನೀಡುತ್ತಾರೆ. ಅವರ ತೀಕ್ಷ್ಣ ಮತ್ತು ತರ್ಕಬದ್ಧ ಮಾತುಗಳು ಎದುರಾಳಿಗಳಿಗೆ ದಿಕ್ಕುತೋಚದಂತೆ ಮಾಡುತ್ತವೆ. ಗಂಭೀರ ವಿಷಯಗಳನ್ನು ಲಘುವಾಗಿ ಹೇಳುತ್ತಲೇ, ವ್ಯವಸ್ಥೆಯ ಹುಳುಕುಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾರೆ.

ಜಂತರ್ ಮಂತರ್‌ನಲ್ಲಿ ಜಮಾಯಿಸಿರುವ ಈ ಯುವಜನರ  ಅದೇ ಆಗಿದೆ. ಅಧಿಕಾರ ಕೇಂದ್ರಗಳ ದರ್ಪ, ಕಾನೂನಿನ ಜಟಿಲತೆ ಮತ್ತು ರಾಜಕೀಯ ತಂತ್ರಗಾರಿಕೆಗಳ ನಡುವೆ, ಪ್ರಜಾಪ್ರಭುತ್ವದ ನಿಜವಾದ ಹಕ್ಕನ್ನು ರಕ್ಷಿಸಲು ಈ ತಲೆಮಾರು ತನ್ನದೇ ಶೈಲಿಯಲ್ಲಿ ಅಖಾಡಕ್ಕೆ ಧುಮುಕಿದೆ. ಇವರ ಪ್ರತಿಭಟನೆಯು ಕೇವಲ ಶಬ್ದವಲ್ಲ, ಅದೊಂದು ಎಚ್ಚರಿಕೆಯ ಕರೆಗಂಟೆ.

ಪ್ರಜಾಪ್ರಭುತ್ವದ ಅತಿ ದೊಡ್ಡ ಆಧಾರಸ್ತಂಭವಾದ ಮತದಾನದ ಹಕ್ಕಿಗೆ ಕಂಟಕ ಬಂದಾಗ, ಯುವ ಸಮುದಾಯ ಮೌನವಾಗಿ ಕೂರಲು ಸಿದ್ಧವಿಲ್ಲ ಎಂಬುದಕ್ಕೆ ಜಂತರ್ ಮಂತರ್ 2.0 ಸಾಕ್ಷಿಯಾಗಿದೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಏಕಾಏಕಿ ಕೈಬಿಟ್ಟಿರುವುದು ಮತ್ತು ಸಾಂವಿಧಾನಿಕ ನಿಯಮಗಳನ್ನು ಗಾಳಿಗೆ ತೂರಿರುವುದು ಕ್ಷಮಿಸಲಾರದ ಅಪರಾಧ ಎಂದು ಈ ಹುಡುಗರು ಸಾರುತ್ತಿದ್ದಾರೆ. ಚುನಾವಣಾ ಆಯೋಗದಂತಹ ಸ್ವಾಯತ್ತ ಸಂಸ್ಥೆಯ ಘನತೆಯನ್ನು ಮರುಸ್ಥಾಪಿಸಲು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕು ಮತ್ತು ತಪ್ಪಿತಸ್ಥರು ಹೊಣೆ ಹೊರಬೇಕು ಎಂಬುದು ಇವರ ಅಂತಿಮ ಹಕ್ಕೊತ್ತಾಯ.

ಒಟ್ಟಾರೆಯಾಗಿ ಹೇಳುವುದಾದರೆ, ಅಧಿಕಾರಸ್ಥರ ಹುಬ್ಬು ಗಂಟಿಕ್ಕುವಂತೆ ಮಾಡುತ್ತಲೇ, ನೋಡುವ ಜನಸಾಮಾನ್ಯರ ಮೊಗದಲ್ಲಿ ಮಂದಹಾಸ ಮೂಡಿಸುವ ‘ಫುಲ್ ಪೈಸಾ ವಸೂಲ್’ ಶೈಲಿಯ ಈ ಹೋರಾಟ ಪ್ರಜಾಪ್ರಭುತ್ವಕ್ಕೆ ಹೊಸ ರಂಗು ತಂದಿದೆ. ಲಾಠಿ, ಅಶ್ರುವಾಯು, ವಾಟರ್ ಕ್ಯಾನನ್‌ಗಳಿಗಿಂತಲೂ ಇವರ ಕೈಯಲ್ಲಿರುವ ಅಣಕ, ವ್ಯಂಗ್ಯ ಮತ್ತು ಸೃಜನಶೀಲತೆಯೇ ಹೆಚ್ಚು ಹರಿತವಾದ ಅಸ್ತ್ರಗಳಾಗಿವೆ.

ರಾಜೀನಾಮೆ ಸಿಗುತ್ತದೋ ಇಲ್ಲವೋ ಕಾಲವೇ ಉತ್ತರಿಸಬೇಕು; ಆದರೆ ಅಧಿಕಾರದ ಜಡತ್ವವನ್ನು ಅಲುಗಾಡಿಸಲು ಹೊರಟಿರುವ ಈ ‘ಝೆನ್-ಜಿ ಜಾತ್ರೆ’ ಮಾತ್ರ ಭಾರತೀಯ ಹೋರಾಟಗಳ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವಾಗಿ ದಾಖಲಾಗುವುದಂತೂ ಖಚಿತ.

Share
Related Articles
ಸುದ್ದಿ

ಡ್ರೋನ್ ಕಣ್ಣಲ್ಲಿ ಸೆರೆಯಾಯ್ತು ದೇವಿರಮ್ಮ ಬೆಟ್ಟದ ಅದ್ಭುತ ವೈಭವ: ಜನಸಾಗರದ ನಡುವೆ ರಕ್ಷಣಾ ಪಡೆಯ ಶ್ಲಾಘನೀಯ ಸೇವ.

ಮರ್ಚೆಡ್ ಡೇಸ್ ಸುದ್ದಿ|ಚಿಕ್ಕಮಂಗಳೂರು. ಚಿಕ್ಕಮಗಳೂರು :ತಾಲೂಕಿನ ಮಲ್ಲೇನಹಳ್ಳಿ ಸಮೀಪದಲ್ಲಿರುವ ಸುಪ್ರಸಿದ್ಧ ದೇವಿರಮ್ಮ ಬೆಟ್ಟದಲ್ಲಿ ಭಕ್ತಿಭಾವದ ಪರಾಕಾಷ್ಠೆ...

ಸುದ್ದಿ

ಆಕಾಶದಲ್ಲೇ ಬೆಳಕಿನ ಮಹಾಸಂಗ್ರಾಮ! ಶತಮಾನಗಳ ಸಂಪ್ರದಾಯಕ್ಕೆ ಸಾಕ್ಷಿಯಾದ ಕೇರಳದ ತ್ರಿಶೂರ್ ಪೂರಂನ ‘ವೆಡಿಕ್ಕೆಟ್ಟು’ ವೈಭವ.

  ಮರ್ಚೆಡ್ ಡೇಸ್ ಸುದ್ದಿ| ವಿಶೇಷ ವರದಿ ಭಕ್ತಿ, ಸಂಪ್ರದಾಯ ಮತ್ತು ಪಟಾಕಿಗಳ ಅಬ್ಬರದ ಅಪರೂಪದ...

ಸುದ್ದಿ

ಹಾಲುಮತದ ಪುಣ್ಯಕಾಶಿ ಹುಲಜಂತಿಯಲ್ಲಿ ಕಲಿಯುಗದ ಪವಾಡ: ಮಾಳಿಂಗರಾಯನ ಶಿಖರಕ್ಕೆ ಶಿವ-ಪಾರ್ವತಿಯರಿಂದ ರೇಷ್ಮೆ ಮುಂಡಾಸು ಸೇವೆ.

ಮರ್ಚೆಡ್ ಡೇಸ್ ಸುದ್ದಿ|ಹುಲಿಜಂತಿ. ಹುಲಿಜಂತಿ:ಹಾಲುಮತದ ಶ್ರದ್ಧಾ ಕೇಂದ್ರ ಹುಲಜಂತಿ ಕ್ಷೇತ ಸಮಸ್ತ ಹಾಲುಮತ ಸಂಸ್ಕೃತಿಯ ಆರಾಧ್ಯ...

ಅಂಕಣಸುದ್ದಿ

ಮಿಡ್ಲ್ ಕ್ಲಾಸ್ ದೀಪಾವಳಿ: ಬೆಳಕಿನ ಹಬ್ಬದ ಹಿಂದಿರುವ ಬಜೆಟ್ ಬದುಕು.

  ಮರ್ಚೆಡ್ ಡೇಸ್ ವಿಶೇಷ ಲೇಖನ: ಕೆಲವು ವರ್ಷಗಳ ಹಿಂದಿನ ಸಂಭ್ರಮ ಈಗಿಲ್ಲ; ಆಸೆಗಳು ದೊಡ್ಡದಿವೆ,...