ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ.
ಕಾರಟಗಿ: ತಾಲೂಕಿನ ಚಳ್ಳೂರು ಕ್ಯಾಂಪಿನ ವಿದ್ಯಾರ್ಥಿಗಳು ಶಾಲಾ -ಕಾಲೇಜುಗಳಿಗೆ ತೆರಳಲು ಇರುವ ಏಕೈಕ ಬಸ್ ಸೇವೆ ನಿಗದಿತ ಸಮಯಕ್ಕೆ ಸಂಚರಿಸದ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಕೆವಿಎಸ್) ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಚಳ್ಳೂರಿಗೆ ಪ್ರತಿದಿನ ಬೆಳಿಗ್ಗೆ 9.15 ಗಂಟೆಗೆ ಆಗಮಿಸಬೇಕಾದ ಬಸ್ ನಿರಂತರವಾಗಿ 10 ರಿಂದ 10.30 ಗಂಟೆಯ ನಂತರ ಬರುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದು,ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ತಕ್ಷಣ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು. ಬಳಿಕ ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಸ್ ಆಗಮಿಸಿತು.
ಕರ್ನಾಟಕ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ವೆಂಕಟೇಶ್, ಮಾತನಾಡಿ,“ವಿದ್ಯಾರ್ಥಿಗಳಿಗೆ ಸಮಯಕ್ಕೆ ಶಾಲಾ-ಕಾಲೇಜುಗಳಿಗೆ ತಲುಪುವಂತೆ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಸಮಸ್ಯೆ ಮರುಕಳಿಸಿದರೆ ವಿದ್ಯಾರ್ಥಿಗಳ ಪರವಾಗಿ ಮತ್ತೆ ಹೋರಾಟ ನಡೆಸಲಾಗುವುದು,” ಎಂದು ಎಚ್ಚರಿಕೆ ನೀಡಿದರು.ಸ್ಥಳಕ್ಕೆ ಆಗಮಿಸಿದ ಸಾರಿಗೆ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳ ಅಹವಾಲು ಆಲಿಸಿ, ಇನ್ನು ಮುಂದೆ ಬಸ್ ನಿಗದಿತ ವೇಳಾಪಟ್ಟಿಯಂತೆ ಸಂಚರಿಸುವಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ವೇಳೆ ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಯಮುನಾ ಚಳ್ಳೂರು, ಮಾದಿಗ ದಂಡೋರ ಹೋರಾಟ ಸಮಿತಿಯ ಕಾರಟಗಿ ತಾಲೂಕು ಕಾರ್ಯಾಧ್ಯಕ್ಷ ಶರಣಪ್ಪ ವಣಿಗೇರಿ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.