Home ಸುದ್ದಿ ಡಾಕ್ಟರ್ Dr ,ವಕೀಲರ Adv,ಸಾಲಿಗೆ ಸೇರಿದ ಗುರುಗಳು; ಶಿಕ್ಷಕರ ಹೆಸರಿನ ಮುಂದೆ ಇನ್ಮುಂದೆ ‘Tr.’ ಗೌರವ.
ಸುದ್ದಿ

ಡಾಕ್ಟರ್ Dr ,ವಕೀಲರ Adv,ಸಾಲಿಗೆ ಸೇರಿದ ಗುರುಗಳು; ಶಿಕ್ಷಕರ ಹೆಸರಿನ ಮುಂದೆ ಇನ್ಮುಂದೆ ‘Tr.’ ಗೌರವ.

Share
Share

 

ಮರ್ಚೆಡ್ ಡೇಸ್ ವಿಶೇಷ ಸುದ್ದಿ|ಬೆಂಗಳೂರು.

ಬೆಂಗಳೂರು: ಶಿಕ್ಷಕರು ಎಂದು ಸಂಬೋಧಿಸುವ ಎಲ್ಲಾ ಗುರುಗಳಿಗೆ ಶಿಕ್ಷಕ ದಿನಾಚರಣೆಯ ವಿಶೇಷ ಬಿರುದು ನೀಡಿ ಗೌರವಿಸಿದ ರಾಜ್ಯ ಸರ್ಕಾರ ವೈದ್ಯರ ಹೆಸರಿನ ಮುಂದೆ ‘Dr.’ (ಡಾಕ್ಟರ್), ವಕೀಲರ ಹೆಸರಿನ ಮುಂದೆ ‘Adv.’ ಎಂದು ಕರೆದು ಸಮಾಜದಲ್ಲಿ ಅವರಿಗೆ ವಿಶೇಷ ವೃತ್ತಿಪರ ಗೌರವ ನೀಡುವುದು ಮೊದಲಿನಿಂದಲೂ ನಡೆದುಬಂದ ಸಂಪ್ರದಾಯ. ಇದೀಗ ಅದೇ ಮಾದರಿಯಲ್ಲಿ, ನಾಡಿನ ಭವಿಷ್ಯ ರೂಪಿಸುವ ಶಿಕ್ಷಕರಿಗೆ ರಾಜ್ಯ ಸರ್ಕಾರ ಮಹತ್ವದ ಗೌರವವೊಂದನ್ನು ಘೋಷಿಸಿದೆ. ಇನ್ಮುಂದೆ ಕರ್ನಾಟಕದ ಶಿಕ್ಷಕರು ತಮ್ಮ ಹೆಸರಿನ ಮುಂದೆ ಹೆಮ್ಮೆಯಿಂದ ‘Tr.’ (ಟೀಚರ್) ಎಂದು ಬರೆದುಕೊಳ್ಳಲು ಸರ್ಕಾರ ಅಧಿಕೃತ ಹಸಿರು ನಿಶಾನೆ ತೋರಿದೆ. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಹೊರಬಿದ್ದ ಈ ನಿರ್ಧಾರ ಶಿಕ್ಷಕ ವೃಂದದಲ್ಲಿ ಕ್ಷಣಕಾಲ ಸಂಭ್ರಮ ಹಾಗೂ ಹೆಮ್ಮೆಯ ಭಾವವನ್ನು ಮೂಡಿಸಿದೆ.

ನಮ್ಮ ಭಾರತೀಯ ಪರಂಪರೆ ಹಾಗೂ ಸಮಾಜದಲ್ಲಿ ಶಿಕ್ಷಕರಿಗೆ ಎಂದಿಗೂ ಗೌರವ ಕಮ್ಮಿಯಾಗಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಬಾಲ್ಯದಿಂದ ಯೌವನದವರೆಗಿನ ನಡವಳಿಕೆ, ಜೀವನ ಮೌಲ್ಯಗಳು ಹಾಗೂ ವೃತ್ತಿ ಬದುಕಿನ ಪ್ರತಿಯೊಂದು ಹಂತದಲ್ಲೂ ಗುರು ಕಲಿಸಿದ ಪಾಠವೇ ದಾರಿದೀಪ. ವಿದ್ಯಾರ್ಥಿಯೊಬ್ಬ ಸಮಾಜದಲ್ಲಿ ಉನ್ನತ ಅಧಿಕಾರಿಯಾದರೂ, ರಾಜಕಾರಣಿಯಾದರೂ ಅಥವಾ ಸಾಧಕನಾದರೂ ಅವರ ಯಶಸ್ಸಿನ ಹಿಂದಿನ ಚಾಲಕಶಕ್ತಿ ಅವರ ಶಾಲಾ ದಿನಗಳ ಶಿಕ್ಷಕರೇ ಆಗಿರುತ್ತಾರೆ. ಹೀಗಾಗಿ ಕೇವಲ ಬಿರುದು ಮಾತ್ರವಲ್ಲ, ಸಮಾಜದ ಪ್ರತಿಯೊಬ್ಬರ ಹೃದಯದಲ್ಲೂ ಶಿಕ್ಷಕರಿಗೆ ಅನನ್ಯ ಹಾಗೂ ಶಾಶ್ವತ ಸ್ಥಾನವಿದೆ.

ಹೆಸರಿನ ಮುಂದೆ ‘Tr.’ ಎಂಬ ಎರಡೆರಡು ಅಕ್ಷರಗಳನ್ನು ಸೇರಿಸುವುದರಿಂದ ಸಮಾಜದಲ್ಲಿ ವೃತ್ತಿಪರ ಮನ್ನಣೆ ಸಿಗಬಹುದು. ಆದರೆ ಅದೇ ಹೊತ್ತಿನಲ್ಲಿ, ಕೇವಲ ಸಾಂಕೇತಿಕ ಬಿರುದಿನಿಂದ ಶಿಕ್ಷಕರ ದೈನಂದಿನ ಸಂಕಷ್ಟಗಳು ಹಾಗೂ ವಾಸ್ತವ ಬದುಕಿನ ಆತಂಕಗಳು ನಿವಾರಣೆಯಾಗಲು ಸಾಧ್ಯವೇ ಎಂಬ ಗಂಭೀರ ಪ್ರಶ್ನೆ ಈಗ ಶಿಕ್ಷಣ ವಲಯದಲ್ಲಿ ವ್ಯಾಪಕವಾಗಿ ಎದ್ದಿದೆ. ಹೆಸರಿನ ಮುಂದಿನ ಗೌರವಕ್ಕೆ ತಕ್ಕಂತೆ ಅವರ ವೃತ್ತಿಬದುಕಿಗೆ ಸುಭದ್ರ ನೆಲೆ ಮತ್ತು ಆರ್ಥಿಕ ರಕ್ಷಣೆ ಒದಗಿಸಿದಾಗ ಮಾತ್ರ ಇಂತಹ ಗೌರವಕ್ಕೆ ನೈಜ ಅರ್ಥ ಲಭಿಸುತ್ತದೆ.

ಶಿಕ್ಷಕರ ಸಮುದಾಯವನ್ನು ಇಂದು ಅತಿ ಹೆಚ್ಚು ಕಾಡುತ್ತಿರುವ ಜ್ವಲಂತ ಸಮಸ್ಯೆಯೆಂದರೆ ಹಳೆಯ ಪಿಂಚಣಿ ಯೋಜನೆ (OPS) ಜಾರಿಯಾಗದಿರುವುದು. ನಿವೃತ್ತಿಯ ನಂತರದ ಮುಸ್ಸಂಜೆಯ ಬದುಕಿನಲ್ಲಿ ನೆಮ್ಮದಿಯಿಂದ ಬಾಳಲು ಆಸರೆಯಾಗಬೇಕಿದ್ದ ಒಪಿಎಸ್ ಇಲ್ಲದೆ ಸಾವಿರಾರು ಶಿಕ್ಷಕರು ಅತಂತ್ರರಾಗಿದ್ದಾರೆ. ‘ಎನ್‌ಪಿಎಸ್’ ವ್ಯಾಪ್ತಿಯಲ್ಲಿರುವ ಶಿಕ್ಷಕರು ನಿವೃತ್ತಿಯ ಭವಿಷ್ಯದ ಬಗ್ಗೆ ದಿನನಿತ್ಯ ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ. ಸರ್ಕಾರ ಮನಸ್ಸು ಮಾಡಿ ಸಮಗ್ರವಾಗಿ ಒಪಿಎಸ್ ಜಾರಿಗೊಳಿಸಿದರೆ ಮಾತ್ರ ಶಿಕ್ಷಕರಿಗೆ ನೈಜ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಸಿಕ್ಕಂತಾಗುತ್ತದೆ.

ಶಿಕ್ಷಕರಿಂದ ಗುಣಮಟ್ಟದ ಬೋಧನೆ ಹಾಗೂ ಸ್ಪರ್ಧಾತ್ಮಕ ಫಲಿತಾಂಶವನ್ನು ನಿರೀಕ್ಷಿಸುವ ಸರ್ಕಾರ, ಗ್ರಾಮೀಣ ಹಾಗೂ ಹಿಂದುಳಿದ ಭಾಗಗಳ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿಲ್ಲ. ಇಂದಿಗೂ ಅನೇಕ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು, ಸುಸಜ್ಜಿತ ಶೌಚಾಲಯಗಳು, ಡೆಸ್ಕ್‌ಗಳು, ಕಂಪ್ಯೂಟರ್ ಲ್ಯಾಬ್ ಹಾಗೂ ಸ್ವಚ್ಛ ಕೊಠಡಿಗಳ ಕೊರತೆ ಎದ್ದು ಕಾಣುತ್ತಿದೆ. ಬೋಧನೆಗೆ ಪೂರಕವಾದ ಶಾಂತ ಮತ್ತು ಆರೋಗ್ಯಕರ ವಾತಾವರಣವಿಲ್ಲದೆ ಶಿಕ್ಷಕರು ನಿತ್ಯವೂ ಕರ್ತವ್ಯ ನಿಭಾಯಿಸಲು ಹರಸಾಹಸ ಪಡುವಂತಾಗಿದೆ.

ಶಿಕ್ಷಕನ ಪ್ರಮುಖ ಮತ್ತು ಪವಿತ್ರ ಕರ್ತವ್ಯ ತರಗತಿಯಲ್ಲಿ ಮಕ್ಕಳಿಗೆ ವಿದ್ಯಾದಾನ ಮಾಡುವುದು. ಆದರೆ ಇಂದಿನ ವ್ಯವಸ್ಥೆಯಲ್ಲಿ ಶಿಕ್ಷಕರು ಪಾಠಕ್ಕಿಂತ ಹೆಚ್ಚಾಗಿ ಸರ್ಕಾರದ ಅಂಕಿ-ಅಂಶಗಳ ದಾಖಲಾತಿ, ನಿರಂತರ ಆನ್‌ಲೈನ್ ಡೇಟಾ ಎಂಟ್ರಿ, ಸಮೀಕ್ಷೆಗಳು, ಚುನಾವಣೆ ಹಾಗೂ ವಿವಿಧ ಇಲಾಖಾ ಯೋಜನೆಗಳ ಕೆಲಸಗಳಲ್ಲೇ ಮುಳುಗಿಹೋಗುತ್ತಿದ್ದಾರೆ. ಸರ್ಕಾರಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಶಿಕ್ಷಕರ ಶ್ರಮವನ್ನು ಬಳಸಿಕೊಳ್ಳಲಾಗುತ್ತಿದ್ದರೂ, ಇದರಿಂದಾಗಿ ಬೋಧನಾ ಅವಧಿಗೆ ತೀವ್ರ ಧಕ್ಕೆಯಾಗುತ್ತಿದ್ದು, ಶಿಕ್ಷಕರು ದಿನವಿಡೀ ಮೊಬೈಲ್ ಮತ್ತು ಪೋರ್ಟಲ್‌ಗಳ ಜೊತೆ ಹೆಣಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕ್ಷೇತ್ರ ಮಟ್ಟದಲ್ಲಿ ಶಾಲಾ ಶಿಕ್ಷಕರ ಮೇಲೆ ಮೇಲಧಿಕಾರಿಗಳು ಹೇರುತ್ತಿರುವ ಅತಿಯಾದ ಮಾನಸಿಕ ಒತ್ತಡ ಇಂದು ಮಿತಿಮೀರಿದೆ. ಕೇವಲ ಗುರಿ ಸಾಧನೆ, ಸಭೆಗಳು, ತಕ್ಷಣದ ವರದಿಗಳು ಹಾಗೂ ಕಠಿಣ ಎಚ್ಚರಿಕೆಗಳ ಹೆಸರಿನಲ್ಲಿ ನಡೆಯುವ ಕಿರುಕುಳದಿಂದಾಗಿ ಅನೇಕ ಶಿಕ್ಷಕರು ತೀವ್ರ ಮಾನಸಿಕ ಖಿನ್ನತೆ ಮತ್ತು ರಕ್ತದೊತ್ತಡದಂತಹ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಂತಹ ಅಸಹನೀಯ ಕರ್ತವ್ಯದ ಒತ್ತಡಕ್ಕೆ ಮಣಿದು ಕೆಲ ಶಿಕ್ಷಕರು ಪ್ರಾಣವನ್ನೇ ಕಳೆದುಕೊಂಡ ಹಾಗೂ ಆತ್ಮಹತ್ಯೆಗೆ ಶರಣಾದ ಮನಕಲಕುವ ಘಟನೆಗಳು ಇಡೀ ಸಮಾಜವನ್ನು ಬೆಚ್ಚಿಬೀಳಿಸಿವೆ.

ಶಿಕ್ಷಕರು ಯಾವುದೇ ಭಯ, ಆತಂಕವಿಲ್ಲದೆ ನಿರ್ಭೀತಿಯಿಂದ ತರಗತಿಯಲ್ಲಿ ತೊಡಗಿಸಿಕೊಳ್ಳಲು ಪೂರಕವಾದ ಸೌಹಾರ್ದಯುತ ಆಡಳಿತಾತ್ಮಕ ವಾತಾವರಣವನ್ನು ರೂಪಿಸುವುದು ಸರ್ಕಾರದ ಪ್ರಾಥಮಿಕ ಜವಾಬ್ದಾರಿಯಾಗಿದೆ. ಅಧಿಕಾರಿಗಳು ಬೆದರಿಕೆಯ ಸಂಸ್ಕೃತಿಯನ್ನು ಬಿಟ್ಟು ಶಿಕ್ಷಕರ ಸಮಸ್ಯೆಗಳನ್ನು ಆಲಿಸುವ, ಅವರಿಗೆ ಮಾರ್ಗದರ್ಶನ ನೀಡುವ ವಾತಾವರಣ ನಿರ್ಮಾಣವಾಗಬೇಕು. ಶಿಕ್ಷಕರ ಮಾನಸಿಕ ಆರೋಗ್ಯ ಕಾಪಾಡಲು ಕೌನ್ಸೆಲಿಂಗ್ ವ್ಯವಸ್ಥೆ ಮತ್ತು ಕೆಲಸದ ಒತ್ತಡ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ನಿಯಮಾವಳಿಗಳು ಜಾರಿಯಾಗಬೇಕಿದೆ.

ಶಿಕ್ಷಕರಿಗೆ ಸಮಾಜ ನೀಡುವ ಗೌರವದ ಜೊತೆಗೆ ಸರ್ಕಾರವೂ ಅವರ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಅರಿತು ಸ್ಪಂದಿಸಬೇಕು. ಸರಿಯಾದ ವೇತನ ಶ್ರೇಣಿ, ಸಕಾಲಿಕ ಮುಂಬಡ್ತಿ, ಆರೋಗ್ಯ ವಿಮೆ, ಗೌರವಯುತ ಭತ್ಯೆಗಳು ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಸರ್ಕಾರ ಆದ್ಯತೆಯ ಮೇರೆಗೆ ಪೂರೈಸಬೇಕು. ಅಂದಾಗ ಮಾತ್ರ ಶಿಕ್ಷಕರು ದುಪ್ಪಟ್ಟು ಉತ್ಸಾಹ, ಸ್ಪೂರ್ತಿ ಹಾಗೂ ಸ್ಪರ್ಧಾತ್ಮಕ ಮನೋಭಾವದಿಂದ ಮುಂದಿನ ಪೀಳಿಗೆಯನ್ನು ಕಟ್ಟಲು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಸಾಧ್ಯ.

ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಇಲಾಖೆ ಶಿಕ್ಷಕರ ಹೆಸರಿನ ಮುಂದೆ ‘Tr.’ ಎಂದು ಗೌರವ ಸೂಚಿಸಿರುವುದು ಖಂಡಿತವಾಗಿಯೂ ಶ್ಲಾಘನೀಯ ನಡೆ. ಆದರೆ, ಈ ಬಿರುದು ಕೇವಲ ಕಾಗದದ ಮೇಲಿನ ಆಕರ್ಷಕ ಅಕ್ಷರಗಳಾಗಿ ಉಳಿಯಬಾರದು. ಶಿಕ್ಷಕರ ಹಳೆಯ ಪಿಂಚಣಿ (OPS) ಹೋರಾಟಕ್ಕೆ ನ್ಯಾಯ ಸಿಕ್ಕಾಗ, ಶಾಲೆಗಳ ಮೂಲಸೌಕರ್ಯ ಸುಧಾರಿಸಿದಾಗ, ಬೋಧನೇತರ ಹೊರೆ ಹಾಗೂ ಅಧಿಕಾರಿಗಳ ಮಾನಸಿಕ ಒತ್ತಡದಿಂದ ಮುಕ್ತಿ ದೊರೆತಾಗ ಮಾತ್ರ ಈ ‘Tr.’ ಎಂಬ ಬಿರುದಿಗೆ ನಿಜವಾದ ಅರ್ಥ ಮತ್ತು ಗೌರವ ಸಾರ್ಥಕವಾಗುತ್ತದೆ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...