Home ಸುದ್ದಿ ಮರ್ಚೆಡ್ ಗ್ರಾಮದಲ್ಲಿ ‘ಏಳುಕೋಟಿ ಏಳುಕೋಟಿಗೆ’ ಉದ್ಘೋಷ: ಭಂಡಾರದ ಒಡೆಯ ಗಂಗರಾಯನ ಜಾತ್ರಾ ಸಂಭ್ರಮ.
ಸುದ್ದಿ

ಮರ್ಚೆಡ್ ಗ್ರಾಮದಲ್ಲಿ ‘ಏಳುಕೋಟಿ ಏಳುಕೋಟಿಗೆ’ ಉದ್ಘೋಷ: ಭಂಡಾರದ ಒಡೆಯ ಗಂಗರಾಯನ ಜಾತ್ರಾ ಸಂಭ್ರಮ.

Share
Share

 

 

 

 

 

 

 

 

ಮರ್ಚೆಡ್ ಡೇಸ್ ವಿಶೇಷ ಸುದ್ದಿ|ರಾಯಚೂರು.

ರಾಯಚೂರು: ತಾಲೂಕಿನ ಐತಿಹಾಸಿಕ ನೆಲೆಯಾದ ಮರ್ಚೆಡ್ ಗ್ರಾಮದಲ್ಲಿ ಶ್ರಾವಣ ಮಾಸದ ಮೂಲ ನಕ್ಷತ್ರ ಮತ್ತು ಹುಣ್ಣಿಮೆಯ ಪವಿತ್ರ ಸಂದರ್ಭದಲ್ಲಿ ಕುರುಬ ಸಮುದಾಯದ ಆರಾಧ್ಯ ಕುಲದೈವ, ಶ್ರೀ ಬೀರಲಿಂಗೇಶ್ವರ (ಜಡೆ ಗುರು ಗಂಗರಾಯ) ಮಹಾ ಜಾತ್ರಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗುತ್ತದೆ. ಶ್ರಾವಣ ಮಾಸದ ತಂಪಾದ ವಾತಾವರಣದಲ್ಲಿ ಇಡೀ ಊರಿಗೆ ಊರೇ ಹಳದಿ ಮಯವಾಗಿ ಭಕ್ತಿಯ ಪರಾಕಾಷ್ಠೆಯಲ್ಲಿ ಮುಳುಗೇಳುತ್ತದೆ.

ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಜನರು ಮಾಂಸಾಹಾರದಿಂದ ದೂರವಿರುವುದು ರೂಢಿ. ಆದರೆ ಮರ್ಚೆಡ್‌ನ ಈ ಬೀರಲಿಂಗೇಶ್ವರ ಜಾತ್ರೆಯ ವೈಶಿಷ್ಟ್ಯವೇ ಅತಿ ವಿಶಿಷ್ಟ. ಈ ಪವಿತ್ರ ಶ್ರಾವಣದಲ್ಲೇ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ನೂರಾರು ಕುರಿಗಳನ್ನು ದೇವರಿಗೆ ಅರ್ಪಿಸಿ, ‘ ಬಂಧು-ಮಿತ್ರರೆಲ್ಲರೂ ಒಟ್ಟಾಗಿ ಮಹಾ ಪ್ರಸಾದ ಸವಿಯುತ್ತಾರೆ. ಇದು ಸಮುದಾಯದ ಅನಾದಿ ಕಾಲದ ಸಂಪ್ರದಾಯ ಹಾಗೂ ದೈವದ ಮೇಲಿರುವ ಅಪಾರ ನಿಷ್ಠೆಯ ಸಂಕೇತವಾಗಿದೆ.

ಜಾತ್ರೆಯ ಆರಂಭಕ್ಕೆ ಮುನ್ನಾದಿನವೇ ರಾಯಚೂರು ಜಿಲ್ಲೆಯ ನೂರಾರು ಹಳ್ಳಿಗಳಿಂದ ಭಕ್ತ ಸಾಗರ ಮರ್ಚೆಡ್‌ನತ್ತ ಹರಿದು ಬರುತ್ತದೆ. ಕೇವಲ ಕರ್ನಾಟಕ ಮಾತ್ರವಲ್ಲದೆ, ನೆರೆಯ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದಲೂ ಸಹಸ್ರಾರು ಭಕ್ತರು ಕುಟುಂಬ ಸಮೇತರಾಗಿ ಆಗಮಿಸುತ್ತಾರೆ. ಕೆಲವರು ಪ್ರತಿವರ್ಷ ಬಂದರೆ, ಇನ್ನು ಕೆಲವರು ತಮ್ಮ ಶಕ್ತಿಗೆ ಅನುಗುಣವಾಗಿ ಎರಡು ಅಥವಾ ಐದು ವರ್ಷಗಳಿಗೊಮ್ಮೆ ಬಂದು ಹರಕೆ ತೀರಿಸುವ ಪದ್ಧತಿಯನ್ನು ಶ್ರದ್ಧೆಯಿಂದ ಪಾಲಿಸಿಕೊಂಡು ಬರುತ್ತಿದ್ದಾರೆ.

ಜಾತ್ರಾ ಮಹೋತ್ಸವದ ಮುಖ್ಯ ಆಚರಣೆಯ ಅಂಗವಾಗಿ ಉತ್ಸವಕ್ಕೂ ಐದಾರು ದಿನಗಳ ಮುಂಚಿತವಾಗಿಯೇ ಗಂಗರಾಯನ ಭವ್ಯ ಪಲ್ಲಕ್ಕಿಯನ್ನು ಪವಿತ್ರ ಕೃಷ್ಣಾ ನದಿಗೆ ಕೊಂಡೊಯ್ದು ಗಂಗಾಸ್ನಾನ ಮಾಡಿಸಲಾಗುತ್ತದೆ. ನದಿಯಲ್ಲಿ ಪುಣ್ಯಸ್ನಾನ ಮುಗಿಸಿದ ನಂತರ ಉತ್ಸವ ಮೂರ್ತಿಯನ್ನು ಸಡಗರದಿಂದ ಮರಳಿ ತಂದು ಕೋಟೆಯೊಳಗಿನ ಗಂಗರಾಯನ ಗದ್ದುಗೆಗೆ ಪ್ರತಿಷ್ಠಾಪಿಸಲಾಗುತ್ತದೆ.

ಶ್ರಾವಣದ ಮಧ್ಯರಾತ್ರಿಯಲ್ಲಿ ಊರಿನ ಹೆಣ್ಣುಮಕ್ಕಳು ಸಾಂಪ್ರದಾಯಿಕ ಉಡುಗೆಯಲ್ಲಿ ಪ್ರತಿ ಮನೆಯಿಂದಲೂ ಶ್ರದ್ಧಾ-ಭಕ್ತಿಗಳಿಂದ ಮಂಗಳಕರ ಕಳಸಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಾರೆ. ಕಳಸದ ಮಂಗಳಾರತಿಗಳೊಂದಿಗೆ ಜಡೆ ಗಂಗರಾಯನನ್ನು ಪೂಜಿಸುತ್ತಾ, ಮಂಗಳ ಗೀತೆಗಳನ್ನು ಹಾಡುತ್ತಾ ಪ್ರಮುಖ ದೇವಾಲಯಕ್ಕೆ ಸಾಗುವ ಈ ದೃಶ್ಯ ನೋಡುಗರ ಕಣ್ಮನ ತಣಿಸುತ್ತದೆ.

ಶ್ರಾವಣ ಮಾಸದ ಜಿಟಿ ಜಿಟಿ ಮಳೆ ಲೆಕ್ಕಿಸದೆ ನಡೆಯುವ ಭಂಡಾರದ ಪೂಜೆ ಈ ಜಾತ್ರೆಯ ಪ್ರಮುಖ ಆಕರ್ಷಣೆ. ಭಕ್ತರು ಆಕಾಶಕ್ಕೆ ಭಂಡಾರ ಎರಚುತ್ತಿದ್ದಂತೆ ಇಡೀ ಪರಿಸರವೇ ಚಿನ್ನದ ಬಣ್ಣಕ್ಕೆ ತಿರುಗುತ್ತದೆ. ಭಂಡಾರದ ಹೊಳೆಯಲ್ಲಿ ಮಿಂದೇಳುವ ಭಕ್ತರ ಮೈಮನಗಳಲ್ಲಿ ಭಕ್ತಿಭಾವ ಉಕ್ಕಿ ಹರಿಯುತ್ತದೆ.

ಜಾತ್ರೆಯ ಸಂಭ್ರಮಕ್ಕೆ ಡೊಳ್ಳಿನ ಕಳೆ ಇನ್ನಷ್ಟು ಮೆರುಗು ನೀಡುತ್ತದೆ. ಮುಖಂಡರು ಹಾಗೂ ಯುವಕರು ಡೊಳ್ಳಿನ ಪದಗಳನ್ನು ಹಾಡುತ್ತಾ, ವಿವಿಧ ಪಟ್ಟುಗಳ ಡೊಳ್ಳು ಕುಣಿತದ ಪ್ರದರ್ಶನ ನೀಡುತ್ತಾ ಊರ ಹೊರಗಿನ ಗುಡಿಯಿಂದ ಊರೊಳಗಿನ ಮುಖ್ಯ ದೇವಾಲಯದವರೆಗೆ ಹೆಜ್ಜೆ ಹಾಕುವ ವೈಭವ ರೋಮಾಂಚನಕಾರಿಯಾಗಿರುತ್ತದೆ.

ನೆಲದ ಮೇಲೆ ಭಕ್ತರ ಪಾದಗಳ ಸದ್ದು, ಕೈಯಲ್ಲಿ ಹಳದಿ ಭಂಡಾರ, ಮುಗಿಲಿನಲ್ಲಿ ಜಿಟಿ ಜಿಟಿ ಮಳೆಯ ಸಿಂಚನ—ಇವೆಲ್ಲದರ ನಡುವೆ ಇಡೀ ಮರ್ಚೆಡ್ ಗ್ರಾಮದಲ್ಲಿ ಮೊಳಗುವುದು ಕೇವಲ ಒಂದೇ ಒಂದು ನಾದ,

‘ಗುರು ಗಂಗಾಧರಾಯ ಶಿವ ಏಳು ಕೋಟಿಗಳು ಕೋಟೆಗೆ…’ ಎಂಬ ಗಗನಭೇದಿ ಜಯಘೋಷ ಮೊಳಗುತ್ತಿದ್ದಂತೆ ಭಕ್ತವೃಂದ ಭಕ್ತಿಯ ಪರವಶತೆಯಲ್ಲಿ ತೇಲುತ್ತದೆ. ಈ ದೈವಿಕ ಉದ್ಘೋಷವು ಮರ್ಚೆಡ್ ಗ್ರಾಮದ ಕೋಟೆ-ಕೊತ್ತಲಗಳಲ್ಲಿ ಪ್ರತಿಧ್ವನಿಸಿ ಇಡೀ ಪರಿಸರದಲ್ಲಿ ರೋಮಾಂಚನ ಸೃಷ್ಟಿಸುತ್ತದೆ.

ಎರಡು ದಿನಗಳ ಕಾಲ ಅದ್ದೂರಿಯಾಗಿ ಜರುಗುವ ಈ ಗಂಗರಾಯನ ಜಾತ್ರೆಯು ಭಕ್ತಿ, ಸಂಸ್ಕೃತಿ ಮತ್ತು ಸಮುದಾಯದ ಒಗ್ಗಟ್ಟನ್ನು ಸಾರುವ ಮಹಾ ಸಂಗಮವಾಗಿ ಕಂಗೊಳಿಸುತ್ತದೆ. ಜಾತ್ರೆ ಮುಗಿಸಿ ತಮ್ಮ ಊರುಗಳಿಗೆ ಮರಳುವ ಪ್ರತಿ ಭಕ್ತನ ಮುಖದಲ್ಲೂ ತೃಪ್ತಿ, ಕೈಯಲ್ಲಿ ಪ್ರಸಾದ ರೂಪದ ಹಳದಿ ಭಂಡಾರ ಹಾಗೂ ಬಾಯಲ್ಲಿ ‘ಏಳುಕೋಟಿ’ಯ ಜಯಘೋಷ ಅಚ್ಚಳಿಯದೆ ಉಳಿಯುತ್ತದೆ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...