ಮರ್ಚೆಡ್ ಡೇಸ್ ಸುದ್ದಿ.
ಹುಬ್ಬಳ್ಳಿ:ಕರ್ನಾಟಕ ರಾಜ್ಯ ಬಂಜಾರ ಸಾಹಿತ್ಯ ಪರಿಷತ್ (ರಿ.) ರಾಜ್ಯ ಘಟಕ ಹುಬ್ಬಳ್ಳಿ ವತಿಯಿಂದ ನಗರದ ಸರ್ಕಿಟ್ ಹೌಸ್ನಲ್ಲಿ ಪರಿಷತ್ತಿನ ಎರಡನೆಯ ವಾರ್ಷಿಕ ಮಹಾಸಭೆಯನ್ನು ಯಶಸ್ವಿಯಾಗಿ ಏರ್ಪಡಿಸಲಾಯಿತು. ಹಿರಿಯ ಸಾಹಿತಿ ಹಾಗೂ ಪರಿಷತ್ತಿನ ರಾಜ್ಯ ಗೌರವ ಅಧ್ಯಕ್ಷರಾದ ಪ್ರೊ. ಪಿ.ಕೆ. ಖಂಡೋಬಾ ಅವರ ಮಾರ್ಗದರ್ಶನದಲ್ಲಿ ಸಮಾವೇಶಗೊಂಡ ಈ ಸಭೆಯಲ್ಲಿ, ಬಂಜಾರ ಸಮುದಾಯದ ಸಾಂಸ್ಕೃತಿಕ ಪರಂಪರೆ ಮತ್ತು ಸಾಮಾಜಿಕ ಸಬಲೀಕರಣದ ಕುರಿತು ವಿಸ್ತೃತ ಚಿಂತನ-ಮಂಥನ ನಡೆಯಿತು.
ಕಾರ್ಯಕ್ರಮದಲ್ಲಿ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಶ್ರೀ ಕಾಂತ ಜಾಧವ್, ಪ್ರಧಾನ ಕಾರ್ಯದರ್ಶಿ ಡಾ. ಎಲ್.ಪಿ. ಕಠಾರಿ ನಾಯ್ಕ, ಖಜಾಂಚಿ ಮೋತಿಲಾಲ್ ರಾಠೋಡ ಸೇರಿದಂತೆ ಉಪಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಪಾಲ್ಗೊಂಡಿದ್ದರು. ಮುಂಬರುವ ದಿನಗಳಲ್ಲಿ ಬಂಜಾರ ಸಂಸ್ಕೃತಿ, ಜಾನಪದ ಕಲೆ, ಸಾಹಿತ್ಯ ಹಾಗೂ ಬಂಜಾರ ಲಿಪಿಯ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಲು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.
ಸಮುದಾಯದ ಆರೋಗ್ಯ ರಕ್ಷಣೆ, ವರದಕ್ಷಿಣೆ ಪದ್ಧತಿ ನಿಷೇಧ, ವ್ಯಾಪಾರ-ವಹಿವಾಟು ವೃದ್ಧಿ, ಕೃಷಿ ಕ್ಷೇತ್ರದ ಅನುಭವ ಹಂಚಿಕೆ ಹಾಗೂ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳುವ ಸೈನಿಕರಿಗೆ ಪ್ರೋತ್ಸಾಹ ನೀಡುವ ಯೋಜನೆಗಳನ್ನು ರೂಪಿಸಲು ನಿರ್ಧರಿಸಲಾಯಿತು. ಬಡತನ ನಿರ್ಮೂಲನೆಗೆ ‘ಉತ್ತಮ ಶಿಕ್ಷಣ’ವೇ ಏಕೈಕ ರಾಮಬಾಣ ಎಂಬ ಅಂಶಕ್ಕೆ ಒತ್ತು ನೀಡಿದ ಪದಾಧಿಕಾರಿಗಳು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಗ್ರ ಶಿಕ್ಷಣ ಲಭಿಸುವಂತಾಗಬೇಕು ಎಂದು ಪ್ರತಿಪಾದಿಸಿದರು.
ತಾಂಡಾಗಳ ಸರ್ವಾಂಗೀಣ ಪ್ರಗತಿಗೆ ‘ನಶ ಮುಕ್ತ ತಾಂಡಾ’ ನಿರ್ಮಾಣ ಅತ್ಯಗತ್ಯವೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಯುವಜನರನ್ನು ದುಶ್ಚಟಗಳಿಂದ ದೂರವಿರಿಸಿ, ಶಿಕ್ಷಣ ಹಾಗೂ ಆರ್ಥಿಕ ಸಬಲೀಕರಣದತ್ತ ಮುನ್ನಡೆಸಲು ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳುವ ಜವಾಬ್ದಾರಿಯನ್ನು ಸಂಘಟನೆಯ ಪದಾಧಿಕಾರಿಗಳಿಗೆ ವಹಿಸಲಾಯಿತು.
ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಅದ್ಧೂರಿಯಾಗಿ ‘ಕರ್ನಾಟಕ ರಾಜ್ಯ ಬಂಜಾರ ಸಾಹಿತ್ಯ ಸಮ್ಮೇಳನ’ವನ್ನು ಸಂಘಟಿಸುವ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿ, ದಿನಾಂಕ ಹಾಗೂ ರೂಪುರೇಷೆಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.