ಮರ್ಚೇಡ್ ಡೇಸ್ ಸುದ್ದಿ|ಕೊಪ್ಪಳ.
ಕೊಪ್ಪಳ: ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್ಪಿ) ದಕ್ಷ ಐಪಿಎಸ್ ಅಧಿಕಾರಿ ಸಾಹಿಲ್ ಬಾಗ್ಲಾ ಅವರನ್ನು ರಾಜ್ಯ ಸರ್ಕಾರ ನಿಯೋಜಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಬೆಂಗಳೂರು ಪೂರ್ವ ವಿಭಾಗದ ಟ್ರಾಫಿಕ್ ಡಿಸಿಪಿಯಾಗಿ ಕಾರ್ಯನಿರ್ವಹಿಸಿ ಸೈ ಎನಿಸಿಕೊಂಡಿದ್ದ ಇವರು, ಇದೀಗ ಕೊಪ್ಪಳ ಜಿಲ್ಲಾ ಕಾನೂನು ಸುವ್ಯವಸ್ಥೆಯ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ. ಸರ್ಕಾರದ ಈ ದಿಢೀರ್ ವರ್ಗಾವಣೆ ಆದೇಶ ಜಿಲ್ಲೆಯ ಆಡಳಿತ ಹಾಗೂ ಸಾರ್ವಜನಿಕ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.
ಮೂಲತಃ ಪಂಜಾಬ್ ರಾಜ್ಯದವರಾದ ಸಾಹಿಲ್ ಬಾಗ್ಲಾ, 2018ರ ಬ್ಯಾಚ್‌ನ ಪ್ರತಿಭಾವಂತ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ. ಬಿ.ಟೆಕ್ ಪದವೀಧರರಾಗಿರುವ ಇವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ನೇರವಾಗಿ ಐಪಿಎಸ್ ಹುದ್ದೆ ಅಲಂಕರಿಸಿದವರು. ಮೇಲ್ನೋಟಕ್ಕೆ ಮೃದು ಸ್ವಭಾವದವರಂತೆ ಕಂಡರೂ, ಕರ್ತವ್ಯದಲ್ಲಿ ಅಷ್ಟೇ ದಕ್ಷ, ನಿಷ್ಠಾವಂತ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ. 2018ರ ಬ್ಯಾಚ್‌ನ ಬಹುತೇಕ ಅಧಿಕಾರಿಗಳು ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದರೂ, ಬಾಗ್ಲಾ ಅವರಿಗೆ ಜಿಲ್ಲೆಯೊಂದರ ಪೂರ್ಣ ಎಸ್ಪಿಯಾಗಿ ಕಾರ್ಯನಿರ್ವಹಿಸಲು ಮೊದಲ ಬಾರಿಗೆ ಅವಕಾಶ ಒದಗಿಬಂದಿದೆ.
ಜಿಲ್ಲೆಗೆ ಹೊಸದಾಗಿ ಆಗಮಿಸುತ್ತಿರುವ ನೂತನ ಪೊಲೀಸ್ ವರಿಷ್ಠಾಧಿಕಾರಿಗೆ ಕೊಪ್ಪಳ ಜನತೆಯ ಪರವಾಗಿ ಆತ್ಮೀಯ ಸ್ವಾಗತ. ಒಬ್ಬರೇ ಅಧಿಕಾರಿಯಿಂದ ಇಡೀ ವ್ಯವಸ್ಥೆ ರಾತ್ರೋರಾತ್ರಿ ಬದಲಾಗಲು ಸಾಧ್ಯವಿಲ್ಲವಾದರೂ, ಸಾಹಿಲ್ ಬಾಗ್ಲಾ ಅವರ ನೇತೃತ್ವದಲ್ಲಿ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಹೊಸ ಚೈತನ್ಯ ಮೂಡಲಿ. ಅಪರಾಧ ನಿಯಂತ್ರಣ, ಸಂಚಾರ ಸುಧಾರಣೆ ಹಾಗೂ ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ನಿರ್ಮಾಣದಲ್ಲಿ ಕೊಪ್ಪಳ ಪೊಲೀಸರು ಹೊಸ ಮೈಲಿಗಲ್ಲು ಸ್ಥಾಪಿಸಲಿ ಎಂಬುದು ಜಿಲ್ಲೆಯ ಜನರ ಪ್ರಮುಖ ನಿರೀಕ್ಷೆಯಾಗಿದೆ.