ಮರ್ಚೆಡ್ ಡೇಸ್ ಸುದ್ದಿ.|ಗಂಗಾವತಿ.
ಗಂಗಾವತಿ: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಠಾಣೆ ಆವರಣದಲ್ಲಿ ಸೌಹಾರ್ದಯುತ ಶಾಂತಿ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯಲ್ಲಿ ಡಿವೈಎಸ್ಪಿ ಜಿ.ಎಸ್. ನ್ಯಾಮಗೌಡರ್ ಮಾತನಾಡಿ, “ಈದ್ ಮಿಲಾದ್ ಹಬ್ಬವನ್ನು ಎಲ್ಲರೂ ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆಯಿಂದ ಆಚರಿಸಬೇಕು. ಮೆರವಣಿಗೆ ಮತ್ತು ಧ್ವನಿವರ್ಧಕ (ಸೌಂಡ್ ಸಿಸ್ಟಮ್) ಬಳಕೆಗೆ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಯಾವುದೇ ವದಂತಿಗಳಿಗೆ ಕಿವಿಗೊಡದೆ, ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು” ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ನಗರ ಪೊಲೀಸ್ ಠಾಣೆ ಸಿಪಿಐ ಪ್ರಶಾಂತ್ ರಾಯ್ಕರ್ ಮಾತನಾಡಿ, ಹಬ್ಬದ ವೇಳೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗುವುದು. ಗಂಗಾವತಿಯ ಸೌಹಾರ್ದ ಪರಂಪರೆಯನ್ನು ಮುಂದುವರಿಸಲು ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ ಇಸ್ಮಾಯಿಲ್, ನಗರ ಪೊಲೀಸ್ ಠಾಣೆ ಪಿಎಸ್ಐ ಶಿವಶರಣ, ನಗರಸಭೆ ಆರೋಗ್ಯ ಮೇಲ್ವಿಚಾರಕ ಶರಣಪ್ಪ, ಕಂದಾಯ ಅಧಿಕಾರಿ ವಿಜಯಕುಮಾರ್, ಮುಖಂಡರಾದ ಎಸ್.ಬಿ. ಖಾದ್ರಿ, ಮಾಜಿ ನಗರಸಭೆ ಸದಸ್ಯ ಖಾಜಾಹುಸೇನ್ ಗದ್ವಾಲ್, ಅನ್ವರಸಾಬ್, ಮಾಜಿ ನಗರಸಭೆ ಅಧ್ಯಕ್ಷ ಹನುಮಂತಪ್ಪ ನಾಯಕ, ಹೊಸಹಳ್ಳಿ ಶಂಕರ್ ಗೌಡ, ಹುಲಿಗೆಮ್ಮ ಸೇರಿದಂತೆ ವಿವಿಧ ಸಮುದಾಯಗಳ ಪ್ರಮುಖರು ಉಪಸ್ಥಿತರಿದ್ದರು.