
ಮರ್ಚೆಡ್ ಡೇಸ್ ಸುದ್ದಿ.|ಹಗರಿಬೊಮ್ಮನಹಳ್ಳಿ.
ಹಗರಿಬೊಮ್ಮನಹಳ್ಳಿ : ತಾಲ್ಲೂಕಿನ ತಂಬ್ರಹಳ್ಳಿ ಗ್ರಾಮದ ಸಮೀಪವಿರುವ ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿದ್ದ ಒಂದೇ ಕುಟುಂಬದ ಮೂವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಮಂಗಳವಾರ ಸಂಜೆ ನಡೆದಿದೆ. ನಾಪತ್ತೆಯಾಗಿದ್ದ ಮೂವರ ಪೈಕಿ ಓರ್ವನ ಮೃತದೇಹ ಪತ್ತೆಯಾಗಿದ್ದು, ನೀರಿನಲ್ಲಿ ಕೊಚ್ಚಿಹೋಗಿರುವ ಉಳಿದ ಇಬ್ಬರಿಗಾಗಿ ರಕ್ಷಣಾ ಸಿಬ್ಬಂದಿ ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಜಲಸಮಾಧಿಯಾದ ದುರ್ದೈವಿಗಳನ್ನು ಮಡಿವಾಳರ ರಾಜ (22), ಮಡಿವಾಳರ ಯಮುನಪ್ಪ (20) ಹಾಗೂ ಮಡಿವಾಳರ ರಾಜಪ್ಪ (26) ಎಂದು ಗುರುತಿಸಲಾಗಿದೆ. ಮಂಗಳವಾರ ಮಧ್ಯಾಹ್ನ ಮೂವರೂ ಒಟ್ಟಿಗೆ ಮೀನು ಹಿಡಿಯಲೆಂದು ಹಿನ್ನೀರಿಗೆ ತೆರಳಿದ್ದರು. ಆದರೆ ಸಂಜೆಯಾದರೂ ಮನೆಗೆ ಮರಳದಿದ್ದಾಗ ಗಾಬರಿಗೊಂಡ ಕುಟುಂಬಸ್ಥರು ಹಾಗೂ ಸಂಬಂಧಿಕರು ನದಿಯ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಸುಳಿವು ಸಿಗದ ಕಾರಣ ಕೊನೆಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.i
ವಿಷಯ ತಿಳಿಯುತ್ತಿದ್ದಂತೆ ಹಗರಿಬೊಮ್ಮನಹಳ್ಳಿ ಹಾಗೂ ತಂಬ್ರಹಳ್ಳಿ ಠಾಣೆಯ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಹಿನ್ನೀರಿನಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದರು. ಬಳಿಕ ರಾಜ್ಯ ವಿಪತ್ತು ಸ್ಪಂದನಾ ಪಡೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೋಟ್ಗಳ ಮೂಲಕ ಜಂಟಿ ಶೋಧ ಕಾರ್ಯ ಕೈಗೊಂಡರು. ಈ ವೇಳೆ ಓರ್ವ ಯುವಕನ ಮೃತದೇಹ ಪತ್ತೆಯಾಗಿದ್ದು, ಉಳಿದ ಇಬ್ಬರ ಪತ್ತೆಗಾಗಿ ನೀರಿನ ಸೆಳೆತ ಹೆಚ್ಚಿರುವ ಆಳವಾದ ಪ್ರದೇಶಗಳಲ್ಲಿ ಕಾರ್ಯಾಚರಣೆ ಮುಂದುವರಿದಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಹಸೀಲ್ದಾರ್ ಆರ್. ಕವಿತಾ, ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಸಿಪಿಐ ವಿಕಾಸ್ ಲಂಬಾಣಿ ಹಾಗೂ ಪಿ. ಜಾಹ್ನವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಗರಿಬೊಮ್ಮನಹಳ್ಳಿ ಮತ್ತು ತಂಬ್ರಹಳ್ಳಿ ಪೊಲೀಸರು ಘಟನಾ ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಈ ದುರ್ಘಟನೆ ಸಂಬಂಧ ತಂಬ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೀನು ಹಿಡಿಯುವ ಭರದಲ್ಲಿ ಯುವಕರು ನೀರಿನ ಅನಿರೀಕ್ಷಿತ ಸೆಳೆತ ಹಾಗೂ ಸುಳಿಗೆ ಸಿಲುಕಿ ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಒಂದೇ ಕುಟುಂಬದ ಮೂವರು ಯುವಕರು ಜಲಸಮಾಧಿಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಉಳಿದ ಇಬ್ಬರ ಮೃತದೇಹಗಳ ಶೋಧ ಪೂರ್ಣಗೊಂಡ ಬಳಿಕ ಘಟನೆಯ ನಿಖರ ವಿವರಗಳು ಲಭ್ಯವಾಗಲಿವೆ.