
ಮರ್ಚೆಡ್ ಡೇಸ್ ಸುದ್ದಿ|ಕನಕಗಿರಿ.
ಕೊಪ್ಪಳ : ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿಯಲ್ಲಿ ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಹಾಗೂ ಎಸ್.ಎಸ್.ಪಿ. ಲೈಫ್ ಮಿಷನ್ ಅವರ ಜಂಟಿ ಆಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಉಚಿತ ಶಿಬಿರವು ದಿನಾಂಕ 25-08-2026ರ ಮಂಗಳವಾರದಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ನವಲಿಯ 1ನೇ ವಾರ್ಡ್ನಲ್ಲಿರುವ ದುರ್ಗಾದೇವಿ ಸಮುದಾಯ ಭವನದಲ್ಲಿ ನಡೆಯಲಿದೆ. ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಉತ್ತಮ ವೈದ್ಯಕೀಯ ಸೇವೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಶಿಬಿರದಲ್ಲಿ ಪ್ರಮುಖವಾಗಿ ಹೃದಯರೋಗ, ನರರೋಗ, ಮೂತ್ರಪಿಂಡದ ಕಲ್ಲು, ಕ್ಯಾನ್ಸರ್, ಸಾಮಾನ್ಯ ರೋಗಗಳು, ಸ್ತ್ರೀರೋಗ ಹಾಗೂ ಮೂಳೆ ಮತ್ತು ಕೀಲು ರೋಗಗಳಿಗೆ ಸಂಬಂಧಿಸಿದಂತೆ ಉಚಿತ ತಪಾಸಣೆ ನಡೆಸಲಾಗುತ್ತದೆ. ಮೆಟ್ಟಿಲು ಹತ್ತುವಾಗ ಆಯಾಸವಾಗುವುದು, ಎದೆನೋವು, ಮೂತ್ರ ವಿಸರ್ಜನೆಯಲ್ಲಿ ತೊಂದರೆ, ಬೆನ್ನು ನೋವು, ಕುತ್ತಿಗೆ ನೋವು ಹಾಗೂ ಮೆದುಳು ಗಡ್ಡೆಯಂತಹ ಲಕ್ಷಣಗಳಿಂದ ಬಳಲುತ್ತಿರುವವರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದು. ಈ ಶಿಬಿರಕ್ಕೆ ಬರುವ ರೋಗಿಗಳು ತಮ್ಮ ಹಳೆಯ ವೈದ್ಯಕೀಯ ತಪಾಸಣಾ ದಾಖಲೆಗಳನ್ನು ಕಡ್ಡಾಯವಾಗಿ ತರಲು ಕೋರಲಾಗಿದೆ.
ಶಿಬಿರದಲ್ಲಿ ತಪಾಸಣೆಗೊಳಪಟ್ಟ ನಂತರ ಹೆಚ್ಚಿನ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದರೆ, ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ವಿಶೇಷವಾಗಿ ಬಿ.ಪಿ.ಎಲ್ (BPL GREEN) ಅಥವಾ ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಅಭ್ಯರ್ಥಿಗಳಿಗೆ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಹೃದಯರೋಗ, ನರರೋಗ ಮತ್ತು ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆಗೆ ಸಂಪೂರ್ಣ ಉಚಿತವಾಗಿ ಹೆಚ್ಚಿನ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯನ್ನು ಒದಗಿಸಲಾಗುತ್ತದೆ.
ಈ ಬೃಹತ್ ಶಿಬಿರವನ್ನು ಎಸ್.ಎಸ್.ಪಿ. ಲೈಫ್ ಮಿಷನ್ ಸಂಸ್ಥಾಪಕರಾದ ಸ್ವಪ್ನರಾಜ್ ಪಟೇಲ್, ಅಧ್ಯಕ್ಷರಾದ ಸುಫಿಯಾನ್ ರಾಜಾ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಮಾಜ ಸೇವಕರ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಜಿಲ್ಲಾ ಮತ್ತು ತಾಲೂಕು ಆರೋಗ್ಯಾಧಿಕಾರಿಗಳು, ಸರ್ಕಾರಿ ಆಸ್ಪತ್ರೆಯ ವೈದ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಈ ಕಾರ್ಯಕ್ರಮಕ್ಕೆ ಸಹಕರಿಸುತ್ತಿದ್ದಾರೆ. ಶಿಬಿರದ ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗೆ 80734 97461, 72593 28861 ಅಥವಾ 76766 10720 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.