
ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.
ಗಂಗಾವತಿ: ಇಲ್ಲಿನ ಎಚ್.ಆರ್. ಸರೋಜಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕ ಹಾಗೂ ಗಂಗಾವತಿ ನಗರಸಭೆಯ ಸಹಯೋಗದೊಂದಿಗೆ ‘ತ್ಯಾಜ್ಯ ವಿಂಗಡಣೆ’ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆಯ ಪರಿಸರ ಅಭಿಯಂತರರಾದ ಶರಣಪ್ಪ”ಸ್ವಚ್ಛತೆ ಎಂಬುದು ನಮ್ಮ ಬದುಕಿನ ಸಂಸ್ಕೃತಿ ಮತ್ತು ಸಾಮಾಜಿಕ ಜವಾಬ್ದಾರಿ. ನಾವು ದಿನನಿತ್ಯ ಉತ್ಪಾದಿಸುವ ಕಸ ಸಣ್ಣದೆನಿಸಿದರೂ, ನಗರ ಮಟ್ಟದಲ್ಲಿ ಅದು ದೊಡ್ಡ ಬೆಟ್ಟವಾಗಿ ಪರಿಸರಕ್ಕೆ ಮಾರಕವಾಗುತ್ತಿದೆ.”
“ಕಸ ಉತ್ಪಾದನೆಯನ್ನು ತಡೆಯುವುದು ಕಷ್ಟವಾಗಬಹುದು, ಆದರೆ ಹಸಿಕಸ, ಒಣಕಸ, ಸ್ಯಾನಿಟರಿ ಹಾಗೂ ವಿಶೇಷ ತ್ಯಾಜ್ಯಗಳನ್ನು ಸರಿಯಾಗಿ ವಿಂಗಡಿಸಿ ಪೌರಕಾರ್ಮಿಕರಿಗೆ ನೀಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ” ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ರವಿ ಎನ್. ಚವ್ಹಾಣ ಅವರು”ಸ್ವಚ್ಛತೆ ಎಂಬುದು ಬೇರೆಯವರು ನಮಗಾಗಿ ಮಾಡುವ ಕೆಲಸವಲ್ಲ, ಅದು ನಮ್ಮಿಂದಲೇ ಆರಂಭವಾಗಬೇಕಾದ ಧರ್ಮ.”
“ಇಂದಿನಿಂದಲೇ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ತ್ಯಾಜ್ಯ ವಿಂಗಡಣೆ ಮಾಡುವ ಶಪಥ ತೊಟ್ಟು, ಸುಂದರ ಹಾಗೂ ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕು” ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಕೆ.ಎಚ್. ಕೊಳ್ಳಣ್ಣನವರ್, ನರಸಿಂಹಲು, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಹನುಮಂತ ವಡ್ಡರ, ಪ್ರೌಢಶಾಲೆ ವಿಭಾಗದ ಉಪ ಪ್ರಾಚಾರ್ಯರಾದ ಯು.ಎಂ. ಬಸವರಾಜ, ಶಿಕ್ಷಕಿಯರಾದ ಶ್ರೀಮತಿ ದೀಪಾ, ಶ್ರೀಮತಿ ವಿಜಯಲಕ್ಷ್ಮಿ, ಶ್ರೀಮತಿ ಜ್ಯೋತಿ ಹಾಗೂ ನಗರಸಭೆಯ ಸಮುದಾಯ ಮೊಬಿಲೈಜರ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.