
ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.
ಗಂಗಾವತಿ : ಶಂಕರ ಮಠದ ಶಾರದಾ ಮಂದಿರದಲ್ಲಿ ಶೃಂಗೇರಿ ಪೀಠದ ಜಗದ್ಗುರು ಶ್ರೀ ಶ್ರೀ ವಿದುಶೇಖರ ಭಾರತೀ ಮಹಾಸ್ವಾಮಿಗಳವರ 34ನೇ ವರ್ಧಂತೀ ಮಹೋತ್ಸವ ಮತ್ತು ಧರ್ಮ ಸಭೆಯನ್ನು ಆಯೋಜಿಸಲಾಗಿತ್ತು. ಮಠದ ಧರ್ಮದರ್ಶಿ ನಾರಾಯಣ್ ರಾವ್ ವೈದ್ಯ ಅವರು ಮಾತನಾಡಿ, ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ದಿವ್ಯ ದೃಷ್ಟಿಯ ಫಲವಾಗಿ ಶ್ರೀ ವಿದುಶೇಖರ ಭಾರತೀ ಮಹಾಸ್ವಾಮಿಗಳನ್ನು ಉತ್ತರಾಧಿಕಾರಿಯನ್ನಾಗಿ ಪಟ್ಟಾಭಿಷೇಕ ಮಾಡಲಾಗಿದೆ ಎಂದು ತಿಳಿಸಿದರು. ಶ್ರೀಗಳ ಧರ್ಮ ಯಾತ್ರೆಗಳು ಮತ್ತು ಗಂಗಾವತಿಯಲ್ಲಿ ಶಾಖಾಮಠ ಆರಂಭವಾಗಿ 9 ವರ್ಷ ಪೂರೈಸಿರುವುದನ್ನು ಸ್ಮರಿಸಿದ ಅವರು, ಮಠದಿಂದ ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳು ನಡೆಯುತ್ತಿರುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಶಕುಂತಲಾ ರಾಜು ಅವರು, ಜಗದ್ಗುರು ಶ್ರೀ ವಿದುಶೇಖರ ಭಾರತೀ ಮಹಾಸ್ವಾಮಿಗಳವರ ಜೀವನ ಹಾಗೂ ಸಾಧನೆಗಳ ಕುರಿತು ಸುದೀರ್ಘವಾಗಿ ಬೆಳಕು ಚೆಲ್ಲಿದರು. ಇದರೊಂದಿಗೆ ಶ್ರೀ ಶಾರದಾ ಶಂಕರ ಭಕ್ತ ಮಂಡಳಿ ಹಾಗೂ ಭಜನಾ ಮಂಡಳಿಯ ನೇತೃತ್ವದಲ್ಲಿ ಭಜನೆ, ವಿಶೇಷ ಪೂಜೆ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ದೇವಸ್ಥಾನದ ಪ್ರಧಾನ ಅರ್ಚಕರು ಪೂಜಾವಿಧಿಗಳನ್ನು ನೆರವೇರಿಸಿಕೊಟ್ಟರು
ಈ ವರ್ಧಂತಿ ಉತ್ಸವದಲ್ಲಿ ಹಲವು ಪ್ರಮುಖರು ಭಾಗವಹಿಸಿ ಶ್ರೀಗಳ ಅನುಗ್ರಹ ಪಡೆದರು. ರಾಘವೇಂದ್ರ ಅಳವಂಡಿಕರ್, ಭೀಮಶಂಕರ್ ಹೊಸಳ್ಳಿ, ವೇಣುಗೋಪಾಲ, ನಾಗೇಶ್ ಭಟ್ ಅನಿಲ, ಮಠದ ತಾಲೂಕು ಸಂಚಾಲಕಿ ಗಾಯತ್ರಿ ಶ್ರೀಧರ್, ಪ್ರಕಾಶ್, ಜಗನ್ನಾಥ್ ಅಳವಂಡಿಕರ್ ಸೇರಿದಂತೆ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.