ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.
ಗಂಗಾವತಿ : ತಾಲೂಕಿನ ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿ ದೇವಾಲಯದ ಭಕ್ತರ ಕಾಣಿಕೆಯ ಹುಂಡಿಯನ್ನು ಮಂಗಳವಾರ ಎಣಿಕೆ ಮಾಡಲಾಗಿದ್ದು, ಕಳೆದ 46 ದಿನಗಳಲ್ಲಿ ಒಟ್ಟು 44,15,590 ರೂಪಾಯಿ ಸಂಗ್ರಹವಾಗಿದೆ.
ಜುಲೈ 07 ರಿಂದ ಆಗಸ್ಟ್ 18 ರವರೆಗಿನ ಅವಧಿಯಲ್ಲಿ ಹುಂಡಿಯಲ್ಲಿ ಸಂಗ್ರಹವಾಗಿದ್ದ ಕಾಣಿಕೆಯನ್ನು ಮಂಗಳವಾರ ಕಂದಾಯ, ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳ ನೇತೃತ್ವದಲ್ಲಿ ವೀಡಿಯೋ ರೆಕಾರ್ಡಿಂಗ್ನೊಂದಿಗೆ ಎಣಿಕೆ ಮಾಡಲಾಯಿತು.
ಈ ಬಾರಿಯ ಹುಂಡಿ ಎಣಿಕೆಯ ಸಂದರ್ಭದಲ್ಲಿ ಭಾರತೀಯ ಚಲಾವಣೆಯ ಜೊತೆಗೆ ನೇಪಾಳ, ಅಮೇರಿಕಾ, ಪನಾಮ ಮತ್ತು ನೆದರ್ಲ್ಯಾಂಡ್ಸ್ ದೇಶಗಳ ವಿದೇಶಿ ಕರೆನ್ಸಿಗಳು ಸಹ ಹುಂಡಿಯಲ್ಲಿ ಪತ್ತೆಯಾಗಿವೆ.
ಈ ಹುಂಡಿ ಎಣಿಕೆಯ ಸಂದರ್ಭದಲ್ಲಿ ಕಂದಾಯ ಇಲಾಖೆಯ ಶಿರಸ್ತೇದಾರರಾದ ಪ್ರಕಾಶ್ ನಾಯಕ, ಕೃಷ್ಣವೇಣಿ, ಕಂದಾಯ ನಿರೀಕ್ಷಕರಾದ ಮಂಜುನಾಥ ಹಿರೇಮಠ, ಮಹೇಶ ದಲಾಲ್, ಕಂದಾಯ ಮಂಜುನಾಥ್, ರಶ್ಮಿ, ನಾಗರತ್ನ, ಪ್ರಭುಸ್ವಾಮಿ, ಸುಧಾ, ಕವಿತಾ, ಗಾಯತ್ರಿ, ಸುಪ್ರಿಯ, ನವಾಜ್, ಯಶವಂತ, ಶರಣಪ್ಪ, ರಾಜೇಶ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ನವೀನ್ ಕುಮಾರ್, ಕಮಿಟಿ ಮ್ಯಾನೇಜರ್ ಮಡಿವಾಳ ವೆಂಕಟೇಶ ಹಾಗೂ ದೇವಸ್ಥಾನದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
