
ಮರ್ಚಡ್ ಡೇಸ್ ಸುದ್ದಿ|ಗಂಗಾವತಿ.
ಗಂಗಾವತಿ : ತಾಲ್ಲೂಕಿನ ಶ್ರೀರಾಮನಗರದ ಅಪ್ಪಸಾನಿ ಪರಿಮಳ ನಾರಾಯಣರಾವ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶನಿವಾರ ಅತ್ಯಂತ ಸಂಭ್ರಮ ಹಾಗೂ ವಿಭಿನ್ನವಾಗಿ ಆಚರಿಸಲಾಯಿತು. ‘ಭವಿಷ್ಯದ ಭಾರತ–2047’ ಎಂಬ ವಿಶೇಷ ಆಶಯವನ್ನು ಕೇಂದ್ರವಾಗಿರಿಸಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನಗಳನ್ನು ಸ್ಮರಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ಉತ್ತಮ ಭಾರತವನ್ನು ಕಟ್ಟುವ ಜವಾಬ್ದಾರಿಯ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕ ಶಾಲೀಮ್ ರಾಜು ಕರಟೂರಿ ಹಾಗೂ ಶಾಲೆಯ ಅಧ್ಯಕ್ಷ ಎಂ. ಸತ್ಯನಾರಾಯಣ ಅವರು ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ಸೇರಿದಂತೆ ಆಧುನಿಕ ತಂತ್ರಜ್ಞಾನವನ್ನು ದೇಶದ ಪ್ರಗತಿಗೆ ಬಳಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದ ವಿಶೇಷತೆಯಾಗಿ, ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣಗಳಲ್ಲಿ ಕಂಗೊಳಿಸಿದ ಮಕ್ಕಳು ಎಲ್ಲರ ಗಮನ ಸೆಳೆದರು. ಇದರೊಂದಿಗೆ ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿ ಮತ್ತು ಎಐ ತಂತ್ರಜ್ಞಾನದ ಆಧುನಿಕ ಭಾರತದ ಪರಿಕಲ್ಪನೆಯನ್ನು ಬಿಂಬಿಸುವ ವಿಶೇಷ ರಂಗೋಲಿ ಕಲಾಕೃತಿಯು ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು. ಬಡತನ, ಭ್ರಷ್ಟಾಚಾರ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಮುಕ್ತವಾದ ಸ್ವಾವಲಂಬಿ ರಾಷ್ಟ್ರ ನಿರ್ಮಾಣದ ಸಂಕಲ್ಪದೊಂದಿಗೆ ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಭಾರತಕ್ಕಾಗಿ ವಿಶೇಷ ಪ್ರತಿಜ್ಞಾವಿಧಿ ಬೋಧಿಸಿದರು.
ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಶಾರದಾ ವಿದ್ಯಾಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಣ ಪ್ರೇಮಿಗಳು, ಅಡಳಿತಾಧಿಕಾರಿ ರಘು ಗೊಡವರ್ತಿ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಿದರು. ಒಟ್ಟಾರೆ ‘ಇಂದಿನ ವಿದ್ಯಾರ್ಥಿಗಳೇ 2047ರ ಭಾರತದ ನಿರ್ಮಾತೃಗಳು’ ಎಂಬ ಪ್ರಬಲ ಸಂದೇಶದೊಂದಿಗೆ ಈ ಬಾರಿಯ ಸ್ವಾತಂತ್ರ್ಯೋತ್ಸವವು ಮಕ್ಕಳಲ್ಲಿ ದೇಶಪ್ರೇಮ ಹಾಗೂ ಭವಿಷ್ಯದ ಜವಾಬ್ದಾರಿಯ ಸಂಕಲ್ಪವನ್ನು ಮೂಡಿಸಿತು.