Home ಅಂಕಣ ಹಸಿರೇ ಉಸಿರು: ಶಿವಾನಂದ ಪೂಜಾರಿಯವರ ಮಾದರಿ ಹವ್ಯಾಸಿ ಕೈತೋಟ.
ಅಂಕಣಸುದ್ದಿ

ಹಸಿರೇ ಉಸಿರು: ಶಿವಾನಂದ ಪೂಜಾರಿಯವರ ಮಾದರಿ ಹವ್ಯಾಸಿ ಕೈತೋಟ.

Share
Share

ಮರ್ಚೆಡ್ ಡೇಸ್ ವಿಶೇಷ ಲೇಖನೆ:

ತರಕಾರಿಗಳು ನಮ್ಮ ದೈನಂದಿನ ಜೀವನದಲ್ಲಿ ಅತೀ ಮುಖ್ಯ ಸ್ಥಾನವನ್ನು ಪಡೆದಿವೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕ ಯುಕ್ತ ತರಕಾರಿಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವ ಈ ಕಾಲಘಟ್ಟದಲ್ಲಿ, ನಾವೇ ಸ್ವತಃ ಮನೆಯ ಹತ್ತಿರ ಕೈತೋಟ ಮಾಡಿ ತಾಜಾ ವಿಷಮುಕ್ತ ತರಕಾರಿಗಳನ್ನು ಬೆಳೆಯುವುದು ಅತ್ಯಗತ್ಯವಾಗಿದೆ. ಕೊಪ್ಪಳದ ಅಡವಿ ಆಂಜಿನೇಯ ದೇವಸ್ಥಾನದ ಹತ್ತಿರವಿರುವ ಬಾಲಕೃಷ್ಣ ಬಡಾವಣೆಯ ನಿವಾಸಿ ಶಿವಾನಂದ ಪೂಜಾರಿ ಅವರು ಈ ನಿಟ್ಟಿನಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಕೊಪ್ಪಳದಲ್ಲಿ ಕೃಷಿ ಪರಿಕರಗಳ ಮಾರಾಟ ಮಳಿಗೆಯಲ್ಲಿ ಕೆಲಸ ಮಾಡುತ್ತಿರುವ ಶಿವಾನಂದ ಪೂಜಾರಿ ಅವರು ಕೇವಲ ವೃತ್ತಿಗೆ ಮಾತ್ರ ಸೀಮಿತವಾಗದೆ, ಕೃಷಿಯ ಮೇಲಿನ ತಮ್ಮ ಕಾಳಜಿಯನ್ನು ವಿಸ್ತರಿಸಿದ್ದಾರೆ. ಪ್ರಸ್ತುತ ವರ್ಷದಲ್ಲಿ ತೀವ್ರ ಬರಗಾಲದ ಛಾಯೆ ಆವರಿಸಿದ್ದು, ಮಾರುಕಟ್ಟೆಯಲ್ಲಿ ತರಕಾರಿ ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಸಾಮಾನ್ಯ ಜನರಿಗೆ ಹೊರೆಯಾಗಿದೆ. ಈ ಆರ್ಥಿಕ ಹಾಗೂ ಪರಿಸರ ಬಿಕ್ಕಟ್ಟಿಗೆ ತಮ್ಮದೇ ಆದ ಸಣ್ಣ ಮಟ್ಟದ ಪರಿಹಾರವೆಂಬಂತೆ ಅವರು ಕೈತೋಟದ ಹಾದಿ ಹಿಡಿದಿದ್ದಾರೆ.

ತಮ್ಮ ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಳ್ಳುವ ಸದುದ್ದೇಶದಿಂದ, ಅವರು ಮನೆಯ ಆವರಣದಲ್ಲಿ ಕೇವಲ 10×10 ಅಳತೆಯ ಪುಟ್ಟ ಜಾಗದಲ್ಲಿ ಸುಂದರವಾದ ಕೈತೋಟವನ್ನು ನಿರ್ಮಿಸಿದ್ದಾರೆ. ಕೇವಲ ಒಂದು ತಿಂಗಳ ಹಿಂದಷ್ಟೇ ಆರಂಭವಾದ ಈ ಕೈತೋಟದಲ್ಲಿ ಮೆಂತೆ, ಪಾಲಕ, ಮೂಲಂಗಿ, ಹೂಕೋಸು, ಕೊತ್ತಂಬರಿ, ಟೊಮೆಟೊ, ಬದನೆ, ಚವಳಿ, ಬೀನ್ಸ್, ಉಳ್ಳಾಗಡ್ಡಿ ಹಾಗೂ ಮೆಣಸಿನ ಗಿಡಗಳನ್ನು ಸೊಂಪಾಗಿ ಬೆಳೆಯಲಾಗಿದೆ. ವಿಶೇಷವೆಂದರೆ, ಕೀಟಗಳ ಹಾವಳಿಯಿಂದ ತರಕಾರಿಗಳನ್ನು ರಕ್ಷಿಸಲು ತೋಟದ ಸುತ್ತಲೂ ಚೆಂಡು ಹೂವಿನ ಗಿಡಗಳನ್ನು ವ್ಯವಸ್ಥಿತವಾಗಿ ನೆಡಲಾಗಿದೆ.

ಈ ಕೈತೋಟದ ವಿಶೇಷತೆಯೆಂದರೆ, ಈಗಷ್ಟೇ ಒಂದು ತಿಂಗಳಾಗಿದ್ದರೂ ಮೆಂತೆ, ಕೊತ್ತಂಬರಿ ಮತ್ತು ಪಾಲಕ್ ಸೊಪ್ಪುಗಳು ಕಟಾವಿನ ಮೊದಲನೇ ಹಂತಕ್ಕೆ ಬಂದಿವೆ. ಕೃಷಿ ಪರಿಕರಗಳ ಮಾರಾಟದ ತಮ್ಮ ವೃತ್ತಿಪರ ಅನುಭವವನ್ನು ಬಳಸಿಕೊಂಡು, ಸೂರ್ಯನ ಬೆಳಕು ಚೆನ್ನಾಗಿ ಬೀಳುವ ಸ್ಥಳವನ್ನು ಆರಿಸಿ, ಮಣ್ಣನ್ನು ಹದಗೊಳಿಸಿ, ಕೊಟ್ಟಿಗೆ ಗೊಬ್ಬರವನ್ನು ಹಾಕಿ ಅವರು ಈ ಸಾಧನೆ ಮಾಡಿದ್ದಾರೆ. ಪ್ರತಿದಿನ ಮಿತವಾಗಿ ನೀರುಣಿಸುವ ಸರಳ ಹಾಗೂ ಸುಲಭದ ವಿಧಾನದಿಂದ ವರ್ಷವಿಡೀ ತಾಜಾ ತರಕಾರಿಗಳನ್ನು ಪಡೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಮನೆಯ ಬಳಿ ಅಥವಾ ಹಿತ್ತಲಿನಲ್ಲಿ ಈ ರೀತಿಯ ಕೈತೋಟಗಳನ್ನು ಮಾಡುವುದರಿಂದ ಮಾರುಕಟ್ಟೆಯ ರಾಸಾಯನಿಕ ವಿಷಮುಕ್ತ ತಾಜಾ ತರಕಾರಿಗಳು ನೇರವಾಗಿ ನಮ್ಮ ಅಡುಗೆಮನೆಗೆ ಸಿಗುತ್ತವೆ. ಇದರೊಂದಿಗೆ ನಿತ್ಯದ ಶ್ರಮದಿಂದ ಉತ್ತಮ ವ್ಯಾಯಾಮವಾಗಿ ಸಮಯದ ಸದುಪಯೋಗವಾಗುತ್ತದೆ ಹಾಗೂ ಮನೆಯ ಸುತ್ತಲೂ ಹಸಿರು ವಾತಾವರಣ ನಿರ್ಮಾಣಗೊಂಡು ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಶಿವಾನಂದ ಪೂಜಾರಿ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಾರೆ.

ಇವರ ಈ ಸಣ್ಣ ಪ್ರಯತ್ನವು ಹಳ್ಳಿಯಿಂದ ನಗರದವರೆಗೆ ಎಲ್ಲರಿಗೂ ಪ್ರೇರಣಾದಾಯಕವಾಗಿದೆ. ಸ್ವಾವಲಂಬನೆಯ ಹಾದಿಯಲ್ಲಿ ಹೆಜ್ಜೆ ಇಟ್ಟಿರುವ ಶಿವಾನಂದ ಪೂಜಾರಿಯವರ ಈ ಕೈತೋಟ ಇನ್ನಷ್ಟು ವಿಸ್ತಾರವಾಗಿ ಬೆಳೆಯಲಿ, ಅವರ ಆಶಯದಂತೆ ಎಲ್ಲರಿಗೂ ಆರೋಗ್ಯಕರ ಹಾಗೂ ವಿಷಮುಕ್ತ ತರಕಾರಿಗಳು ದೊರೆಯಲಿ ಎಂದು ಹಾರೈಸೋಣ.

* ಡಾ. ನರಸಿಂಹ ಗುಂಜಹಳ್ಳಿ

ಸಹಾಯಕ ಪ್ರಾಧ್ಯಾಪಕರು.

ಶ್ರೀ ಕೊಲ್ಲಿ ನಾಗೇಶ್ವರಾವ್ ಗಂಗಯ್ಯ ಪ್ರಥಮ ದರ್ಜೆ ಕಾಲೇಜು, ಗಂಗಾವತಿ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...