ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.
ಗಂಗಾವತಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ–ಸಿದ್ಧಾಂತಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಾತ್ರ ಶಿಕ್ಷಣದಿಂದ ಅಜ್ಞಾನ, ಅಂಧಕಾರ ಹಾಗೂ ಮೂಢನಂಬಿಕೆಗಳನ್ನು ತೊಡೆದುಹಾಕಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ನಟೇಶ್ ಅಭಿಪ್ರಾಯಪಟ್ಟಿದ್ದಾರೆ.
80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೊಪ್ಪಳ ಜಿಲ್ಲಾ ದಲಿತ ಸೇನೆ ವತಿಯಿಂದ ಶ್ರೀರಾಮನಗರದ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಬಡ ವಿದ್ಯಾರ್ಥಿಗಳಿಗೆ 300ಕ್ಕೂ ಅಧಿಕ ಜಾಮಿಟ್ರಿ ಬಾಕ್ಸ್ಗಳನ್ನು ವಿತರಿಸಿ ಅವರು ಚಾಲನೆ ನೀಡಿದರು.
ಖಾಸಗಿ ಶಾಲೆಗಳ ತೀವ್ರ ಪೈಪೋಟಿಯಿಂದ ಸರ್ಕಾರಿ ಶಾಲೆಗಳು ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ, ದಲಿತ ಸೇನೆಯ ಜಿಲ್ಲಾಧ್ಯಕ್ಷ ಉಡಚಪ್ಪ ನೇತೃತ್ವದಲ್ಲಿ ಕೈಗೊಂಡಿರುವ ಈ ಶೈಕ್ಷಣಿಕ ಅಭಿವೃದ್ಧಿ ಕಾರ್ಯ ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಬಿ. ನಟೇಶ್ ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀರಾಮನಗರ ಸೇರಿದಂತೆ ಹುಳ್ಕಿಹಾಳ, ಪ್ರಗತಿನಗರ, ಮರಳಿ, ವಿನೋಬನಗರ ಹಾಗೂ ಈಳಿಗನೂರು ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಶಿಕ್ಷಣದ ಮೇಲಿನ ಪ್ರೀತಿ ಹಾಗೂ ಸಾಮಾಜಿಕ ಕಳಕಳಿಯನ್ನು ಈ ಕಾರ್ಯಕ್ರಮ ಎತ್ತಿಹಿಡಿದಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ದಲಿತ ಸೇನೆ ಕೊಪ್ಪಳ ಜಿಲ್ಲಾ ಅಧ್ಯಕ್ಷ ಉಡಚಪ್ಪ, “ಶಿಕ್ಷಣವೇ ಶಸ್ತ್ರ, ಶಿಕ್ಷಣವೇ ಶಕ್ತಿ” ಎಂಬ ಅಂಬೇಡ್ಕರ್ ಅವರ ಆಶಯದಂತೆ ಸಮಾಜದ ಎಲ್ಲಾ ವರ್ಗದ, ವಿಶೇಷವಾಗಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಅಗತ್ಯ ಕಲಿಕಾ ಸಾಮಗ್ರಿಗಳನ್ನು ಒದಗಿಸುವ ಸೇವಾ ಕಾರ್ಯ ಮುಂದುವರಿಯಲಿದೆ ಎಂದರು. ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸುವುದು ಹಾಗೂ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶಿಕ್ಷಣ ಸಮಾನತೆ ಮತ್ತು ಸ್ವಾಭಿಮಾನದ ಸೌಧ ನಿರ್ಮಾಣಕ್ಕೆ ತಮ್ಮ ಸಂಘಟನೆ ನಿರಂತರವಾಗಿ ಶ್ರಮಿಸಲಿದೆ ಎಂದು ತಿಳಿಸಿದರು.
ಈ ಮಹತ್ವದ ಸಮಾರಂಭದಲ್ಲಿ ವಕೀಲ ವೀರೇಶ್, ಜಿಲ್ಲಾ ಉಪಾಧ್ಯಕ್ಷರಾದ ಹನುಮಂತಪ್ಪ ನಾಯಕ್, ಶಿವಕುಮಾರ್ ಡಿ., ಗೋಪಾಲ್ ವಕೀಲರು, ಗಂಗಾವತಿ ತಾಲೂಕು ಅಧ್ಯಕ್ಷ ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್ ಉಳೆನೂರ್ ಸೇರಿದಂತೆ ವೆಂಕೋಬ, ನರೇಶ್, ಗಣೇಶ್, ರಾಜು, ಶಿವು, ಶರಣಪ್ಪ, ಸುರೇಶ್, ಮಂಜುನಾಥ್, ಕೃಷ್ಣ ಮತ್ತು ಜಗದೀಶ್ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.
