Home ಶಿಕ್ಷಣ ಕ್ರೀಡಾ ಲೋಕದ ಕಾಯಕಯೋಗಿ: 25ಕ್ಕೂ ಹೆಚ್ಚು ಕ್ರೀಡೆಗಳಿಗೆ ಜೀವ ತುಂಬಿದ ವಿಜಯಪುರದ ಬಸವರಾಜ ಬಾಗೇವಾಡಿ.
ಶಿಕ್ಷಣಸುದ್ದಿ

ಕ್ರೀಡಾ ಲೋಕದ ಕಾಯಕಯೋಗಿ: 25ಕ್ಕೂ ಹೆಚ್ಚು ಕ್ರೀಡೆಗಳಿಗೆ ಜೀವ ತುಂಬಿದ ವಿಜಯಪುರದ ಬಸವರಾಜ ಬಾಗೇವಾಡಿ.

Share
Share
ಮರ್ಚೆಡ್ ಡೇಸ್ ವಿಶೇಷ ಲೇಖನೆ:

“ದೇಹವೇ ದೇಗುಲ, ಜೀವವೇ ದೇವರು; ದೈಹಿಕ ಶಿಕ್ಷಣವೇ ಆರೋಗ್ಯದ ಮೂಲ” ಎಂಬ ಧ್ಯೇಯವನ್ನು ಬದುಕಿನ ಮಂತ್ರವನ್ನಾಗಿಸಿಕೊಂಡಿರುವ ವಿಜಯಪುರ ತಾಲ್ಲೂಕಿನ ಉತ್ತನಾಳ ಗ್ರಾಮದ ಬಸವರಾಜ ನಂದಪ್ಪ ಬಾಗೇವಾಡಿ ಅವರು ಕ್ರೀಡಾ ಕ್ಷೇತ್ರದಲ್ಲಿ ಅಪರೂಪದ ಸಾಧನೆಯ ಹೆಜ್ಜೆಗುರುತು ಮೂಡಿಸಿದ್ದಾರೆ. ಕಳೆದ 32 ವರ್ಷಗಳಿಂದ ಕ್ರೀಡಾ ಲೋಕದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಅವರು, ಕೇವಲ ಕ್ರೀಡಾಪಟುವಾಗಿ ಮಾತ್ರವಲ್ಲದೆ ತರಬೇತಿದಾರ, ನಿರ್ಣಾಯಕ ಹಾಗೂ ಸಂಘಟಕರಾಗಿ ಸಾವಿರಾರು ಯುವ ಪ್ರತಿಭೆಗಳಿಗೆ ದಾರಿದೀಪವಾಗಿದ್ದಾರೆ. ದೇಶಿ-ವಿದೇಶಿ ಕ್ರೀಡೆಗಳನ್ನು ಗ್ರಾಮೀಣ ಭಾಗದ ಯುವಜನರಿಗೆ ಪರಿಚಯಿಸಿ, ಅವರ ಪ್ರತಿಭೆಗೆ ವೇದಿಕೆ ಕಲ್ಪಿಸುತ್ತಿರುವುದು ಬಾಗೇವಾಡಿಯವರ ಸೇವೆಯ ವಿಶೇಷತೆ.

ಯೋಗದಿಂದ ಹಿಡಿದು ಕರಾಟೆ, ವುಶು, ಟೇಕ್ವಾಂಡೋ, ಜೂಡೋ, ಕಿಕ್ ಬಾಕ್ಸಿಂಗ್, ಥಾಂಗ್-ತಾ, ಬಾಕ್ಸಿಂಗ್, ರೋಪ್ ಸ್ಕಿಪ್ಪಿಂಗ್, ಲಗೋರಿ, ಗಿಲ್ಲಿದಾಂಡ, ಸ್ಕೇಟಿಂಗ್, ಮಾಡರ್ನ್ ಪೆಂಟತ್ಲಾನ್, ಸೈಕಲ್ ಪೋಲೋ, ಗತಕಾ, ರೊಲಾಬಾಲ್, ದೊಣ್ಣೆ ವರಸೆ, ಲಾಠಿ, ನಾನ್ ಚಾಕು, ಏರೋ ಸ್ಕೇಟ್‌ಬಾಲ್, ರೋಲರ್ ಸ್ಕೇಟಿಂಗ್ ಹ್ಯಾಂಡ್‌ಬಾಲ್ ಹಾಗೂ ವಿವಿಧ ಕ್ರಿಕೆಟ್ ಪ್ರಕಾರಗಳವರೆಗೆ 25ಕ್ಕೂ ಹೆಚ್ಚು ಕ್ರೀಡೆಗಳಲ್ಲಿ ತರಬೇತಿ ನೀಡಿರುವುದು ಅವರ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿದೆ. ಒಂದೇ ಕ್ರೀಡೆಗೆ ಸೀಮಿತವಾಗದೆ ಹಲವು ಕ್ರೀಡೆಗಳನ್ನು ಯುವಕರಿಗೆ ತಲುಪಿಸುವ ಮೂಲಕ ಕ್ರೀಡಾ ಸಂಸ್ಕೃತಿಯ ವಿಸ್ತರಣೆಗೆ ಅವರು ಶ್ರಮಿಸಿದ್ದಾರೆ.

ಕ್ರೀಡಾಪಟುವಾಗಿಯೂ ಬಾಗೇವಾಡಿಯವರ ಸಾಧನೆ ಗಮನಾರ್ಹ. ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಗಳಿಸಿರುವ ಅವರು, ರಾಜ್ಯ ಮಟ್ಟದಲ್ಲಿ 6 ಬಾರಿ ದ್ವಿತೀಯ ಮತ್ತು 4 ಬಾರಿ ತೃತೀಯ ಸ್ಥಾನ ಪಡೆದಿದ್ದಾರೆ. ದಕ್ಷಿಣ ವಲಯದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ 10 ಬಾರಿ ಪ್ರಥಮ, 6 ಬಾರಿ ದ್ವಿತೀಯ ಹಾಗೂ 5 ಬಾರಿ ತೃತೀಯ ಸ್ಥಾನ ಗಳಿಸಿರುವುದು ಅವರ ಕ್ರೀಡಾ ಸಾಮರ್ಥ್ಯವನ್ನು ಸಾರುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಎರಡು ಬಾರಿ ಪ್ರಥಮ ಸ್ಥಾನ ಗಳಿಸಿ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಕ್ರೀಡಾಂಗಣದಲ್ಲಿ ಪದಕ ಗೆಲ್ಲುವುದರಲ್ಲೇ ಅವರ ಸಾಧನೆ ನಿಂತಿಲ್ಲ. ಕ್ರೀಡಾಪಟುಗಳನ್ನು ರೂಪಿಸುವ ತರಬೇತಿದಾರನಾಗಿ ಹಾಗೂ ಕ್ರೀಡಾ ಸ್ಪರ್ಧೆಗಳಿಗೆ ನಿಷ್ಪಕ್ಷಪಾತ ನಿರ್ಣಯ ನೀಡುವ  ಆಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಮಿನಿ ಒಲಿಂಪಿಕ್ಸ್, ದಸರಾ ಕ್ರೀಡಾಕೂಟ, ಸಿಎಂ ಕಪ್, ರಾಜ್ಯ ಒಲಿಂಪಿಕ್ಸ್, ಕರ್ನಾಟಕ ಕ್ರೀಡಾಕೂಟ, ಎಸ್‌ಜಿಎಫ್‌ಐ, ಖೇಲೋ ಇಂಡಿಯಾ ಸೇರಿದಂತೆ ರಾಜ್ಯ, ರಾಷ್ಟ್ರೀಯ ಹಾಗೂ ವಿಶ್ವವಿದ್ಯಾಲಯ ಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ರಾಜ್ಯಮಟ್ಟದಲ್ಲಿ 5 ಬಾರಿ, ದಕ್ಷಿಣ ವಲಯದಲ್ಲಿ 1 ಬಾರಿ, ರಾಷ್ಟ್ರೀಯ ಮಟ್ಟದಲ್ಲಿ 17 ಬಾರಿ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ 1 ಬಾರಿ ಅಧಿಕೃತ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿರುವುದು ಅವರ ಅನುಭವದ ಆಳವನ್ನು ತೋರಿಸುತ್ತದೆ.

ಕ್ರೀಡಾ ಕ್ಷೇತ್ರದಲ್ಲಿ ಸಂಘಟನಾ ಶಕ್ತಿಗೂ ಹೆಸರಾದ ಬಾಗೇವಾಡಿಯವರು ವಿಜಯಪುರ ಜಿಲ್ಲೆಯಲ್ಲಿ 25 ವಿವಿಧ ಕ್ರೀಡಾ ಸಂಸ್ಥೆಗಳನ್ನು ಹಾಗೂ ಕರ್ನಾಟಕ ರಾಜ್ಯದಲ್ಲಿ 22 ವಿವಿಧ ಕ್ರೀಡಾ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾ ಪರಿಷತ್ತುಗಳನ್ನು ಹುಟ್ಟುಹಾಕಿ, ಯುವ ಪ್ರತಿಭೆಗಳಿಗೆ ಸ್ಪರ್ಧೆಯ ವೇದಿಕೆ ನಿರ್ಮಿಸಿದ್ದಾರೆ. ಅವರ ನೇತೃತ್ವದಲ್ಲಿ 30 ಕ್ರೀಡಾ ತರಬೇತಿ ಶಿಬಿರಗಳು, 8 ಜಿಲ್ಲಾ ಮಟ್ಟದ, 12 ರಾಜ್ಯ ಮಟ್ಟದ, 1 ದಕ್ಷಿಣ ವಲಯ, 6 ರಾಷ್ಟ್ರೀಯ ಹಾಗೂ 2 ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳು ಯಶಸ್ವಿಯಾಗಿ ನಡೆದಿವೆ.

ವಿವಿಧ ಸಮರ ಕಲೆಗಳಲ್ಲಿ ಪರಿಣತಿ ಗಳಿಸಿರುವ ಅವರು ಕರಾಟೆ, ಟೇಕ್ವಾಂಡೋ, ಸ್ಕಾಯಿ, ಕಿಕ್ ಬಾಕ್ಸಿಂಗ್, ಥಾಂಗ್-ತಾ ಹಾಗೂ ಜೂಡೋದಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದಾರೆ. ಅವರ ದೀರ್ಘಕಾಲದ ಕ್ರೀಡಾ ಸೇವೆಯನ್ನು ಗುರುತಿಸಿ ವಿವಿಧ ಸಂಘ-ಸಂಸ್ಥೆಗಳು 5 ಜಿಲ್ಲಾ, 86 ರಾಜ್ಯ, 44 ರಾಷ್ಟ್ರೀಯ, 19 ಅಂತರರಾಷ್ಟ್ರೀಯ ಹಾಗೂ 15 ವಿಶೇಷ ಪ್ರಶಸ್ತಿಗಳು ಸೇರಿದಂತೆ 180ಕ್ಕೂ ಹೆಚ್ಚು ಗೌರವಗಳನ್ನು ನೀಡಿ ಸನ್ಮಾನಿಸಿವೆ. ಇಂಟರ್‌ನೆಟ್ ಗಿನ್ನಿಸ್ ಪ್ರಶಸ್ತಿಗಳೂ ಅವರ ಸಾಧನೆಯ ಪಟ್ಟಿಗೆ ಸೇರ್ಪಡೆಯಾಗಿವೆ.

ಬಾಗೇವಾಡಿಯವರ ಕ್ರೀಡಾ ಪಯಣಕ್ಕೆ ಮಾಧ್ಯಮಗಳೂ ಸಾಕ್ಷಿಯಾಗಿವೆ. 1993ರಿಂದ ಇಂದಿನವರೆಗೆ ಕನ್ನಡ, ಹಿಂದಿ, ಮರಾಠಿ, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳ 166 ದಿನಪತ್ರಿಕೆಗಳಲ್ಲಿ ಅವರ ಸಾಧನೆ ಮತ್ತು ಕ್ರೀಡಾ ಚಟುವಟಿಕೆಗಳು 3,354ಕ್ಕೂ ಹೆಚ್ಚು ಬಾರಿ ವರದಿಯಾಗಿವೆ. ವಿವಿಧ ದೂರದರ್ಶನ ವಾಹಿನಿಗಳಲ್ಲಿಯೂ 106 ಬಾರಿ ಅವರ ಕ್ರೀಡಾ ಚಟುವಟಿಕೆಗಳು ಪ್ರಸಾರಗೊಂಡಿವೆ. ಗ್ರಾಮೀಣ ಭಾಗದಿಂದ ಹೊರಹೊಮ್ಮಿದ ಒಬ್ಬ ಕ್ರೀಡಾ ಕಾರ್ಯಕರ್ತನ ಸಾಧನೆ ಇಷ್ಟೊಂದು ವ್ಯಾಪಕವಾಗಿ ದಾಖಲಾಗಿರುವುದು ಗಮನಾರ್ಹ.

ಮೂರು ದಶಕಗಳಿಗೂ ಹೆಚ್ಚು ಕಾಲ ಕ್ರೀಡೆಯನ್ನೇ ಕಾಯಕವನ್ನಾಗಿಸಿಕೊಂಡಿರುವ ಬಸವರಾಜ ನಂದಪ್ಪ ಬಾಗೇವಾಡಿಯವರ ಪಯಣವು ಪದಕಗಳಿಗಿಂತ ದೊಡ್ಡದು, ಪ್ರಶಸ್ತಿಗಳಿಗಿಂತ ಮಿಗಿಲಾದದ್ದು—ಅದು ಪ್ರತಿಭೆಗಳನ್ನು ರೂಪಿಸುವ ಪಯಣ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಾವಿರಾರು ಯುವಕರನ್ನು ಕ್ರೀಡಾಂಗಣದತ್ತ ಸೆಳೆದು, ಅವರಿಗೆ ತರಬೇತಿ ನೀಡಿ, ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ವೇದಿಕೆಗಳಿಗೆ ಕರೆದೊಯ್ಯುತ್ತಿರುವ ಅವರ ಸೇವೆ ವಿಜಯಪುರ ಜಿಲ್ಲೆ ಮಾತ್ರವಲ್ಲ, ಇಡೀ ಕರ್ನಾಟಕದ ಹೆಮ್ಮೆಯ ಸಂಗತಿ. ಕ್ರೀಡೆಯ ಮೂಲಕ ಆರೋಗ್ಯ, ಶಿಸ್ತು ಮತ್ತು ಆತ್ಮವಿಶ್ವಾಸ ಬೆಳೆಸುವ ಅವರ ಸಂದೇಶ ಮುಂದಿನ ಪೀಳಿಗೆಗೂ ಸ್ಫೂರ್ತಿಯಾಗಲಿ ಎಂಬುದೇ ಅವರ ಸಾಧನಾ ಪಯಣದ ನಿಜವಾದ ಅರ್ಥ.

ಲೇಖಕರು:

ತಾಯಪ್ಪ ಮರ್ಚೆಡ್.

ಪತ್ರಕರ್ತರು ಗಂಗಾವತಿ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...