ಮರ್ಚೆಡ್ ಡೇಸ್ ಸುದ್ದಿ|ಬಳ್ಳಾರಿ.
ಬಳ್ಳಾರಿ: ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಭರದಿಂದ ಸಾಗಿದ್ದು, ಮಂಗಳವಾರದ ಅಂತ್ಯಕ್ಕೆ ಒಟ್ಟು ಮತದಾರರ ಗಣತಿ ನಮೂನೆಗಳ ಪೈಕಿ ಶೇ.81.83ರಷ್ಟು ನಮೂನೆಗಳ ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಮತದಾರರ ಪಟ್ಟಿಯನ್ನು ಇನ್ನಷ್ಟು ನಿಖರ ಹಾಗೂ ದೋಷರಹಿತಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 12,29,586 ಮತದಾರರು ಇದ್ದು, ಜೂನ್ 30ರಿಂದ ಆಗಸ್ಟ್ 17ರವರೆಗೆ ಮನೆ-ಮನೆ ಸಮೀಕ್ಷೆ ಹಾಗೂ ಗಣತಿ ನಮೂನೆಗಳ ಡಿಜಿಟಲೀಕರಣ ಪ್ರಕ್ರಿಯೆ ನಡೆಯುತ್ತಿದೆ. ಮತದಾರರ ನೋಂದಣಿಗೆ ಸಂಬಂಧಿಸಿದ ಎಸ್ಐಆರ್ ನಮೂನೆಗಳನ್ನು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಮನೆ-ಮನೆಗೆ ತೆರಳಿ ಶೇ.100ರಷ್ಟು ವಿತರಿಸಿದ್ದಾರೆ. ಇದಲ್ಲದೆ, 4,606 ಮತದಾರರು ಆನ್ಲೈನ್ ಮೂಲಕ ಸ್ವತಃ ನಮೂನೆಗಳನ್ನು ಸಲ್ಲಿಸಿ ಪ್ರಕ್ರಿಯೆಗೆ ಸಹಕರಿಸಿದ್ದಾರೆ.
ಮನೆ-ಮನೆ ಸಮೀಕ್ಷೆ ವೇಳೆ ಜಿಲ್ಲೆಯಾದ್ಯಂತ ಒಟ್ಟು 2,23,418 ಮತದಾರರನ್ನು ವಿವಿಧ ವರ್ಗಗಳಲ್ಲಿ ಗುರುತಿಸಲಾಗಿದೆ. ಇವರಲ್ಲಿ 1,01,897 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 50,172 ಮಂದಿ ಗೈರುಹಾಜರಿ ಅಥವಾ ಲಭ್ಯವಿಲ್ಲದವರು, 41,126 ಮಂದಿ ಮೃತಪಟ್ಟವರು, 21,249 ಮಂದಿ ಈಗಾಗಲೇ ನೋಂದಣಿಯಾಗಿರುವ ಪುನರಾವರ್ತಿತ ಮತದಾರರು ಹಾಗೂ 8,974 ಮಂದಿಯನ್ನು ಇತರ ಕಾರಣಗಳಡಿ ಗುರುತಿಸಲಾಗಿದೆ. ಈ ಮಾಹಿತಿಯನ್ನು ಪರಿಶೀಲಿಸಿ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಕಾರ್ಯ ಮುಂದುವರಿದಿದೆ.
ಜಿಲ್ಲೆಯ 1,227 ಮತಗಟ್ಟೆಗಳ ವ್ಯಾಪ್ತಿಯಲ್ಲಿರುವ 12,29,586 ಮತದಾರರಿಗೆ ಎಸ್ಐಆರ್ ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, ಈವರೆಗೆ 10,06,168 ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಉಳಿದ ನಮೂನೆಗಳ ಡಿಜಿಟಲೀಕರಣ ಕಾರ್ಯವನ್ನು ನಿಗದಿತ ಗಡುವಿನೊಳಗೆ ಪೂರ್ಣಗೊಳಿಸಲು ಚುನಾವಣಾ ಸಿಬ್ಬಂದಿ ಹಾಗೂ ಬಿಎಲ್ಒಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ಎಸ್ಐಆರ್ ಪ್ರಕ್ರಿಯೆಯ ಮುಂದಿನ ಪ್ರಮುಖ ಹಂತವಾಗಿ ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ.
ಆಗಸ್ಟ್ 17ರೊಳಗೆ ಡಿಜಿಟಲೀಕರಣ ಸೇರಿದಂತೆ ಬಾಕಿ ಉಳಿದಿರುವ ಕಾರ್ಯಗಳನ್ನು ಪೂರ್ಣಗೊಳಿಸಿ, ಬಳಿಕ ಕರಡು ಪಟ್ಟಿಯನ್ನು ಸಾರ್ವಜನಿಕರ ಪರಿಶೀಲನೆಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಹೀಗಾಗಿ ಮತದಾರರು ತಮ್ಮ ಹೆಸರು, ವಿಳಾಸ ಹಾಗೂ ಇತರ ವಿವರಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ನಿಗದಿತ ಪ್ರಕ್ರಿಯೆಯಂತೆ ತಿದ್ದುಪಡಿ ಅಥವಾ ಆಕ್ಷೇಪಣೆ ಸಲ್ಲಿಸಲು ಅವಕಾಶ ದೊರೆಯಲಿದೆ.