
ಮರ್ಚೆಡ್ ಡೇಸ್ | ವಿಶೇಷ ವರದಿ: ಕನಕಪ್ಪ ಕನಕಗಿರಿ.
ವಿಜಯಪುರ : ಜಿಲ್ಲೆಯ ತಿಕೋಟಾ ತಾಲ್ಲೂಕಿನ ಶಾರದಾ ಪಿಯು ಕಾಲೇಜಿನಲ್ಲಿ ನಡೆದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯು ಗೊಂದಲಗಳ ಗೂಡಾಗಿ ಪರಿಣಮಿಸಿದ್ದು, ಪ್ರಶ್ನೆ ಪತ್ರಿಕೆ ಹಾಗೂ ಓಎಂಆರ್ (OMR) ಶೀಟ್ ವಿತರಣೆಯಲ್ಲಿ ಉಂಟಾದ ಎಡವಟ್ಟಿನಿಂದ ಆಕ್ರೋಶಗೊಂಡ ಅಭ್ಯರ್ಥಿಗಳು ಸ್ಥಳದಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದಾರೆ.
ಪರೀಕ್ಷೆ ವೇಳೆ ಅನೇಕ ಅಭ್ಯರ್ಥಿಗಳಿಗೆ ನೀಡಲಾದ ಓಎಂಆರ್ ಶೀಟ್ಗಳು ಮತ್ತು ಪ್ರಶ್ನೆ ಪತ್ರಿಕೆಗಳು ಒಂದಕ್ಕೊಂದು ತಾಳೆಯಾಗದೆ ಗಂಭೀರ ವ್ಯತ್ಯಾಸ ಕಂಡುಬಂದಿದೆ. ಇದರಿಂದ ಕಂಗಾಲಾದ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಲ್ಲೇ ಆತಂಕಕ್ಕೊಳಗಾಗಿದ್ದು, ಆಡಳಿತ ಮಂಡಳಿ ಹಾಗೂ ಅಧೀಕ್ಷಕರ ಬೇಜವಾಬ್ದಾರಿಯೇ ಈ ಪ್ರಮಾದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.
ದೂರದೂರುಗಳ ವಿವಿಧ ಜಿಲ್ಲೆಗಳು ಹಾಗೂ ತಾಲ್ಲೂಕುಗಳಿಂದ ಮುಂಜಾನೆಯೇ ಬಂದು ಪರೀಕ್ಷೆ ಬರೆಯಲು ಹಾಜರಾಗಿದ್ದ ನೂರಾರು ಯುವ ಅಭ್ಯರ್ಥಿಗಳಿಗೆ ಈ ಘಟನೆಯಿಂದ ತೀವ್ರ ಅನ್ಯಾಯವಾಗಿದ್ದು, ತಮ್ಮ ಭವಿಷ್ಯದೊಂದಿಗೆ ಚೆಲ್ಲಾಟವಾಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಕಣ್ಣೀರಿಟ್ಟಿದ್ದಾರೆ. ಸಮಯದ ನಷ್ಟ ಹಾಗೂ ಮಾನಸಿಕ ವೇದನೆಗೆ ಒಳಗಾಗಿರುವ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಎದುರು ಜಮಾಯಿಸಿ ಆಡಳಿತ ಮಂಡಳಿಯ ವಿರುದ್ಧ ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಈ ಕೂಡಲೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ನೇಮಕಾತಿ ಪ್ರಾಧಿಕಾರವು ಮಧ್ಯಪ್ರವೇಶಿಸಿ, ಘಟನೆಯ ಕುರಿತು ಸಮಗ್ರ ತನಿಖೆ ನಡೆಸಬೇಕು. ಯಾವುದೇ ನಿರ್ದೋಷಿ ಹಾಗೂ ಅರ್ಹ ಅಭ್ಯರ್ಥಿಗೆ ಅನ್ಯಾಯವಾಗದ ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಗೊಂದಲ ಗಂಭೀರವಾಗಿದ್ದರೆ ಕೂಡಲೇ ಮರುಪರೀಕ್ಷೆ ನಡೆಸುವ ಕುರಿತು ನ್ಯಾಯಸಮ್ಮತ ನಿರ್ಧಾರವನ್ನು ತುರ್ತಾಗಿ ಪ್ರಕಟಿಸಬೇಕು ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಈ ಗಂಭೀರ ಪ್ರಕರಣವನ್ನು ಗಣನೆಗೆ ತೆಗೆದುಕೊಂಡು, ಪರೀಕ್ಷಾ ವ್ಯವಸ್ಥೆಯ ಲೋಪದೋಷಗಳನ್ನು ಸರಿಪಡಿಸಿ ಪರೀಕ್ಷಾರ್ಥಿಗಳಿಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕಿದೆ.