ಮರ್ಚೆಡ್ ಡೇಸ್ ಸುದ್ದಿ|ಕೊಪ್ಪಳ.
ಕುಕುಂಪಾಳಿ: ಕುರಿ ಸಂತೆಯು ಕಲ್ಯಾಣ ಕರ್ನಾಟಕ ಭಾಗದಲ್ಲೇ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಪ್ರತಿ ಶುಕ್ರವಾರ ಜರುಗುವ ಈ ಸಂತೆಗೆ ಕುರಿ ಮತ್ತು ಮೇಕೆಗಳ ವ್ಯಾಪಾರಕ್ಕಾಗಿ ರಾಜ್ಯದ ನಾನಾ ಭಾಗಗಳಿಂದ ಖರೀದಿದಾರರು ಮತ್ತು ಕುರಿಸಾಕುಣಿಕೆ ಮಾಡುವ ರೈತರು ಹಾಗೂ ಕೂಲಿಕಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದರೆ, ಇಲ್ಲಿ ರೈತರ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಕಳ್ಳರ ಹಾವಳಿ ಮಿತಿಮೀರಿದ್ದು, ಕುರಿ ಮಾರಿದ ಹಣವನ್ನು ಕಳವು ಮಾಡಿರುವ ಘಟನೆ ಕಳೆದ ಶುಕ್ರವಾರ ಮರುಕಳಿಸಿದೆ.
ಈ ಭಾಗದಲ್ಲಿ ಸತತವಾಗಿ ಮಳೆಯಾಗದ ಕಾರಣ ಉಂಟಾಗಿರುವ ಆರ್ಥಿಕ ಮುಗ್ಗಟ್ಟು ಮತ್ತು ಸರಿಯಾದ ಕೆಲಸವಿಲ್ಲದ, ಪ್ರತಿವರ್ಷಕಿಂತ ಈ ವರ್ಷವೂ ಕಳ್ಳ-ಕಾಕರ ಹಾವಳಿ ಗಣನೀಯವಾಗಿ ಹೆಚ್ಚಾಗಿದೆ. ಇದು ಕುರಿಗಾಹಿಗಳ ಪಾಲಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಹಗಲಿನಲ್ಲೇ ನಿರ್ಲಕ್ಷ್ಯದ ಕ್ಷಣಗಳನ್ನು ನೋಡಿ ಕಳ್ಳರು ತಮ್ಮ ಕೈಚಳಕ ತೋರುತ್ತಿದ್ದಾರೆ. ವ್ಯವಸ್ಥಿತ ಮಾರುಕಟ್ಟೆ ಹಾಗೂ ಸೂಕ್ತ ಬೆಲೆ ಸಿಗದೆ ಕಷ್ಟಪಡುತ್ತಿರುವ ರೈತರಿಗೆ ಈ ಕಳ್ಳರ ಕಾಟ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸಂತೆಯಲ್ಲಿ ಸ್ಥಳಾವಕಾಶದ ಕೊರತೆ ಹಾಗೂ ಮೂಲಭೂತ ಸೌಲಭ್ಯಗಳಿಲ್ಲದ ಕಾರಣದಿಂದ ಜನಜಂಗುಳಿ ಅಧಿಕವಾಗಿರುತ್ತದೆ. ಇದೇ ಪರಿಸ್ಥಿತಿಯ ಲಾಭ ಪಡೆದುಕೊಳ್ಳುವ ಕಳ್ಳರು, ಕುರಿ ಮಾರಾಟ ಮಾಡುವವರ ಗಮನ ಬೇರೆಡೆ ಸೆಳೆದು ಹಣದ ಚೀಲ ದೋಚುವ ಕೃತ್ಯಗಳಲ್ಲಿ ನಿರತರಾಗಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ, ಕುರಿಗಾರರ ಬದುಕಿನ ಜೀವನಾಡಿಯಾಗಿರುವ ಈ ಸಂತೆ ಎಂದಿನಂತೆ ವಿಜೃಂಭಣೆಯಿಂದ ಕೂಡಿದ್ದು, ಪ್ರತಿವಾರವೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಾರೆ.
ಹೀಗೆ ಕುರಿ ಮಾರಿದ ಹಣವನ್ನು ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಸಂತೆದಲ್ಲಿದ್ದ ಎಚ್ಚರಗೊಂಡ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಸಮಯ್ಪಿತಿಯಿಂದ ಬೆನ್ನಟ್ಟಿ ಹಿಡಿದು, ಸರಿಯಾಗಿ ಧರ್ಮದೇಟು ನೀಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಹಣ ಕಳೆದುಕೊಂಡು ಕಂಗಾಲಾಗಿದ್ದ ರೈತನಿಗೆ ಸಾರ್ವಜನಿಕರ ಈ ಸಮಯೋಚಿತ ಸಹಾಯದಿಂದಾಗಿ ಸಮಾಧಾನ ತಂದಿದೆ.
ಇಲ್ಲಿ ಕಳ್ಳತನಕ್ಕಾಗಿಯೇ ವ್ಯವಸ್ಥಿತವಾಗಿ ಹಲವು ಗುಂಪುಗಳು ಸಂಚು ರೂಪಿಸಿ ಬರುತ್ತಿರುವ ಸಂಶಯ ವ್ಯಕ್ತವಾಗಿದೆ. ವಿಶೇಷವಾಗಿ, ಅಪರಾಧ ಕೃತ್ಯಗಳಿಗೆ ಚಿಕ್ಕ ಮಕ್ಕಳನ್ನು ಕೂಡ ಬಳಸಿಕೊಳ್ಳುತ್ತಿರುವ ನಿದರ್ಶನಗಳು ಹಿಂದೆ ಹಲವು ಬಾರಿ ಬೆಳಕಿಗೆ ಬಂದಿವೆ. ರೈತರ ಮತ್ತು ಕುರಿಗಾಹಿಗಳ ಹಿತದೃಷ್ಟಿಯಿಂದ, ಕುಕುಂಪಾಳಿ ಸಂತೆಯಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ಮಾರುಕಟ್ಟೆ ವ್ಯವಸ್ಥೆಯನ್ನು ವಿಸ್ತರಿಸಿ, ಸದಾ ಬಿಗಿಯಾದ ಪೊಲೀಸ್ ಭದ್ರತೆ ಒದಗಿಸಲು ವಿಶೇಷ ಕ್ರಮ ಕೈಗೊಳ್ಳುವ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ.