ಮರ್ಚೆಡ್ ಡೇಸ್ ಸುದ್ದಿ|ರಾಯಚೂರು.
ಸಿಂಧನೂರು: ನಗರದಲ್ಲಿ ಗುರುವಾರ ಬೆಳಗಿನ ಉಪಾಹಾರ ಸೇವಿಸಿ ಒಟ್ಟು 21 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ತಕ್ಷಣವೇ ನಗರದ ತಾಯಿ-ಮಕ್ಕಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಗರದ ಉದ್ಘಾಳ ರಸ್ತೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈ ಘಟನೆ ಸಂಭವಿಸಿದೆ. ಅಂದು ಬೆಳಿಗ್ಗೆ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ವೆಜಿಟೇಬಲ್ ಪಲಾವ್ ಉಪಹಾರ ತಯಾರಿಸಲಾಗಿತ್ತು. ಆದರೆ, ಸಿದ್ಧಪಡಿಸಲಾದ ಪಲಾವ್ನಲ್ಲಿ ಹುಳುಗಳು ಕಾಣಿಸಿಕೊಂಡಿವೆ ಎನ್ನಲಾಗಿದೆ.
ಉಪಹಾರ ತಯಾರಾದ ಬಳಿಕ ಕೆಲ ವಿದ್ಯಾರ್ಥಿಗಳು ಅದನ್ನು ಸೇವಿಸಿದರೆ, ಇನ್ನು ಕೆಲವರು ಉಪಹಾರ ಸೇವಿಸಿರಲಿಲ್ಲ. ಪಲಾವ್ ಸೇವಿಸಿದ ವಿದ್ಯಾರ್ಥಿಗಳಲ್ಲಿ ಕೆಲವರಿಗೆ ತಲೆ ಸುತ್ತು, ಹೊಟ್ಟೆ ನೋವು ಹಾಗೂ ವಾಂತಿ ಕಾಣಿಸಿಕೊಂಡು ಆರೋಗ್ಯ ಹದಗೆಟ್ಟಿದೆ.
ಕೂಡಲೇ ಎಚ್ಚೆತ್ತ ಶಾಲಾ ಸಿಬ್ಬಂದಿ ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ತಾಯಿ ಮಕ್ಕಳ ಆಸ್ಪತ್ರೆಗೆ ಸಾಗಿಸಿದ್ದಾರೆ. ಸದ್ಯ ತಾಯಿ ಮಕ್ಕಳ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಕಾವೇರಿ ಅವರ ನೇತೃತ್ವದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ಮುಂದುವರಿದಿದೆ.