
ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.
ಗಂಗಾವತಿ : ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಬರೆದಿರುವ ಗಂಭೀರ ಪತ್ರವೊಂದರಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರ ಕಾರ್ಯವೈಖರಿ ಹಾಗೂ ಕ್ಷೇತ್ರದ ನಿರ್ಲಕ್ಷ್ಯ ಧೋರಣೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿದೆ. ಚುನಾವಣಾ ಸಮಯದಲ್ಲಿ ನೀಡಿರುವ ಭರವಸೆಗಳು ಮೂರು ವರ್ಷ ಕಳೆದರೂ ಈಡೇರದೆ ಇರುವುದು ಮತ್ತು ಶಾಸಕರು ಸಾರ್ವಜನಿಕರಿಗೆ ಲಭ್ಯವಿಲ್ಲದಿರುವುದು ಈ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ.
ಚುನಾವಣಾ ಪ್ರಚಾರದ ವೇಳೆ ಅಂಜನಾದ್ರಿಗೆ ಐದು ಸಾವಿರ ಕೋಟಿ ರೂ. ಅನುದಾನ, ಡಬಲ್ ಬೆಡ್‌ರೂಮ್ ಮನೆಗಳ ನಿರ್ಮಾಣ, ಕೈಗಾರಿಕೆಗಳ ಸ್ಥಾಪನೆ ಮೂಲಕ ಉದ್ಯೋಗ ಸೃಷ್ಟಿ ಹಾಗೂ ಗಂಗಾವತಿಯನ್ನು ‘ಸಿಂಗಪುರ ಮತ್ತು ತಿರುಪತಿ’ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಮೂರು ವರ್ಷ ಕಳೆದರೂ ಒಂದೇ ಒಂದು ಭರವಸೆ ಈಡೇರಿಲ್ಲ. ಗಣಿ ದಣಿಯಾಗಿರುವ ಕಾರಣ ತಮ್ಮ ಸ್ವಂತ ಹಣದಿಂದ ಕ್ಷೇತ್ರ ಅಭಿವೃದ್ಧಿ ಮಾಡುತ್ತಾರೆಂಬ ಜನತೆಯ ನಂಬಿಕೆಗೆ ಇದರಿಂದ ತೀವ್ರ ಧಕ್ಕೆಯುಂಟಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಶಾಸಕರು ಕ್ಷೇತ್ರದಲ್ಲಿ ವಾಸ್ತವ್ಯ ಹೂಡುತ್ತಿಲ್ಲ, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಮೂರು ವರ್ಷಗಳಿಂದ ಯಾವುದೇ ಸಭೆಗಳನ್ನು ನಡೆಸಿಲ್ಲ ಮತ್ತು ಜನರ ಕೈಗೆ ಸಿಗುತ್ತಿಲ್ಲ. ಕೇವಲ ಕೆಲವು ಜಯಂತಿಗಳು, ಸಭೆ-ಸಮಾರಂಭಗಳು ಹಾಗೂ ಕಾಮಗಾರಿಗಳ ಭೂಮಿಪೂಜೆಗಳಿಗೆ ಮಾತ್ರ ಸೀಮಿತವಾಗಿರುವ ಅವರು, ಕಾರ್ಯಕ್ರಮ ಮುಗಿದ ಕೂಡಲೇ ಕ್ಷೇತ್ರ ಬಿಟ್ಟು ಹೊರಟು ಹೋಗುತ್ತಾರೆ. ಪ್ರಸ್ತುತ ಬರ ಪರಿಸ್ಥಿತಿ ಇದ್ದರೂ ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ತೋರುತ್ತಿರುವುದರಿಂದ ಜನರು ಬೇಸತ್ತಿದ್ದಾರೆ.
ಇದೇ ಪರಿಸ್ಥಿತಿ ಮುಂದುವರೆದರೆ ಮುಂಬರುವ ದಿನಗಳಲ್ಲಿ ಕ್ಷೇತ್ರದಲ್ಲಿ ಪಕ್ಷದ ಅಸ್ತಿತ್ವಕ್ಕೇ ಧಕ್ಕೆಯುಂಟಾಗಲಿದ್ದು, “ಎಲ್ಲ ಕಾಲಕ್ಕೂ ದುಡ್ಡು ಹಂಚಿ ಗೆಲ್ಲಬಹುದು ಎಂದು ಜನಪ್ರತಿನಿಧಿಗಳು ಭಾವಿಸಿದ್ದರೆ ಅದು ತಪ್ಪು, ಜನರು ಮೂರ್ಖರಲ್ಲ” ಎಂದು ಎಚ್ಚರಿಸಲಾಗಿದೆ. ಆದ್ದರಿಂದ ಶಾಸಕ ಜನಾರ್ಧನ ರೆಡ್ಡಿ ಅವರು ಕ್ಷೇತ್ರದಲ್ಲಿಯೇ ಇದ್ದು ಅಭಿವೃದ್ಧಿಗೆ ಒತ್ತು ನೀಡಬೇಕು, ಹಾಳಾಗಿರುವ ರಸ್ತೆಗಳನ್ನು ದುರಸ್ತಿಗೊಳಿಸಬೇಕು ಎಂದು ಸೂಚನೆ ನೀಡಬೇಕು. ಒಂದು ವೇಳೆ ಅವರನ್ನು ಸ್ಥಳೀಯವಾಗಿ ನಿಯಂತ್ರಿಸಲು ಸಾಧ್ಯವಾಗದಿದ್ದರೆ, ಕೂಡಲೇ ಹೈಕಮಾಂಡ್ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಲವಾಗಿ ಒತ್ತಾಯಿಸಲಾಗಿದೆ.