ಮರ್ಚೆಡ್ ಡೇಸ್ ಸುದ್ದಿ|ಕಲಬುರಗಿ.
ಕಲಬುರಗಿ: 12ನೇ ಶತಮಾನದ ವಚನ ಚಳುವಳಿ ಮತ್ತು ಸಮಾನತೆಯ ಕ್ರಾಂತಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಶ್ರೀ ಶರಣ ಹಡಪದ ಅಪ್ಪಣ್ಣ ಅವರು ಮೌಢ್ಯತೆಯನ್ನು ವಿರೋಧಿಸಿ ಕಾಯಕ ತತ್ವವನ್ನು ಸಾರಿದ್ದರು ಎಂದು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಅಭಿಪ್ರಾಯಪಟ್ಟಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದ ಶ್ರೀ ಶರಣ ಹಡಪದ ಅಪ್ಪಣ್ಣ ಅಧ್ಯಯನ ಪೀಠದ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಶರಣ ಹಡಪದ ಅಪ್ಪಣ್ಣ ಅವರ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಸವಣ್ಣನವರ ಆಪ್ತ ಸಹಾಯಕರಾಗಿದ್ದ ಹಡಪದ ಅಪ್ಪಣ್ಣನವರ ವಿಚಾರಗಳನ್ನು ಗುರುತಿಸಿ ಬಸವಣ್ಣನು ಅನುಭವ ಮಂಟಪದಲ್ಲಿ ಅವರಿಗೆ ಸಮಾನ ಸ್ಥಾನ ನೀಡಿದ್ದರು ಎಂದು ಪ್ರೊ. ಪೋತೆ ತಿಳಿಸಿದರು. ಯಾವುದೇ ವೃತ್ತಿ ಕೀಳಲ್ಲ ಹಾಗೂ ಶುದ್ಧ ಕಾಯಕ ಭಾವನೆ ಮುಖ್ಯ ಎಂದು ಸಾರಿದ ಶರಣರ ಪರಂಪರೆಯನ್ನು ಇಂದಿನ ಸಮಾಜ ಅರಿತುಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಇದೇ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ, ವಿದ್ಯಾರ್ಥಿಗಳ ಜೀವನ ಮತ್ತು ಸಾಧನೆಗೆ ಶರಣರ ಸಂದೇಶಗಳು ಸದಾ ಮಾರ್ಗದರ್ಶಿಯಾಗಿದ್ದು, ಅವರ ಸೇವಾ ನಿಷ್ಠೆ ಮತ್ತು ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಶ್ರೀ ಶರಣ ಹಡಪದ ಅಪ್ಪಣ್ಣ ಅಧ್ಯಯನ ಪೀಠದ ನಿರ್ದೇಶಕ ಡಾ. ಸುರೇಶ್ ಜಂಗೆ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಪ್ಪಣ್ಣ ಅವರ ವಚನಗಳ ಕುರಿತು ಈಗಾಗಲೇ ಮೂರು ಪುಸ್ತಕಗಳನ್ನು ಪ್ರಕಟಿಸಲಾಗಿದ್ದು, ಮುಂದಿನ ದಿನಗಳಲ್ಲಿ ವಚನಗಳನ್ನು ಕಲಾವಿದರಿಂದ ಹಾಡಿಸಿ ಧ್ವನಿಸುರುಳಿ ಹೊರತರುವ ಪ್ರಯತ್ನ ಮಾಡಲಾಗುವುದು ಎಂದರು. ಸಮಾರಂಭದಲ್ಲಿ ಕುಲಸಚಿವ ಪ್ರೊ. ರಮೇಶ್ ಲಂಡನಕರ್, ಮೌಲ್ಯಮಾಪನ ಕುಲಸಚಿವ ಡಾ. ಎನ್.ಜಿ. ಕಣ್ಣೂರು, ವಿತ್ತಾಧಿಕಾರಿ ಶ್ರೀಮತಿ ಜಯಾಂಬಿಕ, ಡಾ. ಸೂರ್ಯಕಾಂತ್ ಸುಜ್ಯಾತ ಸೇರಿದಂತೆ ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಪ್ರೊ. ಎಚ್.ಟಿ. ಪೋತೆ, ವಿದ್ಯಾರ್ಥಿಗಳು ಸಾಮಾನ್ಯ ಪದವಿ ಜೊತೆಗೆ ಶರಣರ ಸಂಸ್ಕೃತಿ, ಜೀವನ ಮತ್ತು ವಚನಗಳ ಕುರಿತು ಹೆಚ್ಚು ಅಧ್ಯಯನ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು. ಶರಣ ಸಾಹಿತ್ಯ, ಬೌದ್ಧ, ಸೂಫಿ ಮತ್ತು ಕನಕದಾಸರಂತಹ ದಾರ್ಶನಿಕರ ಅಧ್ಯಯನಕ್ಕೆ ಒತ್ತು ನೀಡಬೇಕು ಎಂದು ಅವರು, ವಿಜ್ಞಾನ ವಿದ್ಯಾರ್ಥಿಗಳು ಕೂಡ ವಚನ ಚಳುವಳಿ ಹಾಗೂ ಶರಣರ ಜೀವನವನ್ನು ವಿಶೇಷ ವಿಷಯವಾಗಿ ಅಧ್ಯಯನ ಮಾಡಲು ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಎಂದು ಆಶಿಸಿದರು. ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠಗಳ ಕುರಿತು ಚರ್ಚಿಸಲು ಸಲಹಾ ಸಮಿತಿ ರಚಿಸಿ, ಲೈವ್ ಕಾರ್ಯಕ್ರಮಗಳು ಮತ್ತು ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲು ಕರೆ ನೀಡಿದರು.