ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.
ಗಂಗಾವತಿ: ಸ್ಥಳೀಯ ನಗರದ ಪ್ರತಿಷ್ಠಿತ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯು ಅತ್ಯಂತ ಉತ್ಸಾಹ ಮತ್ತು ಸಡಗರದಿಂದ ಜರುಗಿತು. ವಿದ್ಯಾರ್ಥಿಗಳಲ್ಲಿ ಯೋಗಾಸನದ ಮಹತ್ವವನ್ನು ತಿಳಿಸಿಕೊಡುವ ಹಾಗೂ ಅವರ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಶಾಲೆಯ ಕಾರ್ಯದರ್ಶಿಗಳಾದ ಜಗನ್ನಾಥ ಆಲಂಪಲ್ಲಿ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಇಂದಿನ ಧಾವಂತದ ಬದುಕಿನಲ್ಲಿ ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಸನ ಅತ್ಯಾವಶ್ಯಕ ಎಂದರು. ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಪರಿವೀಕ್ಷಕರಾದ ಶ್ರೀಮತಿ ಸರಸ್ವತಿ ಜೋಡಿ, ತಾಲೂಕು ಅಧ್ಯಕ್ಷರಾದ ಯಂಕಪ್ಪ ತಳವಾರ್, ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಟ ಹಾಗೂ ಖಜಂಚಿ ಶಕುಂತಲಾ ಅವರು ಮುಖ್ಯ ಅತಿತಿಗಳಾಗಿ ಪಾಲ್ಗೊಂಡು ಸ್ಪರ್ಧಿಗಳಿಗೆ ಶುಭ ಹಾರೈಸಿದರು.
ಈ ವಿಶೇಷ ಕ್ರೀಡಾಕೂಟದಲ್ಲಿ ತಾಲೂಕಿನಾದ್ಯಂತ ಆಗಮಿಸಿದ ಅನೇಕ ವಿದ್ಯಾರ್ಥಿಗಳು ಅತ್ಯಂತ ಹುಮ್ಮಸ್ಸಿನಿಂದ ವಿವಿಧ ಯೋಗಾಸನ ಭಂಗಿಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದ ಯಶಸ್ಸಿಗೆ ದೈಹಿಕ ಶಿಕ್ಷಕರಾದ ಉಜ್ಜನಗೌಡ, ಸೋಮಶೇಖರ್ ಅಧಿಕಾರಿ, ಭಾನುಪ್ರಸಾದ್, ಶಂಕರ್, ಉಮಾದೇವಿ, ಛತ್ರಪ್ಪ, ಮಂಜುಳಾ, ವರಮಹಾಲಕ್ಷ್ಮಿ, ಮಹಾದೇವಿ ಹಾಗೂ ಅಜರುದ್ದೀನ್ ಸೇರಿದಂತೆ ಅನೇಕ ಶಿಕ್ಷಕರು ಸಕ್ರಿಯವಾಗಿ ಭಾಗವಹಿಸಿ, ಕಾರ್ಯಕ್ರಮದ ಅಚ್ಚುಕಟ್ಟು ನಿರ್ವಹಣೆಗೆ ಶ್ರಮಿಸಿದರು.
