ಮರ್ಚೆಡ್ ಡೇಸ್ ಸುದ್ದಿ|ಹಾಸನ.
ಹಾಸನ : ನಗರದ ಹೊರವಲಯದ ದೊಡ್ಡಪುರ ಗ್ರಾಮದ ಸಮೀಪ ಗುರುವಾರ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ, ಹಾಸನದಿಂದ ಕೊಪ್ಪಳ ಜಿಲ್ಲೆಗೆ ಬಿಯರ್ ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಬಿಯರ್ ಬಾಟಲಿಗಳು ರಸ್ತೆಪಾಲಾಗಿರುವ ವರದಿಯಾಗಿದೆ.
ಹಾಸನದ ವುಡ್ಪಿಕರ್ ಡಿಸ್ಟಿಲರೀಸ್ನಿಂದ ಸುಮಾರು 1,100 ಕೇಸ್ಗಳ ಬಿಯರ್ ಅನ್ನು ಕೊಪ್ಪಳ ಜಿಲ್ಲೆಗೆ ಲಾರಿಯಲ್ಲಿ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಹಿಂಬದಿಯ ಟಯರ್ ಸ್ಫೋಟಗೊಂಡಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಗೆ ಉರುಳಿ ಬಿದ್ದಿದೆ. ಅಪಘಾತದ ತೀವ್ರತೆಗೆ ಲಾರಿಯಲ್ಲಿದ್ದ ಸಾವಿರಾರು ಬಿಯರ್ ಬಾಟಲಿಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದು, ನೂರಾರು ಬಾಟಲಿಗಳು ಒಡೆದುಹೋಗಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಘಟನೆ ನಡೆದ ತಕ್ಷಣ ರಾತ್ರೋರಾತ್ರಿ ಸ್ಥಳದಲ್ಲಿ ಜಮಾಯಿಸಿದ ಕೆಲವರು, ರಸ್ತೆಯಲ್ಲಿ ಸುರಕ್ಷಿತವಾಗಿದ್ದ ಬಿಯರ್ ಬಾಟಲಿಗಳನ್ನು ತಮ್ಮೊಂದಿಗೆ ಹೊತ್ತೊಯ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಪಘಾತದ ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಹಾಸನ ಗ್ರಾಮಾಂತರ ಠಾಣೆ ಪೊಲೀಸರು, ಮುನ್ನೆಚ್ಚರಿಕಾ ಕ್ರಮವಾಗಿ ಕೆಲಕಾಲ ವಾಹನ ಸಂಚಾರವನ್ನು ನಿಯಂತ್ರಿಸಿ ಸುರಕ್ಷತಾ ಕ್ರಮ ಕೈಗೊಂಡರು.
ರಸ್ತೆಗೆ ಬಿದ್ದು ಸಚಾರಿಕ್ಕೆ ಅಡಚಣೆಯಾಗಿದ್ದ ಉಳಿದ ಬಿಯರ್ ಕೇಸ್ಗಳು ಹಾಗೂ ಅಪಘಾತಕ್ಕೀಡಾದ ಲಾರಿಯನ್ನು ಜೆಸಿಬಿ ಹಾಗೂ ಇತರೆ ವಾಹನಗಳ ನೆರವಿನಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಈ ಭೀಕರ ಅಪಘಾತದಿಂದ ಲಾರಿಗೆ ಹಾಗೂ ಬಿಯರ್ ಸಾಗಣೆಗೆ ಭಾರಿ ನಷ್ಟವುಂಟಾಗಿದ್ದು, ಈ ಕುರಿತು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಧಿಕೃತ ಪ್ರಕರಣ ದಾಖಲಾಗಿದೆ.