Home ಸುದ್ದಿ ಬಳ್ಳಾರಿ ವಿವಿ ಗೋಲ್ಡನ್ ಚಾನ್ಸ್ ಪರೀಕ್ಷಾ ಎಡವಟ್ಟು: ಒಂದೇ ದಿನ, ಒಂದೇ ಸಮಯದಲ್ಲಿ ಎರಡು ಸಬ್ಜೆಕ್ಟ್ ಪರೀಕ್ಷೆ ಬರೆಯಬೇಕಾದ ಸಂಕಷ್ಟದಲ್ಲಿ ವಿದ್ಯಾರ್ಥಿ!
ಸುದ್ದಿ

ಬಳ್ಳಾರಿ ವಿವಿ ಗೋಲ್ಡನ್ ಚಾನ್ಸ್ ಪರೀಕ್ಷಾ ಎಡವಟ್ಟು: ಒಂದೇ ದಿನ, ಒಂದೇ ಸಮಯದಲ್ಲಿ ಎರಡು ಸಬ್ಜೆಕ್ಟ್ ಪರೀಕ್ಷೆ ಬರೆಯಬೇಕಾದ ಸಂಕಷ್ಟದಲ್ಲಿ ವಿದ್ಯಾರ್ಥಿ!

Share
Share

 

ಮರ್ಚೆಡ್ ಡೇಸ್ ಸುದ್ದಿ|ಬಳ್ಳಾರಿ.

ಬಳ್ಳಾರಿ: ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಬರೋಬ್ಬರಿ ಹನ್ನೆರಡು ವರ್ಷಗಳ ಬಳಿಕ ಯುಜಿ ಗೋಲ್ಡನ್ ಚಾನ್ಸ್ ಪರೀಕ್ಷೆಯನ್ನು ಘೋಷಿಸಿರುವುದು ಹಳೆಯ ವಿದ್ಯಾರ್ಥಿಗಳಲ್ಲಿ ಮೂಡಿಸಿದ್ದ ಸಂತಸ ಈಗ ಆತಂಕಕ್ಕೆ ತಿರುಗಿದೆ. ವಿವಿಯ ವತಿಯಿಂದ ಇದೇ ತಿಂಗಳು 27 ರಿಂದ ಆರಂಭಗೊಂಡು ಮುಂದಿನ ತಿಂಗಳು ಆಗಸ್ಟ್ 8ರವರೆಗೆ ನಡೆಯಲಿರುವ ಪರೀಕ್ಷೆಗೆ ಸಂಬಂಧಿಸಿದಂತೆ ಅಂತಿಮ ವೇಳಾಪಟ್ಟಿ ಮತ್ತು ಹಾಲ್ ಟಿಕೆಟ್‌ನಲ್ಲಿ ದೊಡ್ಡ ಮಟ್ಟದ ಗೊಂದಲ ಬೆಳಕಿಗೆ ಬಂದಿದೆ.

ಗಂಗಾವತಿಯ ಶ್ರೀ ಕೊಲ್ಲಿ ನಾಗೇಶ್ವರ ಗಂಗಯ್ಯ ಪ್ರಥಮ ದರ್ಜಾ ಕಾಲೇಜಿನ ಬಿಬಿಎ ಹಳೆಯ ವಿದ್ಯಾರ್ಥಿ ಸಂತೋಷ್ ಕುಮಾರ್ ಟಿ. ಅವರ ಹಾಲ್ ಟಿಕೆಟ್‌ನಲ್ಲಿ ಭಾರೀ ದೊಡ್ಡ ತಪ್ಪಾಗಿದ್ದು, ಬಿಬಿಎ ಪ್ರಥಮ ಸೆಮಿಸ್ಟರ್‌ನ “38123 Quantitative Techniques for Managers” ಹಾಗೂ ಬಿಬಿಎ ಮೂರನೇ ಸೆಮಿಸ್ಟರ್‌ನ “1331 ಇ ಕ್ಯುಪಿ ಕೋಡ್ ಕನ್ನಡ” ವಿಷಯಗಳ ಪರೀಕ್ಷೆಯು ನಿಗದಿಯಾಗಿದೆ. ವಿಶೇಷವೆಂದರೆ ಈ ಎರಡು ವಿಭಿನ್ನ ಸೆಮಿಸ್ಟರ್‌ಗಳ ಪರೀಕ್ಷೆಗಳು ದಿನಾಂಕ 27-07-2026 ರಂದು ಒಂದೇ ದಿನ ಮತ್ತು ಒಂದೇ ಸಮಯದಲ್ಲಿ ಬಂದಿರುವುದರಿಂದ ವಿದ್ಯಾರ್ಥಿಯನ್ನು ಕಂಗಾಲಾಗಿಸಿದೆ.

ವೇಳಾಪಟ್ಟಿಯಲ್ಲಿ ಉಂಟಾದ ಈ ಗೊಂದಲವನ್ನು ಬೇಗನೆ ಬಗೆಹರಿಸಿಕೊಳ್ಳಲು ಮುಂದಾದ ವಿದ್ಯಾರ್ಥಿ ಸಂತೋಷ್ ಕುಮಾರ್ ಅವರು ವಿವಿಯ ಜವಾಬ್ದಾರಿಯುತ ಅಧಿಕಾರಿಗಳನ್ನು ಸಂಪರ್ಕಿಸಲು ಹೋದಾಗ ಅಲ್ಲಿ ಯಾರಿಗೂ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಹಾಲ್ ಟಿಕೆಟ್ ಬಂದ ನಂತರ ಈ ತೊಂದರೆ ಸರಿಹೋಗಬಹುದು ಎಂದುಕೊಂಡಿದ್ದ ವಿದ್ಯಾರ್ಥಿಗೆ ಕೊನೆಗೂ ನಿರಾಶೆಯೇ ಎದುರಾಗಿದ್ದು, ಮುದ್ರಿತವಾದ ಹಾಲ್ ಟಿಕೆಟ್‌ನಲ್ಲೂ ಅದೇ ದೋಷ ಮುಂದುವರಿದಿದೆ.

ವಿವಿಯ ಬೋರ್ಡ್ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೆ ಯಾರೂ ಫೋನ್ ಸ್ವೀಕರಿಸುತ್ತಿಲ್ಲ. ಇಷ್ಟು ದೊಡ್ಡ ಮಟ್ಟದ ಶೈಕ್ಷಣಿಕ ಪ್ರಕ್ರಿಯೆಗೆ ಕೈಹಾಕಿರುವ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ತುರ್ತು ಸಂದರ್ಭದಲ್ಲಿ ಸಂಪರ್ಕಿಸಲು ಯಾವುದೇ ಸಮರ್ಪಕ ಮಾಹಿತಿ ಅಥವಾ ಸಹಾಯವಾಣಿಯ ವ್ಯವಸ್ಥೆ ಇಲ್ಲದಿರುವುದು ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಕಮ್ಯುನಿಕೇಶನ್ ಗ್ಯಾಪ್‌ನಿಂದಾಗಿ ವಿದ್ಯಾರ್ಥಿಗಳು ಯಾರನ್ನು ಸಂಪರ್ಕಿಸಬೇಕು ಎಂಬುದು ಯಕ್ಷಪ್ರಶ್ನೆಯಾಗಿದೆ.

ಕಳೆದ 12 ವರ್ಷಗಳಿಂದ ಗೋಲ್ಡನ್ ಚಾನ್ಸ್ ಪರೀಕ್ಷೆಗಾಗಿ ಕಾಯುತ್ತಿದ್ದ ಸಾವಿರಾರು ವಿದ್ಯಾರ್ಥಿಗಳು ವಿವಿಯ ಈ ಧೋರಣೆಯಿಂದ ತೀವ್ರ ನಿರಾಶೆಗೊಂಡಿದ್ದಾರೆ. ವಿಶ್ವವಿದ್ಯಾಲಯವು ಒಂದು ವಿಷಯಕ್ಕೆ 6,000 ರೂ.ಗಳಂತೆ ಒಟ್ಟು ಒಬ್ಬ ವಿದ್ಯಾರ್ಥಿಯಿಂದ ಬರೋಬ್ಬರಿ 26,000 ರೂ.ಗಳಿಗೂ ಅಧಿಕ ಶುಲ್ಕವನ್ನು ವಸೂಲಿ ಮಾಡಿದೆ. ಹೀಗೆ ವಿದ್ಯಾರ್ಥಿಗಳಿಂದ ಸಾವಿರಾರು ರೂಪಾಯಿಗಳನ್ನು ಕಟ್ಟಿಸಿಕೊಂಡಿದ್ದರೂ ಸಹ, ಅದಕ್ಕೆ ತಕ್ಕನಾದ ವ್ಯವಸ್ಥಿತ ನಿರ್ವಹಣೆ ಮತ್ತು ಜವಾಬ್ದಾರಿ ವಿವಿಯ ಕಡೆಯಿಂದ ಕಂಡುಬಂದಿಲ್ಲ.

ಪರೀಕ್ಷೆ ಆರಂಭಗೊಳ್ಳಲು ಇನ್ನು ಕೇವಲ ಐದು ದಿನಗಳು ಮಾತ್ರ ಬಾಕಿ ಉಳಿದಿದ್ದು, ಕೂಡಲೇ ಸಂಬಂಧಪಟ್ಟ ವಿಶ್ವವಿದ್ಯಾಲಯದ ಅಧಿಕಾರಿಗಳು ಎಚ್ಚೆತ್ತುಕೊಂಡು ವಿದ್ಯಾರ್ಥಿ ಸಂತೋಷ್ ಕುಮಾರ್ ಅವರ ಹಾಲ್ ಟಿಕೆಟ್‌ನಲ್ಲಿರುವ ಟೈಮ್ ಟೇಬಲ್ ದೋಷವನ್ನು ಸರಿಪಡಿಸಿಕೊಡಬೇಕು. ಹನ್ನೆರಡು ವರ್ಷಗಳ ಬಳಿಕ ಕನಸು ಹೊತ್ತು ಪರೀಕ್ಷೆಗೆ ಸಿದ್ಧವಾಗಿರುವ ಎಲ್ಲ ಗೋಲ್ಡನ್ ಚಾನ್ಸ್ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಪರೀಕ್ಷೆ ಬರೆಯಲು ಸೂಕ್ತವಾದ ಅವಕಾಶವನ್ನು ಕಲ್ಪಿಸಿಕೊಡಬೇಕೆಂದು ಬಲವಾಗಿ ಆಗ್ರಹಿಸಲಾಗಿದೆ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...