ಮರ್ಚೆಡ್ ಡೇಸ್ ಸುದ್ದಿ.
ಕೊಪ್ಪಳ, ಜುಲೈ 18: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಕೃಷಿ ಪರಿಸರದಲ್ಲಿ ಪಕ್ಷಿಗಳ ಮಹತ್ವದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಜುಲೈ 22 ರಂದು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವು ಅಂದು ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ಕೊಪ್ಪಳ ತಾಲ್ಲೂಕು ಪಂಚಾಯತ್ ಆವರಣದಲ್ಲಿರುವ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಾನವಿಯಿಂದ ಆಗಮಿಸಲಿರುವ ಪರಿಸರ ಪ್ರೇಮಿ ಸಲ್ಲಾವುದ್ದೀನ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳಲಿದ್ದು, ಕೃಷಿಯಲ್ಲಿ ಪಕ್ಷಿಗಳ ಪಾತ್ರ, ಅವುಗಳ ಜೀವನ ಚಕ್ರ ಹಾಗೂ ಪಕ್ಷಿಗಳನ್ನು ಗುರುತಿಸುವ ಬಗೆಯ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ.
ಈ ತರಬೇತಿ ಕಾರ್ಯಕ್ರಮವು ಆಸಕ್ತ ರೈತರು ಮತ್ತು ಪರಿಸರ ಪ್ರೇಮಿಗಳಿಗೆ ಮುಕ್ತವಾಗಿದ್ದು, ಭಾಗವಹಿಸಲು ಬಯಸುವವರು ಭೀಮಾಂಭಿಕ ಅವರ ಮೊಬೈಲ್ ಸಂಖ್ಯೆ: 8073746859 ಮೂಲಕ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಬದರಿ ಪ್ರಸಾದ ಪಿ.ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.