
ಮರ್ಚೆಡ್ ಡೇಸ್ ಸುದ್ದಿ.
ಗಂಗಾವತಿ: ನಗರದ 27ನೇ ವಾರ್ಡ್ನ ಹೆಚ್.ಆರ್.ಎಸ್. ಕಾಲೋನಿಯಲ್ಲಿ ಸ್ನೇಹ ಸಂಸ್ಥೆ ಮತ್ತು ಅಜೀಮ್ ಪ್ರೇಮ್ಜಿ ಫೌಂಡೇಶನ್ ಸಹಯೋಗದಲ್ಲಿ ನೂತನ ‘ಕಿಶೋರಿ ಸಂಪನ್ಮೂಲ ಕೇಂದ್ರ’ದ ಉದ್ಘಾಟನೆ ಹಾಗೂ ವೃತ್ತಿ ತರಬೇತಿ ಪೂರೈಸಿದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಸಮಾರಂಭ ಗುರುವಾರ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಎಸಿಡಿಪಿಒ ಕೆ. ಪ್ರಸನ್ನ ಕುಮಾರ್ ಮಾತನಾಡಿ, “ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ವೃತ್ತಿಪರ ತರಬೇತಿಗಳು ಅತ್ಯಗತ್ಯ. ಸ್ನೇಹ ಸಂಸ್ಥೆಯು ಕಿಶೋರಿ ಸಂಪನ್ಮೂಲ ಕೇಂದ್ರದ ಮೂಲಕ ಮಹಿಳಾ ಸಬಲೀಕರಣಕ್ಕೆ ಮುಂದಾಗಿರುವುದು ಶ್ಲಾಘನೀಯ,” ಎಂದರು.
ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಂ. ಸರಸ್ವತಿ ಅವರು ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, “ಮಹಿಳೆಯರು ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗದೆ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಬೇಕು. ಉನ್ನತ ಶಿಕ್ಷಣದ ಜೊತೆಗೆ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು,” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ವೃತ್ತಿ ಕೌಶಲ್ಯ ತರಬೇತಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಗಣ್ಯರು ಪ್ರಮಾಣಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು. ತರಬೇತಿ ಪಡೆದ ಮಹಿಳೆಯರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಸ್ನೇಹ ಸಂಸ್ಥೆಯ ನಿರ್ದೇಶಕ ಡಿ. ರಾಮಾಂಜನೇಯ, ಶಿಕ್ಷಣ ಸಹಾಯಕ ಸಂಯೋಜಕಿ ಹೆಚ್.ಎಂ. ಪ್ರತಿಭಾ ಸೇರಿದಂತೆ ಗಣ್ಯರು, ತರಬೇತುದಾರರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.