Home ಸುದ್ದಿ ಗಂಗಾವತಿ ತಹಸೀಲ್ದಾರ್ ಕಚೇರಿಯ ‘ದಾದಿ’ ಇನ್ನು ನೆನಪು ಮಾತ್ರ: ನಿಸ್ವಾರ್ಥ ಸೇವೆಯ ಜೀವಂತಿಕೆ ಖಾಜಮ್ಮ. 
ಸುದ್ದಿ

ಗಂಗಾವತಿ ತಹಸೀಲ್ದಾರ್ ಕಚೇರಿಯ ‘ದಾದಿ’ ಇನ್ನು ನೆನಪು ಮಾತ್ರ: ನಿಸ್ವಾರ್ಥ ಸೇವೆಯ ಜೀವಂತಿಕೆ ಖಾಜಮ್ಮ. 

Share
Share

 

ಮರ್ಚೇಡ್ ಡೇಸ್ ಸುದ್ದಿ

ಗಂಗಾವತಿ:  ತಹಸೀಲ್ದಾರ್ ಕಚೇರಿ ಆವರಣಕ್ಕೆ ಬರುವ ಪ್ರತಿಯೊಬ್ಬರಿಗೂ ಸುಪರಿಚಿತವಾಗಿದ್ದ ಮುಖವೊಂದು ಈಗ ಮಾಯವಾಗಿದೆ. ಕಳೆದ ಎರಡು ದಶಕಗಳಿಂದ ಅಧಿಕೃತವಾಗಿ ಯಾವುದೇ  ಸಂಬಂಧವಿಲ್ಲದೆ,  ಸಹಾಯಕಿ ಪ್ರತಿಯೊಬ್ಬ ಸಿಬ್ಬಂದಿಗೆ, ಅಲ್ಲಿಗೆ ಬರುವ ರೈತರಿಗೆ ಹಾಗೂ ಸಾರ್ವಜನಿಕರಿಗೆ ‘ಕಾಜಮ್ಮ’ ಅಥವಾ ‘ದಾದಿ, ಎಂದೇ ಕರೆಯಲ್ಪಡುತ್ತಿದ್ದ ಸುಮಾರು 70 ವರ್ಷದ ವೃದ್ಧೆ ಅವಿಭಾಜ್ಯ ಅಂಗವಾಗಿದ್ದರು.

ನಿನ್ನೆ ಇದ್ದಕ್ಕಿದ್ದಂತೆ ಕುಸಿದು ಬಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯೇ ಅವರು ಇಹಲೋಕ ತ್ಯಜಿಸಿದ್ದು, ಕಚೇರಿಯ ಸಿಬ್ಬಂದಿ ಹಾಗೂ ಸಾರ್ವಜನಿಕರಲ್ಲಿ ತೀವ್ರ ಶೋಕವನ್ನು ಉಂಟುಮಾಡಿದೆ. ಇವರು ಗಂಗಾವತಿಯ ಗುಂಡಮ್ಮ ಕ್ಯಾಂಪಿನ ನಿವಾಸಿಯಾಗಿದ್ದರು.

ಯಜಮಾನರನ್ನು ಕಳೆದುಕೊಂಡು, ಮಕ್ಕಳಿದ್ದರೂ ಅವರಿಗೆ ಹೊರೆಯಾಗಬಾರದೆಂಬ ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡಿದ್ದ ಕಾಜಮ್ಮ, ತಹಸೀಲ್ದಾರ್ ಕಚೇರಿಯನ್ನೇ ತಮ್ಮ ಜೀವನದ ಕೇಂದ್ರವಾಗಿಸಿಕೊಂಡಿದ್ದರು. ಕಚೇರಿಯ ಸಿಬ್ಬಂದಿಗೆ ಚಹಾ, ನೀರು, ಟಿಫನ್, ಬಿಸ್ಕೆಟ್, ಇತ್ಯಾದಿ ತಂದುಕೊಡುವುದರಿಂದ ಹಿಡಿದು, ಸಣ್ಣಪುಟ್ಟ ಕೆಲಸಗಳಿಗೆ ಅಂಗಡಿಗೆ ಓಡಾಡಿಕೊಂಡು ಅವರು ತೋರುತ್ತಿದ್ದ ಉತ್ಸಾಹ ಸಣ್ಣ ಮಕ್ಕಳಿಗೂ ಮಾದರಿಯಾಗಿತ್ತು.

ಯಾವುದೇ ಬೇಸರವಿಲ್ಲದೆ, ನಗುಮುಖದಿಂದ ಅವರು ಮಾಡುತ್ತಿದ್ದ ಈ ನಿಸ್ವಾರ್ಥ ಸೇವೆಗೆ ಸಿಬ್ಬಂದಿ ನೀಡುತ್ತಿದ್ದ ಅಲ್ಪ ಸಂಭಾವನೆಯೇ ಅವರ ಬದುಕಿನ ಆಸರೆಯಾಗಿತ್ತು.

ತಮ್ಮ ಕಷ್ಟಗಳನ್ನು ಮರೆತು, ಕಚೇರಿಗೆ ಬರುವ ಜನರ ಸುಖ-ದುಃಖಗಳನ್ನು ವಿಚಾರಿಸುತ್ತಾ, ಅವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ಕಾಜಮ್ಮ, ಅಲ್ಲಿನ ವಾತಾವರಣವನ್ನೇ ಕುಟುಂಬದಂತೆ ಬದಲಾಯಿಸಿದ್ದರು. ಕಚೇರಿಯ ಮಹಿಳಾ ಸಿಬ್ಬಂದಿಗಳಿಗೆ ಅವರು ಅಚ್ಚುಮೆಚ್ಚಿನವರಾಗಿದ್ದರು. ಎಷ್ಟು ಬ್ಯುಸಿ ಇದ್ದರೂ, ಯಾರೇ ಕರೆದರೂ ಮುನಿಸಿಲ್ಲದೆ, ಮರುಮಾತನಾಡದೆ ಕೆಲಸಗಳನ್ನು ಪೂರೈಸಿ ಬರುವ ಅವರ ಚುರುಕುತನ, ಗಂಗಾವತಿ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಒಂದು ವಿಶೇಷ ಒಡನಾಟವನ್ನೇ ಸೃಷ್ಟಿಸಿತ್ತು.

ಇಂದು ಕಾಜಮ್ಮ ಕಚೇರಿಯಲ್ಲಿ ಇಲ್ಲದಿರುವುದು ಅಲ್ಲಿನ ಪ್ರತಿಯೊಬ್ಬರನ್ನು ತೀವ್ರವಾಗಿ ಕಾಡುತ್ತಿದೆ. ಆ ಗೇಟಿನ ಒಳಗೆ ಹೆಜ್ಜೆ ಇಡುತ್ತಿದ್ದಂತೆಯೇ ಇವರನ್ನು ಮಾತನಾಡಿಸದ ಹೊರತು ಯಾರಿಗೂ ದಿನ ಪೂರ್ಣಗೊಂಡ ಅನುಭವವಾಗುತ್ತಿರಲಿಲ್ಲ. ತಮ್ಮ ಸರಳ ಬದುಕಿನ ಮೂಲಕ ನೂರಾರು ಹೃದಯಗಳನ್ನು ಗೆದ್ದಿದ್ದ ಈ ದಾದಿ, ಇನ್ನು ಮುಂದೆ ಕೇವಲ ನೆನಪಾಗಿ ಉಳಿದಿದ್ದಾರೆ. “ಯಾರು ಶಾಶ್ವತವಲ್ಲ ಎಂಬ ಸತ್ಯ ತಿಳಿದಿದ್ದರೂ, ಕಾಜಮ್ಮನ ನಗುಮುಖದ ಅನುಪಸ್ಥಿತಿಯನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತಿದೆ” ಎಂದು ಸಿಬ್ಬಂದಿಗಳು ಕಣ್ಣೀರು ಹಾಕುತ್ತಿದ್ದಾರೆ.

ನಿಸ್ವಾರ್ಥ ಸೇವೆ ಮತ್ತು ಮನುಷ್ಯತ್ವದ ಪ್ರತೀಕವಾಗಿದ್ದ ಕಾಜಮ್ಮ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಗಂಗಾವತಿಯ ಸಾರ್ವಜನಿಕರು ಹಾಗೂ ತಹಸೀಲ್ದಾರ್ ಕಚೇರಿಯ ಸಿಬ್ಬಂದಿವರ್ಗ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಕಚೇರಿಯನ್ನೇ ತಮ್ಮ ಮನೆಯಾಗಿಸಿಕೊಂಡು  ಇಲ್ಲಿಯ ಸಿಬ್ಬಂದಿಗಳನ್ನು ತಮ್ಮ ಮನೆಯವರಂತೆ ಭಾವಿಸಿ ಅಳಿಸದ ಅವರ ಕಥೆ, ನಿಜಕ್ಕೂ ಒಂದು ಮಾನವೀಯತೆಯ ಖಾಜಮ್ಮ (ದಾದಿ) ಅವರ ನೆನಪುಗಳು ಗಂಗಾವತಿ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಬಹಳ ಕಾಲ ಅಚ್ಚಳಿಯದೆ ಉಳಿಯಲಿದೆ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...