
ಮರ್ಚೆಡ್ ಡೇಸ್ ಸುದ್ದಿ. (ಫಾಲೋ ಅಪ್)
ಗಂಗಾವತಿ: ನಗರದ ಹಿರೇಜಂತಕಲ್ ಬೈಪಾಸ್ ರಸ್ತೆಯ ಬಸ್ ಡಿಪೋ ಸಮೀಪದ ವಸತಿ ಪ್ರದೇಶದಲ್ಲಿ ಅಳವಡಿಸಲು ಉದ್ದೇಶಿಸಿದ್ದ ಮೊಬೈಲ್ ಟವರ್ ನಿರ್ಮಾಣ ಕಾರ್ಯಕ್ಕೆ ಇದೀಗ ತಾತ್ಕಾಲಿಕ ತಡೆ ಬಿದ್ದಿದೆ. ಜನವಸತಿ ಪ್ರದೇಶದಲ್ಲಿ ಟವರ್ ಸ್ಥಾಪನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳು ಮತ್ತು ಸುರಕ್ಷತಾ ದೃಷ್ಟಿಯಿಂದ ಸಾರ್ವಜನಿಕರು ನಡೆಸಿದ ನಿರಂತರ ಪ್ರತಿಭಟನೆ ಹಾಗೂ ದೂರಿಗೆ ಮಣಿದಿರುವ ನಗರಸಭೆ, ಟವರ್ ನಿರ್ಮಾಣ ಪರವಾನಗಿಯನ್ನು ತಕ್ಷಣವೇ ಸ್ಥಗಿತಗೊಳಿಸಿ ಆದೇಶ ಹೊರಡಿಸಿದರೆ.
ಸ್ಥಳೀಯ ನಿವಾಸಿಗಳು ಮತ್ತು ಕೆ. ಚಂದ್ರಶೇಖರ್ ಕುರುಗೋಡು ಅವರು ಈ ಸಂಬಂಧ ಗಂಗಾವತಿ ನಗರಸಭೆಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು. ವಸತಿ ಉದ್ದೇಶಕ್ಕಾಗಿ ಮೀಸಲಾದ ಜಾಗದಲ್ಲಿ ಟವರ್ ನಿರ್ಮಿಸುವುದರಿಂದ ವಿಕಿರಣ ಸಮಸ್ಯೆ, ಶಬ್ದ ಮಾಲಿನ್ಯ, ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳು ಹಾಗೂ ಸುರಕ್ಷತೆಯ ಬಗ್ಗೆ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಪೌರಾಯುಕ್ತರು, ತಾಂತ್ರಿಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಈ ಕ್ರಮ ಕೈಗೊಂಡಿದ್ದಾರೆ.
ನಗರಸಭೆಯ ಪೌರಾಯುಕ್ತರು ಇನ್-ಡಸ್ ಟವರ್ಸ್ ಲಿಮಿಟೆಡ್‌ಗೆ ನೋಟಿಸ್ ಜಾರಿ ಮಾಡಿದ್ದು, ಸಾರ್ವಜನಿಕರ ವಿರೋಧ ಮತ್ತು ಆಕ್ಷೇಪಣೆಗಳನ್ನು ಗಮನದಲ್ಲಿಟ್ಟುಕೊಂಡು ಟವರ್ ನಿರ್ಮಾಣ ಕಾರ್ಯವನ್ನು ಮುಂದಿನ ಆದೇಶದವರೆಗೆ ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ಅಲ್ಲದೆ, ಸ್ಥಳೀಯ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿ, ಅವರ ಒಪ್ಪಿಗೆ ಪಡೆದ ನಂತರವೇ ಮುಂದಿನ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಈ ನಿರ್ಧಾರವು ಸ್ಥಳೀಯ ನಿವಾಸಿಗಳಲ್ಲಿ ಸಂತಸವನ್ನುಂಟುಮಾಡಿದ್ದು, ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡಿದ ಆಡಳಿತ ಮಂಡಳಿಯ ಕ್ರಮವನ್ನು ಜನರು ಶ್ಲಾಘಿಸಿದ್ದಾರೆ. ಹಿರೇಜಂತಕಲ್ ಬೈಪಾಸ್ ರಸ್ತೆ ಭಾಗದ ನಿವಾಸಿಗಳ ಅಹವಾಲಿಗೆ ಸ್ಪಂದಿಸಿರುವ ನಗರಸಭೆಯು, ಇನ್-ಡಸ್ ಟವರ್ಸ್ ಸಂಸ್ಥೆಗೆ ಅಧಿಕೃತ ಸೂಚನೆ ನೀಡುವ ಮೂಲಕ ಟವರ್ ನಿರ್ಮಾಣದ ಸಂಕಷ್ಟವನ್ನು ಬಗೆಹರಿಸಿದೆ.