ಮರ್ಚೇಡ್ ಡೇಸ್ ಸುದ್ದಿ
ರಾಯಚೂರು: ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಬಾಲನ್ಯಾಯ ಕಾಯ್ದೆ-2015ರ ಸೆಕ್ಷನ್ (44)ರ ಅನ್ವಯ, ಪೋಷಕತ್ವ ಯೋಜನೆಯಡಿ ‘ಫಾಸ್ಟರ್ ಕೇರ್’ (Foster Care) ಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತಾಯ್ತಂದೆಯ ಪ್ರೀತಿಯಿಂದ ವಂಚಿತರಾದ ಅಥವಾ ತುರ್ತು ಅಗತ್ಯವುಳ್ಳ 0 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಸುಸ್ಥಿರ ಕೌಟುಂಬಿಕ ವಾತಾವರಣ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
‘ಫಾಸ್ಟರ್ ಕೇರ್’ ಎಂದರೆ ಜೈವಿಕ ಕುಟುಂಬದ ಹೊರತಾಗಿ, ಮಗುವಿನ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಿರುವ ಸುರಕ್ಷಿತ ಮತ್ತು ಪ್ರೀತಿಯುಳ್ಳ ಪರ್ಯಾಯ ಕೌಟುಂಬಿಕ ವ್ಯವಸ್ಥೆಯನ್ನು ಒದಗಿಸುವುದಾಗಿದೆ. ಈ ಯೋಜನೆಯಡಿ ಮಕ್ಕಳ ಕಲ್ಯಾಣ ಸಮಿತಿಯು ಅರ್ಹ ಕುಟುಂಬಗಳನ್ನು ಆಯ್ಕೆ ಮಾಡುತ್ತದೆ. ಆಯ್ಕೆಯಾದ ಕುಟುಂಬಗಳಲ್ಲಿ ಮಕ್ಕಳನ್ನು ತಾತ್ಕಾಲಿಕವಾಗಿ ಅಥವಾ ವಿಸ್ತೃತ ಅವಧಿಗೆ ಬೆಳೆಸುವ ಅವಕಾಶವಿದ್ದು, ಇಡೀ ಪ್ರಕ್ರಿಯೆಯು ಮಕ್ಕಳ ರಕ್ಷಣಾ ಘಟಕದ ಮೇಲ್ವಿಚಾರಣೆಯಲ್ಲಿ ನಡೆಯಲಿದೆ.
ಜಿಲ್ಲೆಯಲ್ಲಿರುವ ನಿಃಸಂತಾನ ದಂಪತಿಗಳು, ಏಕ ಪೋಷಕ ಕುಟುಂಬಸ್ಥರು ಹಾಗೂ ಮಕ್ಕಳಿಗೆ ಪೋಷಣೆ ಮತ್ತು ರಕ್ಷಣೆ ನೀಡಲು ಆಸಕ್ತಿ ಇರುವ ಸಮಾಜಮುಖಿ ವ್ಯಕ್ತಿಗಳು ಈ ಯೋಜನೆಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಅರ್ಹತೆ ಪಡೆದ ಕುಟುಂಬಗಳಿಗೆ ಮಗುವಿನ ಪಾಲನೆ ಮಾಡುವ ಅವಕಾಶ ಸಿಗಲಿದ್ದು, ಇದು ಸಮಾಜದಲ್ಲಿ ಅನಾಥವಾಗಿರುವ ಮಕ್ಕಳಿಗೆ ಭದ್ರ ಬುನಾದಿ ಹಾಕಿಕೊಡಲು ಸಹಕಾರಿಯಾಗಲಿದೆ.
ಆಸಕ್ತರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮನೆ ಸಂಖ್ಯೆ: 1-9-138, ಪಶ್ಚಿಮ ಪೊಲೀಸ್ ಠಾಣೆ ಹಿಂದೆ, ಮಾರಮ್ಮಗುಡಿ ಎದುರುಗಡೆ, ಗೋಲ್ ಮಾರ್ಕೆಟ್, ಆಜಾದ್ ನಗರ, ರಾಯಚೂರು-584101 ವಿಳಾಸಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08532-226226 ಅಥವಾ 8618362385, 9731603295, 8660627793ಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.