ಮರ್ಚೆಡ್ ಡೇಸ್ ಸುದ್ದಿ.
ಗಂಗಾವತಿ: ಅಪರಾಧಿಗಳಿಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸುವುದು ಸಾಮಾನ್ಯ. ಆದರೆ, ಗಾಂಜಾ ಸೇವನೆಯ ಪ್ರಕರಣವೊಂದರಲ್ಲಿ ಗಂಗಾವತಿಯ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ನಾಗೇಶ ಪಾಟೀಲ್ ಅವರು ವಿಧಿಸಿರುವ ಶಿಕ್ಷೆ ಇದೀಗ ಎಲ್ಲರ ಗಮನ ಸೆಳೆದಿದೆ. ಗಾಂಜಾ ಸೇವಿಸಿ ಸಿಕ್ಕಿಬಿದ್ದ ಯುವಕನೊಬ್ಬನಿಗೆ ದಂಡದ ಜೊತೆಗೆ, ಸರ್ಕಾರಿ ಶಾಲೆ-ಕಾಲೇಜುಗಳಿಗೆ ತೆರಳಿ ಗಾಂಜಾ ಸೇವನೆಯ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ವಿಶಿಷ್ಟ ಆದೇಶವನ್ನು ನೀಡಲಾಗಿದೆ.
ಈ ಘಟನೆಯ ಹಿನ್ನೆಲೆಗೆ ಹೋಗುವುದಾದರೆ, 2024ರ ನವೆಂಬರ್ 26ರಂದು ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಕಡೇಬಾಗಿಲು ಗ್ರಾಮದಲ್ಲಿ ಗಾಂಜಾ ಸೇವಿಸುತ್ತಿದ್ದ ಸಾಯಿನಗರದ ಅಮರೇಶ ಶೇಖರಪ್ಪ ರಾಮಸಾಗರ ಎಂಬಾತನನ್ನು ವಶಕ್ಕೆ ಪಡೆದಿದ್ದರು. ಈ ಸಂಬಂಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಯುವಕನಿಗೆ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಕೇವಲ ದಂಡಕ್ಕೆ ಸೀಮಿತವಾಗದ ನ್ಯಾಯಾಧೀಶ ನಾಗೇಶ ಪಾಟೀಲ್ ಅವರು, ಸಾಮಾಜಿಕ ಜವಾಬ್ದಾರಿಯನ್ನು ಹೊರಿಸುವ ನಿಟ್ಟಿನಲ್ಲಿ ಯುವಕನಿಗೆ ವಿಶೇಷ ಷರತ್ತನ್ನು ವಿಧಿಸಿದರು. ಅದರಂತೆ, ಜುಲೈ 9ರಂದು ನಗರದ ವಿವಿಧ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಿಗೆ ತೆರಳಿ ಗಾಂಜಾ ಸೇವನೆಯಿಂದ ಆರೋಗ್ಯ ಮತ್ತು ಮೆದುಳಿನ ಮೇಲೆ ಉಂಟಾಗುವ ಗಂಭೀರ ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ವಿವರಿಸುವಂತೆ ಆದೇಶಿಸಲಾಗಿದೆ.
ನ್ಯಾಯಾಲಯದ ಈ ಆದೇಶವು ಕೇವಲ ಶಿಕ್ಷೆಯಾಗಿರದೆ, ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ರವಾನಿಸಿದೆ. ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದಂತೆ ತಡೆಯಲು ಮತ್ತು ಗಾಂಜಾ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಯುವಜನತೆಯಲ್ಲಿ ಜಾಗೃತಿ ಮೂಡಿಸಲು ಈ ಕ್ರಮ ವಹಿಸಲಾಗಿದೆ. ಈ ಕಾರ್ಯಕ್ಕಾಗಿ ಯುವಕ ಯಾವುದೇ ಸಂಭಾವನೆಯನ್ನು ಪಡೆಯುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ತಿಳಿಸಿದೆ.
ನ್ಯಾಯಾಧೀಶರ ಆದೇಶವನ್ನು ಪಾಲಿಸಿದ ಆರೋಪಿ ಯುವಕ, ಪೊಲೀಸ್ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ನಗರದ ಸರ್ಕಾರಿ ಜೂನಿಯರ್ ಕಾಲೇಜು ಹಾಗೂ ಬಾಲಕಿಯರ ಪದವಿಪೂರ್ವ ಕಾಲೇಜು ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿದ್ದಾನೆ. ಅಲ್ಲಿ ವಿದ್ಯಾರ್ಥಿಗಳ ಎದುರು ಗಾಂಜಾ ಸೇವನೆಯಿಂದ ಜೀವನ ಹೇಗೆ ಹಾಳಾಗುತ್ತದೆ ಎಂಬುದನ್ನು ಸ್ವತಃ ವಿವರಿಸಿ, ಜಾಗೃತಿ ಮೂಡಿಸುವ ಮೂಲಕ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಪೂರೈಸಿದ್ದಾನೆ.