Home ಸುದ್ದಿ ವಿಜಯನಗರ ಕಾಲುವೆ ನೀರಾವರಿ ಸಂಕಷ್ಟ: ಶಾಶ್ವತ ಪರಿಹಾರಕ್ಕೆ ರೈತರ ಆಗ್ರಹ, 3 ದಿನಗಳಲ್ಲಿ ಕ್ರಮದ ಭರವಸೆ.
ಸುದ್ದಿ

ವಿಜಯನಗರ ಕಾಲುವೆ ನೀರಾವರಿ ಸಂಕಷ್ಟ: ಶಾಶ್ವತ ಪರಿಹಾರಕ್ಕೆ ರೈತರ ಆಗ್ರಹ, 3 ದಿನಗಳಲ್ಲಿ ಕ್ರಮದ ಭರವಸೆ.

Share
Share

 

ಮರ್ಚೆಡ್ ಡೇಸ್ ಸುದ್ದಿ.

ಗಂಗಾವತಿ :ತಾಲೂಕಿನ ಸಾಣಾಪುರ ಗ್ರಾಮದ ಪರಿವೀಕ್ಷಣ ಮಂದಿರದಲ್ಲಿ ವಿಜಯನಗರ ಕಾಲುವೆ ನೀರಾವರಿ ಸಮಸ್ಯೆ ಕುರಿತಂತೆ ರೈತರ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಕಾಡಾ ಅಧ್ಯಕ್ಷ ಹಸನ್ ಸಾಬ್ ದೋಟಿಹಾಳ್, ಮಾಜಿ ವಿಧಾನ ಪರಿಷತ್ ಸದಸ್ಯ ಎಚ್.ಆರ್. ಶ್ರೀನಾಥ್, ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಕಾಲುವೆ ವ್ಯಾಪ್ತಿಯ 15 ಗ್ರಾಮಗಳ ರೈತರು ಭಾಗವಹಿಸಿದ್ದರು. ಸುಮಾರು 600 ವರ್ಷಗಳ ಇತಿಹಾಸ ಹೊಂದಿರುವ ವಿಜಯನಗರ ಕಾಲುವೆಯನ್ನೇ ನಂಬಿ ಬದುಕುತ್ತಿರುವ ರೈತರು, ಇಂದು ತೀವ್ರ ನೀರಿನ ಕೊರತೆಯಿಂದ ಸಂಕಷ್ಟದಲ್ಲಿದ್ದು, ಕೂಡಲೇ ಅಣೆಕಟ್ಟು ದುರಸ್ತಿ ಮಾಡಿ ನೀರು ಹರಿಸುವ ವ್ಯವಸ್ಥೆ ಕಲ್ಪಿಸಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದರು.

ಸಭೆಯ ಮಧ್ಯೆ ರೈತರು ಮತ್ತು ನೀರಾವರಿ ಅಧಿಕಾರಿಗಳ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಸಮಸ್ಯೆಗೆ ಕೇವಲ ತಾತ್ಕಾಲಿಕ ಪರಿಹಾರವಲ್ಲ, ಬದಲಾಗಿ ಶಾಶ್ವತ ಪರಿಹಾರ ಬೇಕೆಂದು ರೈತರು ಪಟ್ಟು ಹಿಡಿದರು. ಈ ಕುರಿತು ಪ್ರತಿಕ್ರಿಯಿಸಿದ ಕಾಡಾ ಅಧ್ಯಕ್ಷ ಹಸನ್ ಸಾಬ್ ದೋಟಿಹಾಳ್, ರೈತರು ಇದುವರೆಗೆ ಈ ವಿಷಯವನ್ನು ತಮ್ಮ ಗಮನಕ್ಕೆ ತಂದಿರಲಿಲ್ಲ ಎಂದು ತಿಳಿಸಿದರು. ಇದೀಗ ರೈತರು ಪ್ರಸ್ತಾಪಿಸಿರುವ ಎಲ್ಲಾ ಸಮಸ್ಯೆಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದ ಅವರು, ಜಲ ಸಂಪನ್ಮೂಲ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತಕ್ಷಣವೇ ಚರ್ಚಿಸಿ, ಮುಂದಿನ ಮೂರು ದಿನಗಳೊಳಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಮಾಜಿ ವಿಧಾನ ಪರಿಷತ್ ಸದಸ್ಯ ಎಚ್.ಆರ್. ಶ್ರೀನಾಥ್ ಮಾತನಾಡಿ, ಹಂಪಿ ಪ್ರಾಧಿಕಾರವು ಈ ಭಾಗದ 14 ಗ್ರಾಮಗಳ ರೈತರಿಗೆ ಶಾಪವಾಗಿ ಪರಿಣಮಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮನೆ ಕಟ್ಟಿಕೊಳ್ಳಲು ಕೂಡ ಪ್ರಾಧಿಕಾರದ ಅನುಮತಿ ಪಡೆಯಬೇಕಾದ ಅನಿವಾರ್ಯತೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಸಮಸ್ಯೆ ನಿವಾರಣೆಗೆ ಸರ್ಕಾರ ‘ಕಿಷ್ಕಿಂದಾ ಅಂಜನಾದ್ರಿ ಪ್ರಾಧಿಕಾರ’ವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ನೀರಾವರಿ ಸಚಿವ ರಾಮಲಿಂಗಾರೆಡ್ಡಿ ಅವರು ಈ ವಿಷಯದಲ್ಲಿ ವಿಶೇಷ ಗಮನಹರಿಸಿ, ಈ ಭಾಗದ ಜನರಿಗೆ ಶಾಶ್ವತ ಪರಿಹಾರ ಒದಗಿಸಿಕೊಡಬೇಕೆಂದು ಅವರು ಮನವಿ ಮಾಡಿದರು.

ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರೈತರು, ನೀರಾವರಿ ಸಮಸ್ಯೆಯಿಂದ ಕೃಷಿ ಸಂಪೂರ್ಣವಾಗಿ ನೆಲಕಚ್ಚಿದ್ದು, ತಮ್ಮ ಬದುಕು ಅತಂತ್ರವಾಗಿದೆ ಎಂದು ಅಳಲು ತೋಡಿಕೊಂಡರು. ಅಧಿಕಾರಿಗಳು ಮತ್ತು ಸರ್ಕಾರ ಕೇವಲ ಭರವಸೆಗಳನ್ನು ನೀಡದೆ, ತಕ್ಷಣವೇ ಕಾಲುವೆ ದುರಸ್ತಿ ಮಾಡಿ ನೀರು ಹರಿಸುವ ಮೂಲಕ ರೈತರ ಹಿತ ಕಾಪಾಡಬೇಕೆಂದು ಒಕ್ಕೊರಲಿನಿಂದ ಒತ್ತಾಯಿಸಿದರು. ಭರವಸೆ ನೀಡಿದಂತೆ ಮೂರು ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ರೈತರು ಎಚ್ಚರಿಸಿದರು.

Share
Related Articles
ಸುದ್ದಿ

ಗಂಗಾವತಿಯ ಶ್ರೀ ಕೊಲ್ಲಿ ನಾಗೇಶ್ವರ ಗಂಗಯ್ಯ ಪ್ರ. ದರ್ಜೆ ಕಾಲೇಜು ತಂಡಕ್ಕೆ ಪ್ರಥಮ ಸ್ಥಾನದ ಗೆಲುವು.

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.  ಗವಿಸಿದ್ದೇಶ್ವರ ಕಾಲೇಜಿಗೆ ದ್ವಿತೀಯ ಸ್ಥಾನ.ಅಂತರಕಾಲೇಜು ವಾಲಿಬಾಲ್ ಪಂದ್ಯಾವಳಿಯ ಯಶಸ್ಸಿಗೆ ಶ್ರೀರಾಮನಗರದ ಜನತೆಯ...

ಸುದ್ದಿ

ಹಿಮಾಲಯದ ತಪ್ಪಲಿನಿಂದ ತುಂಗಭದ್ರಾ ತೀರಕ್ಕೆ ಮಾದಕ ನಶೆ! ಸಾಣಾಪುರದಲ್ಲಿ 16 ಲಕ್ಷದ ಚರಸ್ ವಶ, ಮೂವರು ಅಂದರ್.

        ಮರ್ಚೆಡ್ ಡೇಸ್ ಸುದ್ದಿ|ಕೊಪ್ಪಳ. ಕೊಪ್ಪಳ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ...

ಸಂಪಾದಕೀಯಸುದ್ದಿ

ಮಕ್ಕಳ ಹಿತದ ಜೊತೆಗೆ ಬಿಸಿಯೂಟ ನೌಕರರ ಬದುಕೂ ಉಳಿಯಲಿ: ಏಕಾಏಕಿ ಕ್ಲಸ್ಟರ್ ಕಿಚನ್ ಬೇಡ, ಮೊದಲು ಪರೀಕ್ಷೆಯಾಗಲಿ…

ಮರ್ಚೆಡ್ ಡೇಸ್ | ಸಂಪಾದಕೀಯ. ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವುದು ಸರ್ಕಾರದ ಸಾಮಾಜಿಕ ಹೊಣೆಗಾರಿಕೆ. ಸರ್ಕಾರಿ...

ಸುದ್ದಿ

ಸಾರಥಿಯ ಸಣ್ಣ ತಲೆಸುತ್ತು; ನೂರೆಂಟು ಜೀವಗಳ ಆತಂಕದ ಕ್ಷಣ – ವಾಣಿಜ್ಯ ಸಂಕೀರ್ಣಕ್ಕೆ ನುಗ್ಗಿದ ಬಸ್!

ಮರ್ಚೆಡ್ ಡೇಸ್ ಸುದ್ದಿ. ಬಳ್ಳಾರಿ ಸಿಟಿ ಬಸ್ ನಿಲ್ದಾಣದ ಬಳಿ ದಿಢೀರ್ ಅವಘಡ; ಕ್ಷಣಾರ್ಧದಲ್ಲಿ ಉಸಿರು...